Header Ads Widget

ಮಾರ್ಪಳ್ಳಿ: ವಿವಿಧ ತಳಿಗಳ ಗಿಡಗಳ ವಿತರಣಾ ಕಾರ್ಯಕ್ರಮ

 


ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವತಿಯಿಂದ ಉಚಿತವಾಗಿ ವಿವಿಧ ತಳಿಗಳ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಉಮಾಮಹೇಶ್ವರ ಸಭಾ ಭವನದಲ್ಲಿ ರವಿವಾರ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ‌ ಉದ್ಘಾಟಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಡು ಈಗ ನಾಡಾಗಿ ಪರಿವರ್ತನೆ ಆಗುತ್ತಿದೆ, ಅದರಂತೆ ಉದ್ಯಾವರ, ಅಲೆವೂರು, ಆತ್ರಾಡಿ, 80  ಬಡಗಬೆಟ್ಟು ಗ್ರಾಮಗಳು ಮಹಾನಗರ ಪಾಲಿಕೆಯಾಗಿ ಶೀಘ್ರವೇ ಘೋಷಣೆಯಾಗುತ್ತದೆ. ಆಗ ನಗರದ ಜನತೆಗೆ ಕುಡಿಯುವ ನೀರು, ಹೆಚ್ಚಿನ ಅನುದಾನ ಈ ಭಾಗಕ್ಕೆ ಬರುತ್ತದೆ ಎಂದರು. 


ಈಗಾಗಲೇ ರಾಜ್ಯದ ಗ್ರಾಮೀಣಾಭಿವೃದ್ಧಿ ‌ಇಲಾಖೆ, ಹಣಕಾಸಿನ ಇಲಾಖೆ ಮಹಾನಗರ ಪಾಲಿಕೆ ಆಗುವ ಬಗ್ಗೆ ಅನುಮೋದನೆ ನೀಡಿದೆ, ರಾಜ್ಯ ಸರಕಾರದ ವಿಶೇಷ ಅಧಿವೇಶನದಲ್ಲಿ ಘೋಷಣೆ ಒಂದೇ ಬಾಕಿ ಎಂದು ತಿಳಿಸಿದರು. ಪ್ರಕೃತಿ ಇದ್ದರೆ ಮನುಷ್ಯ ಜೀವಿಸಲು ಸಾಧ್ಯ, ಪ್ರತಿಯೊಂದು ಸಂದರ್ಭದಲ್ಲಿ ಪ್ರಕೃತಿ ನಮ್ಮ ಜೊತೆ ಇರುತ್ತದೆ, ನಾವು ಅದನ್ನು ರಕ್ಷಿಸುವ ಕೆಲಸ ಮಾಡಬೇಕೆಂದರು.


ಸಮಾರಂಭದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಂಬಳ ಮನೆ ದಿನೇಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕಟಪಾಡಿ, ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಜಿಲ್ಲಾ ಕೃಷಿಕ‌ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ, ತ್ರಿಶಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಗೋಪಾಲ ಕೃಷ್ಣ ರಾವ್, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಪ್ರತ್ಯಕ್ಷ ಕಾಮತ್, ಸ್ಥಳೀಯ ಗ್ರಾಮ  ಪಂಚಾಯತ್ ಸದಸ್ಯ ಸುಧಾಕರ್ ಪೂಜಾರಿ, ಶಂಕರ್ ಜಿ.ದೇವಾಡಿಗ ಮಾರ್ಪಳ್ಳಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ್ ಸುವರ್ಣ , ಪಾಂಡುರಂಗ ನಾಯ್ಕ್, ಉಮೇಶ್ ಮಾರ್ಪಳ್ಳಿ, ಶಂಕರ ಆಚಾರ್ಯ, ಚಂದ್ರಾವತಿ, ಅರ್ಚಕ ಅನಂತ ಉಪಾಧ್ಯ, ಉಪಸ್ಥಿತರಿದ್ದರು. ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿ, ವಿಜಯಲಕ್ಷ್ಮಿ ಎಂ ವಂದಿಸಿದರೆ, ವಿಷ್ಣುಮೂರ್ತಿ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು