Header Ads Widget

ಕಲಾಭಿವ್ಯಕ್ತಿಯಲ್ಲಿ ಔಚಿತ್ಯ ಪ್ರಜ್ಞೆ ಬಹಳ ಮುಖ್ಯ - ಶ್ರೀ ಹರಿನಾರಾಯಣದಾಸ ಅಸ್ರಣ್ಣ

ಭರತ ನಾಟ್ಯಶಾಸ್ತ್ರದಲ್ಲಿ ಹೇಳಿದ ಆಂಗಿಕ, ವಾಚಿಕ, ಸಾತ್ವಿಕ, ಆಹಾರ್ಯ ಈ ನಾಲ್ಕು ಅಂಗಗಳನ್ನು ಹೊಂದಿರುವ ಯಕ್ಷಗಾನ ಒಂದು ಪರಿಪೂರ್ಣ ಕಲಾಪ್ರಕಾರ. ಇದರ ಸ್ಪಷ್ಟವಾದ ತಿಳುವಳಿಕೆ ಯಕ್ಷಗಾನ ಕಲಾವಿದನಿಗಿರಬೇಕು. ಔಚಿತ್ಯ ಪ್ರಜ್ಞೆ ಇಲ್ಲದಿದ್ದರೆ ಅಪಸವ್ಯಗಳು ಆಗುವ ಸಾಧ್ಯತೆಯಿದೆ. ಕಲಾವಿದರಿಗೆ ಈ ಅರಿವನ್ನು ಮೂಡಿಸುವ ಕಾರ್ಯಗಾರ ಶಿಬಿರಗಳು ನಿರಂತರ ನಡೆಯುತ್ತಿರಬೇಕು ಎಂದು ಕಟೀಲು ದೇವಳದ ಆನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ಹೇಳಿದರು. ಅವರು  01.07.2025ರಂದು ಉಡುಪಿಯ ಯಕ್ಷಗಾನ ಕಲಾರಂಗ ವೃತ್ತಿ ಮೇಳದ ಕಲಾವಿದರಿಗಾಗಿ ಆಯೋಜಿಸಿದ ನಾಲ್ಕು ದಿನಗಳ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’ವನ್ನು ಉದ್ಘಾಟಿಸಿ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಬಿರದ ಪ್ರಾಯೋಜಕರಾದ ಎಂ. ಗಂಗಾಧರ ರಾವ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಕಲಾಪೋಷಕ ಶ್ರೀ ಪಣಂಬೂರು ವಾಸುದೇವ ಐತಾಳರು ಅಭ್ಯಾಗತರಾಗಿ ಭಾಗವಹಿಸಿ ಯಕ್ಷಗಾನ ಕಲಾರಂಗ ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜಮುಖಿಯಾಗಿ ಸ್ಪಷ್ಟ ಚಿಂತನೆಯೊಂದಿಗೆ ಸಾಗುತ್ತಿದೆ. ಈ ಸಂಸ್ಥೆಯೊಂದಿಗೆ ಸಹಕರಿಸುತ್ತಾ ಸಂತೋಷ ಅನುಭವಿಸಿದ್ದೇನೆ ಎಂದು ಸಂಸ್ಥೆಯ ಕಾರ್ಯಕರ್ತರಿಗೆ ಅಭಿನಂದನೆ ಹೇಳಿದರು. ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಇಂತಹ ಶಿಬಿರಗಳು ಕಲಾವಿದ ಬೆಳೆಯುವುದಕ್ಕೆ ಕಾರಣವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ, ಪೆನ್‍ಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಶಿಬಿರದ ನಿರ್ದೇಶಕರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಉಮೇಶ್ ಶೆಟ್ಟಿ ಉಬರಡ್ಕ, ಪವನ್ ಕಿರಣ್‍ಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ವಾನ್ ಗಣಪತಿ ಭಟ್ಟರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ ಸ್ವಾಗತಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾಪ್ರಸಾದ್ ವಂದಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು