"ಲಕ್ಷಯತಿ ಪಶ್ಯತಿ ಭಕ್ತಜನಾನ್ ಇತಿ ಲಕ್ಷ್ಮೀ".
ಇದು ಲಕ್ಷ್ಮೀ ಶಬ್ದದ ವ್ಯುತ್ಪತ್ತಿ. ಉಪಾಸಕರನ್ನು ಕೃಪಾಕಟಾಕ್ಷದಿಂದ ವೀಕ್ಷಿಸುವವಳೇ ಲಕ್ಷ್ಮೀ. 'ಶ್ರೀ' ಎಂಬುದು ಲಕ್ಷ್ಮೀಯ ನಾಮಾಂತರ. ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯ, ಕಮಲ, ಬಿಲ್ವವೃಕ್ಷ ಮುಂತಾದುವು ಶ್ರೀ ಶಬ್ದಕ್ಕಿರುವ ಹಲವು ಅರ್ಥಗಳು. ಸಂಪತ್ತು ಎಂಬುದು ಸಾಮಾನ್ಯ ಅರ್ಥವಾದರೂ ಐಶ್ವರ್ಯವೆಂಬುದು ಪ್ರಧಾನವಾದ ಅರ್ಥ ಅಥವಾ ಸಾಮಾನ್ಯ ಒಪ್ಪಿಗೆ - ತಿಳಿವಳಿಕೆ. ಈಶ್ಚರಸ್ಯ ಭಾವಃ ಐಶ್ವರ್ಯಂ.
ಪರಮಾತ್ಮನ ಅನುಗ್ರಹಕಾರಕವಾದ ಗುಣ ವಿಶೇಷವೇ 'ಶ್ರೀ'. ಲಕ್ಷ್ಮೀ ಸಮುದ್ರ ಮಥನದಲ್ಲಿ ಹುಟ್ಟಿದಳು. ನಾರಾಯಣನನ್ನು ವರಿಸಿ ತಾನು ಮಹಾಲಕ್ಷ್ಮೀಯಾದಳು. ನಾರಾಯಣನು ಲಕ್ಷ್ಮೀನಾರಾಯಣನಾದ, ಶ್ರೀಮನ್ನಾರಾಯಣನಾದ. ಸ್ಥಿತಿಕರ್ತನಾದ-ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ, ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ ಲಕ್ಷ್ಮೀ ಬಹುಮಾನ್ಯಳಾದಳು. ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ. ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು, ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ .ಆದಿನದಂದು ಲಕ್ಷ್ಮೀಯನ್ನು ವರಗಳನ್ನು ಕೊಡುವವಳು ಅಥವಾ ಅನುಗ್ರಹಿಸುವವಳು ಎಂಬ ಅನುಸಂಧಾನದೊಂದಿಗೆ ವರಮಹಾಲಕ್ಷ್ಮೀಯನ್ನಾಗಿ ಪರಿಕಲ್ಪಸಿಕೊಂಡು ಆರಾಧಿಸುವುದು.
ಕಟ್ಟು, ಕಟ್ಟಳೆ, ನಿಯಮ, ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ, ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ 'ವರಮಹಾಲಕ್ಷ್ಮೀವ್ರತ'. ನಾರಾಯಣ - ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು. ಪರಶುರಾಮನಾದಾಗ ಈಕೆ ಭೂದೇವಿ. ರಾಮಾವತಾರದಲ್ಲಿ ಸೀತಾದೇವಿ. ಕೃಷ್ಣಾವತಾರದಲ್ಲಿ ರುಕ್ಮಿಣಿ. ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ. ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ. ಈ ಲಕ್ಷ್ಮೀ ಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ ತಿರುಪತಿ- ಶ್ರೀಪತಿ, ಭೂವೈಕುಂಠ.
ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ ಶ್ರೀಸೂಕ್ತದ ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ, ಜೊತೆಯಲ್ಲೇ ಇರುವ ಶ್ರೀ ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು, ರೂಪಗಳನ್ನು ವರ್ಣಿಸುತ್ತದೆ.
ಲಕ್ಷ್ಮೀಯು ಚತುರ್ಭಾಹುವುಳ್ಳವಳ್ಳವಳು:
ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು. ಕೆಳಗಿನ ಕೈಗಳಿಂದ ವರದ ಮತ್ತು ಅಭಯ ಮುದ್ರೆಗಳನ್ನು ತೋರಿಸುತ್ತಿರುವವಳು. ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು. ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯ ದಯಪಾಲಿಸುವವಳು. ಆದುದರಿಂದ ಜನಪ್ರಿಯಳು, ಅದೇ ತಾನೇ ಬಹುಮಾನ್ಯತೆ.
• ಕೆ.ಎಲ್.ಕುಂಡಂತಾಯ
0 ಕಾಮೆಂಟ್‌ಗಳು