Header Ads Widget

ವೈದ್ಯರಿಗೆ ವೈದ್ಯಿಕೆ ~ಡಾ.ರಾಜಲಕ್ಷ್ಮಿ

ಜುಲೈ 1 ರಾಷ್ಟ್ರೀಯ ವೈದ್ಯರ ದಿನ ಹಿರಿಯ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ. ಬಿಧಾನ ಚಂದ್ರರಾಯ್ ಅವರ ಜನ್ಮದಿನವನ್ನು ಭಾರತದಾದ್ಯಂತ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ ವೈದ್ಯರುಗಳ ನಿಸ್ವಾರ್ಥ ಸೇವೆಯನ್ನ ಗುರುತಿಸಿ ಗೌರವಿಸುವ ದಿನವಿದು. ಈ ವರ್ಷದ ವೈದ್ಯರ ದಿನದ ಧ್ಯೇಯವಾಕ್ಯ ಮಾಸ್ಕ್ ನ ಹಿಂದಿನ ವೈದ್ಯರಿಗೆ ಯಾರು ವೈದ್ಯರು?

Behind the mask Who heals the healers? ಎಂಬುದಾಗಿದೆ. ವೈದ್ಯರೆಲ್ಲರೂ ಜೊತೆಗೆ ಜನಸಾಮಾನ್ಯರೂ ಕ್ಷಣಕಾಲ ಚಿಂತಿಸಬೇಕಾದ ಮಹತ್ತರವಾದ ಪ್ರಶ್ನೆ.

ವೈದ್ಯರು ಜನಸಾಮಾನ್ಯರ ಆರೋಗ್ಯ ರಕ್ಷಣೆ ಮಾಡುವವರು ಜನರ ನೋವು ,ವ್ಯಥೆ, ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಆರೋಗ್ಯಯುತ ಬದುಕಿಗೆ ದಾರಿ ತೋರುವವರು ಆದರೆ ಇತರರಿಗೆ ಆರೋಗ್ಯದೀಪ ತೋರಿಸುವ ವೈದ್ಯರ ದಾರಿ ಬೆಳಕು ಯಾರು ? ಅವರ ನೋವು ಬವಣೆಗಳನ್ನು ಕೇಳುವವರಾರು ಅವರ ಆರೈಕೆ ಮಾಡುವವರಾರು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಲ್ಲಿ ಈ ವರ್ಷದ ಧ್ಯೇಯ ವಾಕ್ಯ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಸದಾಕಾಲ ವೈದ್ಯರು ತಮ್ಮ ಕೌಟುಂಬಿಕ ವೈಯಕ್ತಿಕ ಸುಖ, ಶುಭ ಚಿಂತನೆಗಳನ್ನು ಬದಿಗಿರಿಸಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ರಕ್ಷಣೆಗಾಗಿ ಕಂಕಣ ತೊಟ್ಟಿರುತ್ತಾರೆ ಮಾಸ್ಕ್ ನ ಮುಂದಿರುವ ನಗುಮೊಗದ ಹಿಂದೆ ಅಡಗಿರುವ ಕಷ್ಟಕಾರ್ಪಣ್ಯ ನೋವು ವೇದನೆ ಸುಲಭವಾಗಿ ಕಾಣ ಬರುವುದಿಲ್ಲ ವೈದ್ಯರಿಗೂ ಮಾನಸಿಕ ದೈಹಿಕ ಸಮಸ್ಯೆಗಳಿರುತ್ತವೆ ನಿರ್ದಿಷ್ಟ ಸಮಯವಿಲ್ಲದ ಕೆಲಸ, ತೀವ್ರ ಒತ್ತಡ, ಆಹಾರ ಮತ್ತು ನಿದ್ದೆಗಳ ಕೊರತೆ, ಕೆಲವೊಮ್ಮೆ ರೋಗಿಯ ಅಸಹಾಯಕತೆಯನ್ನು ಕಂಡು ಮರುಗುವ ಸಹೃದಯಿ ಕರುಣೆ ಮುಂತಾದ ಕಾರಣಗಳಿಂದ ವೈದ್ಯರುಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತರಾಗುತ್ತಾರೆ ವೈದ್ಯರುಗಳಿಗೆ ಸಮರ್ಪಕ ವಿಶ್ರಾಂತಿ, ಮಾನಸಿಕ ಸ್ಥೈರ್ಯ , ಸಾಮಾಜಿಕ ಬೆಂಬಲ ಹಾಗೂ ಗೌರವವನ್ನು ನೀಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ವೈದ್ಯರುಗಳಿಗೆ ಸುರಕ್ಷಿತ ಉದ್ಯೋಗ ಸ್ಥಳಗಳನ್ನು ನಿರ್ಮಿಸಿ, ಸಮಂಜಸವಾದ ಕೆಲಸದ ವೇಳಾಪಟ್ಟಿ ರಚಿಸಿ, ಕೆಲಸದ ಸಮಯವನ್ನು ನಿಗದಿಗೊಳಿಸುವುದು ಸರಕಾರ ಹಾಗೂ ಸಮಾಜ ವೈದ್ಯರ ಆರೋಗ್ಯ ಕಾಳಜಿಯ ಬಗ್ಗೆ ನಡೆಸುವ ಚಿಂತನೆಯ ಭಾಗವಾಗಬೇಕು. ಆರೋಗ್ಯ ವ್ಯವಸ್ಥೆಗಳನ್ನು ಉತ್ತಮ ಸ್ತರಕ್ಕೇರಿಸಿ ಬಲವರ್ಧನೆ ಮಾಡಿ ವೈದ್ಯರ ಮೇಲಿನ ಹೊಣೆ ಕಡಿಮೆಯಾಗುವಂತೆ ನೋಡಿ ಕೊಳ್ಳಬೇಕು ವೈದ್ಯರಿಗೆ ವಿಶ್ರಾಂತಿ ಹಾಗೂ ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ಕಲ್ಪಿಸಿ ಕೊಡುವುದು ಸಮಾಜದ ಜವಾಬ್ದಾರಿಯಾಗಬೇಕು. ವೈದ್ಯರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಿ ಕಾಳಜಿ ತೋರಿದಾಗ ಮಾಸ್ಕ್ ನ ಹಿಂದಿನ ವೈದ್ಯರು ನೆಮ್ಮದಿಯ ಬಾಳು ನಡೆಸುವಂತಾಗುತ್ತದೆ.

ಮಾಸ್ಕಿನ ಹಿಂದೆ ಇರುವವರು ನಮ್ಮಂತೆಯೇ ಸರಳ ಮಾನವರು, ಎದುರಿಗಿರುವವರ ಕಣ್ಣೀರು ಒರೆಸುವವರು, ನೋವ ಮರೆಸುವವರು, ಬದುಕಿನಲ್ಲಿ ಭರವಸೆಯ ಮೂಡಿಸುವವರು,,; ಆ ವೈದ್ಯರಿಗೂ ನಮ್ಮಂತೆಯೇ ಅದೇ ನೋವು, ಅದೇ ದುಃಖ, ಅದೇ ಅಶಕ್ತತೆ, ಅದೇ ಅಶಾಂತಿ ಇರುತ್ತದೆ ಎಂಬ ಸತ್ಯದ ಅರಿವಿರಬೇಕು. ಸಮಾಜವು ವೈದ್ಯರನ್ನು ಕೇವಲ ಸೇವಾ ಯಂತ್ರಗಳಾಗಿ ನೋಡದೆ, ಧನ್ಯತಾ ಭಾವದಿಂದ, ನಗುಮೊಗದ, ನಿಖರವಾದ ಸಮಯಕ್ಕೆ ಬರುವ ಅಭಿಮಾನ ತೋರಿದರೇ, ಈ ಸಣ್ಣ ಸಂಗತಿಗಳೇ ವೈದ್ಯರ ಹೃದಯಕ್ಕೆ ಮಹಾ ಔಷಧ.

 ವೈದ್ಯರ ಆಯಸ್ಸು ಸಾಮಾನ್ಯ ನಾಗರಿಕರಿಗಿಂತ 10 ವರ್ಷಗಳಷ್ಟು ಕಡಿಮೆ ಎಂದು ವೈಜ್ಞಾನಿಕ ವಿಶ್ಲೇಷಣೆಗಳು ಹೇಳುತ್ತವೆ ವೈದ್ಯರ ಒತ್ತಡದ ದಿನಚರಿ, ಅಸಮರ್ಪಕ ಆಹಾರ ಸೇವನೆ, ಹಾಗೂ ನಿದ್ದೆಯ ಕೊರತೆ ಆಯುಷ್ಯ ಕುಂಠಿತವಾಗಲು ಪ್ರಮುಖ ಕಾರಣಗಳಾಗಿವೆ . ವೈದ್ಯರು ತಮ್ಮ ಸ್ವಯಂ ಆರೈಕೆ ಬಗ್ಗೆ ಜಾಗೃತ ರಾಗಬೇಕು , ನಿರ್ಲಕ್ಷ್ಯ ಸಲ್ಲದು. 

  ತಮ್ಮ ಸಹ ವೈದ್ಯರನ್ನು ಭೇಟಿಯಾದಾಗಲೆಲ್ಲ ನೀವು ಹೇಗಿದ್ದೀರಿ? ಎಂದು ವಿಚಾರಿಸುವ ಸಹೃದಯಿ ಮನಸ್ಸು ವೈದ್ಯರದಾಗಬೇಕು. ನಾವು ಮನುಜರು, ನಮಗೂ ವಿಶ್ರಾಂತಿ ನೆಮ್ಮದಿಯ ಅಗತ್ಯವಿದೆ ಎಂದು ನೆನಪಿರಬೇಕು. ಮುಂದೊಂದು ದಿನ ತಮ್ಮ ಆರೋಗ್ಯ ಹದಗೆಟ್ಟಾಗ ಜೊತೆಗಿರುವವರು ಪತಿ-ಪತ್ನಿ ಮಕ್ಕಳು ಕೌಟುಂಬಿಕರು ಎಂದು ಅರ್ಥೈಸಿಕೊಂಡು ಅವರಿಗಾಗಿ ಸಮಯವನ್ನು ಮೀಸಲಿಡುವುದು ವೈದ್ಯರ ದಿನಚರಿಯ ಅಂಗವಾಗಬೇಕು.

ವೈದ್ಯರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ರೋಗಿಗಳಿಗೆ ಉಪದೇಶಿಸುವಂತೆ ವೈದ್ಯರೂ ವರ್ಷಕ್ಕೊಮ್ಮೆ ತಮ್ಮ ಆರೋಗ್ಯದ ತಪಾಸಣೆ ನಡೆಸಿಕೊಳ್ಳಬೇಕು. ದುರಭ್ಯಾಸಗಳಿಂದ ಮಾರು ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ತಮ್ಮದಾಗಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ, ಹಿತಮಿತ ವ್ಯಾಯಾಮ, ಲಘು ವಿಶ್ರಾಂತಿ, ನೆಮ್ಮದಿಯ ನಿದ್ರೆಯನ್ನು ದಿನಚರಿಯಲ್ಲಿ ರೂಡಿಸಿಕೊಳ್ಳಬೇಕು. ಕುಟುಂಬದ ಸದಸ್ಯರೊಂದಿಗೆ ಮೌಲ್ಯಯುತ ಸಮಯವನ್ನು ಕಳೆಯಬೇಕು. ಮಾನಸಿಕ ಆರೋಗ್ಯದ ಕುರಿತು ಮುಕ್ತವಾಗಿ ಸಂಭಾಷಣೆ ನಡೆಸಬೇಕು. ಸೃಜನಾತ್ಮಕ ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಕೃತಿಯೊಂದಿಗೆ ಸಮಯ ಕಳೆಯುವುದನ್ನು ತಮ್ಮ ದಿನಚರಿಯ ಅಂಗವಾಗಿಸಬೇಕು.

ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇಬರೇ, ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರಿ಼ ಎಂದರೆ ದೇಹ ದುರ್ಬಲವಾದಾಗ, ಶರೀರ ಕಾಯಿಲೆಯಿಂದ ಬಳಲುವಾಗ, ಗಂಗಾಜಲ ಔಷಧಿಯಂತೆ, ವೈದ್ಯನು ದೇವರಂತೆ ಸಲಹುತ್ತಾನೆ ಎಂಬುದು ಸಂಸ್ಕೃತ ಶ್ಲೋಕದ ಭಾಗ. ವೈದ್ಯರು ದೇವರ ಸ್ವರೂಪ ಎಂಬರ್ಥದಲ್ಲಿರುವ ಈ ಶ್ಲೋಕ ಜನಸಾಮಾನ್ಯರಲ್ಲಿ ವೈದ್ಯರ ಕುರಿತು ಗೌರವಾದರಗಳನ್ನು ಹೆಚ್ಚಿಸುವುದರೊಂದಿಗೆ ವೈದ್ಯರ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಜನರು ದೇವರಂತೆ ಕಂಡರೂ ನಾವು ದೇವರಲ್ಲ, ಹುಲು ಮಾನವರು; ನಮ್ಮ ಸಾಮರ್ಥ್ಯಕ್ಕೂ, ವೈದ್ಯಕೀಯ ವಿಜ್ಞಾನಕ್ಕೂ ಒಂದು ಮಿತಿ ಇದೆ ಎಂಬ ಸತ್ಯವನ್ನು ವೈದ್ಯರು ಅರಿತಿರಬೇಕು. ಹಲವರ ಬಾಳಿನ ಆಶಾಕಿರಣವಾಗುವ ವೈದ್ಯರು ತಮ್ಮ ಬಾಳಿನಲ್ಲಿ ಯಶಸ್ಸು ಸುಖ ಶಾಂತಿ, ನೆಮ್ಮದಿಯನ್ನು ಕಾಣಲು ಸ್ವತಹ ತಮ್ಮ ಆರೈಕೆಯನ್ನು ಮಾಡಿಕೊಳ್ಳಬೇಕು. ಜೊತೆಗೆ ಸಮಾಜ ವೈದ್ಯರುಗಳ ಮೇಲೆ ಅಗಾಧ ನಿರೀಕ್ಷೆಗಳ ಹೊರೆಯನ್ನು ಹೊರಿಸುವಾಗ ಜಾಗರೂಕರಾಗಿರಬೇಕು. ವೈದ್ಯರುಗಳಿಗೂ ಸಹಾನುಭೂತಿ, ಆಸರೆ ಬೆಂಬಲ ಅಗತ್ಯ ಎನ್ನುವುದನ್ನು ಮನಗಾಣಬೇಕು..


~ಡಾ.ರಾಜಲಕ್ಷ್ಮಿ

ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು 

ಸದಸ್ಯರು, ಸಾಮಾಜಿಕ ಆರೋಗ್ಯ ಉಪಸಮಿತಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ 

ಕಾರ್ಯದರ್ಶಿ, ಸಾಮಾಜಿಕ ಆರೋಗ್ಯ ಅರಿವು ಸಮಿತಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರ ಸಂಘ ಕರ್ನಾಟಕ ರಾಜ್ಯ ಶಾಖೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು