Header Ads Widget

ಮಿಚಿಗನ್ ನ ಭಾರತೀಯ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಆಗಸ್ಟ್ 24, 2025 ಭಾನುವಾರದಂದು ಮಿಚಿಗನ್ ನ ಭಾರತೀಯ ದೇವಸ್ಥಾನದಲ್ಲಿ ಮಿಚಿಗನ್ ರಾಜ್ಯದಲ್ಲಿ ವಾಸ ಮಾಡುತ್ತಿರುವ ಕನ್ನಡಿಗರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಈ ಪ್ರಯುಕ್ತ ನಮ್ಮವರೆಲ್ಲ ಒಟ್ಟು ಸೇರಿ ಪ್ರಸಾದವನ್ನು ಖುದ್ದಾಗಿ ತಾವೇ ತಯಾರಿಸಿ, ಸುಮಾರು 1000 ಜನರಿಗೆ ಉಣಬಡಿಸಲಾಯಿತು. 2 ವರ್ಷದ ಹಿಂದೆ ನಮ್ಮನ್ನಗಲಿದ ನಗರಿ ಶ್ರೀರಂಗ ಆಚಾರ್ ಅವರು 4 ವರ್ಷದ ಹಿಂದೆ ಈ ಜನ್ಮಾಷ್ಟಮಿ ಆಚರಣೆಗೆ ಅಡಿಪಾಯ ಹಾಕಿದ್ದರು. ಅವರನ್ನು ಕಾರ್ಯಕ್ರಮದ ಸಂಧರ್ಭದಲ್ಲಿ ಸ್ಮರಣೆ ಮಾಡಿಕೊಳ್ಳಾಯಿತು. ಕಾರ್ಯಕ್ರಮದ ಮುಖ್ಯ ಸಂಯೋಜಕರಲ್ಲಿ ಒಬ್ಬರಾದ ವೆಂಕಟೇಶ್ ಹರನಹಳ್ಳಿ ಅವರು ಇಂತಹ ಕಾರ್ಯಕ್ರಮಗಳನ್ನು ನಾವು ದೇವಸ್ಥಾನದಲ್ಲಿ ಮಾಡುವುದರಿಂದ ನಮ್ಮವರನ್ನೆಲ್ಲ ಒಗ್ಗೂಡಿಸುವುದು ಮಾತ್ರವಲ್ಲದೆ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಕಲೆಗಳ ಬಗ್ಗೆ ಮುಂದಿನ ಜನಾಂಗಕ್ಕೆ ಆಸಕ್ತಿಯ ಒಟ್ಟಿಗೆ ಆಚರಿಸುವ ಬಗ್ಗೆ ಮಾಹಿತಿ ಒದಗಿಸಿದಂತಾಗುತ್ತದೆ ಎಂದು ತಮ್ಮ ಸ್ವಾಗತ ಭಾಷಣದಲ್ಲಿ ತಿಳಿಸಿದರು.    

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಮತ್ತು ಮಹಿಳೆಯರಿಂದ ಕೃಷ್ಣನ ಭಜನೆ, ಮಿಚಿಗನ್ ನ ಭರತನಾಟ್ಯ ಟೀಚರ್ ನವರ ನೇತೃತ್ವದಲ್ಲಿ ಶ್ರೀ ಕೃಷ್ಣ ಲೀಲಾ ಎಂಬ ನಾಟ್ಯ ಬಹಳ ಸೊಗಸಾಗಿ ಮೂಡಿಬಂತು. ಕರ್ನಾಟಕದ ಗಂಡುಕಲೆ ಎಂದೇ ಪ್ರಸಿದ್ದವಾದ "ಸುಭದ್ರ ಕಲ್ಯಾಣ" ಎಂಬ ಯಕ್ಷಗಾನವನ್ನು, ಯಕ್ಷಹೆಜ್ಜೆಯ ಗುರುಗಳಾದ ಡಾ ರಾಜೇಂದ್ರ ಕೆದ್ಲಾಯ ಅವರ ಸಾರಥ್ಯದಲ್ಲಿ ಮಿಚಿಗನ್ ಯಕ್ಷಗಾನ ಸಂಘದ ಸಹಕಾರದೊಂದಿಗೆ ಪ್ರದರ್ಶಿಸಲಾಯಿತು. ಸುಮಾರು 400ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮವನ್ನು ವೀಕ್ಷಿಸಿದರು. 

ಈ ಸಂದರ್ಭದಲ್ಲಿ ವೆಂಕಟೇಶ್ ಹರನಹಳ್ಳಿ, ಪ್ರಶಾಂತ ಕುಮಾರ್ ಮಟ್ಟು, ಬಸ್ಸಯ್ಯ ಕಲಾಲ್, ಮೋಹನ್ ಪ್ರಭಾಕರ್, ರವೀಶ್ ಚಂದ್ರಶೇಖರ್, ಧನ್ಯವಾಣಿ ರಾವ್, ಪ್ರಶಾಂತ್ ಕಟ್ಟಿ, ಮೇಧಿನಿ ಕಟ್ಟಿ, ಸಂಧ್ಯಾ ನಗರಿ ಆಚಾರ್, ನಾಗ ಬತಾಲ, ರಾಘವೇಂದ್ರ ಕುಲಕರ್ಣಿ, ಸೀತಾರಾಮ್ ಐತಾಳ್, ಗೀತಾ ಮೋಹಾನ್, ಶ್ರೀಕಲಾ ರಾಕೇಶರಾಮ್ , ರಾಕೇಶ್, ಪಲ್ಲವಿ ರಾವ್, ಶಕುಂತಳಾ ಕಲಾಲ್, ಶೈಲಾ, ಅನಿಲ್ ಭಟ್, ಪೂರ್ಣಿಮಾ ಅರ್ಜುನ್, ಸ್ವಾತಿ, ಮನೋಜ್, ರಮೇಶ್, ವೆಂಕಟೇಶ್ ಪೊಳಲಿ, ಸುಚಿತ್ರ, ಗುರುರಾಜ್, ಶ್ರೀರಂಗ, ಆದಿತ್ಯ, ಲೀಲಾ ಎಸ್ ಪಾಪರೆಡ್ಡಿ, ವಿವೇಕ್ ರೆಡ್ಡಿ, ಧ್ರುವ, ನವೀನ, ರಿತ್ವಿಕ್, ಅನಂತ್, ರವಿ ಸೀತಾರಾಮ್, ವೀರಣ್ಣ, ಅಂಕಿತ ಹೀಗೆ ಹಲವಾರು ಮಂದಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. 

ಮಕ್ಕಳಾಗಿ ತುಂಟತನ, ಯುವಕನಾಗಿ ವೀರತ್ವ, ಕಳ್ಳರಿಗೆ ಕಳ್ಳ, ಒಬ್ಬ ಮಿತ್ರ ಹೇಗಿರಬೇಕು, ಗುರುವಾದವರು ಹೇಗಿರಬೇಕು, ಸೇವಕನಾಗಿ ಹೇಗೆ ಸೇವೆಯನ್ನು ಮಾಡಬೇಕು ಈ ರೀತಿಯಾಗಿ ಎಲ್ಲ ಆಯಾಮಗಳಲ್ಲಿಯೂ ಪರಿಪೂರ್ಣತೆಯನ್ನು ಪ್ರತಿಬಿಂಬಿಸಿದವನು ಶ್ರೀ ಕೃಷ್ಣ. ಇಂತಹ ದೇವನ ಜನ್ಮಾಷ್ಟಮಿಯನ್ನು ನಾವು ಆಚರಿಸುತ್ತ ಬಂದಲ್ಲಿ ನಮ್ಮ ಜೀವನವು ಪರಿಪೂರ್ಣವಾಗಲು ಭಗವಂತ ಶಕ್ತಿಯನ್ನು ನೀಡುತ್ತಾನೆ ಎಂಬ ಮಹಾದಾಸೆಯೊಂದಿಗೆ ವರ್ಷ ವರ್ಷವೂ ಇಂತಹ ಕಾರ್ಯಕ್ರಮವನ್ನು ನಡೆಸೋಣ, ನಮ್ಮ ಮಿಚಿಗನ್ ಕನ್ನಡಿಗರ ಸಹಕಾರ ಇದೆ ರೀತಿ ಮುಂದುವರಿಯಲಿ ಎಂಬ ಆಶಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು