Header Ads Widget

ಕಲಾರಸಿಕರನ್ನು ರಂಜಿಸಿದ ಸಂಗೀತ - ನೃತ್ಯ ಸಂಭ್ರಮ

ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ಉಡುಪ ಸಂಗೀತ ‘ ಸಂಭ್ರಮ’ ಹಬ್ಬ ಮುದ ನೀಡಿತು. ರಾಜಧಾನಿಯ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಿನಪೂರ್ಣ ಸಂಗೀತ - ನೃತ್ಯ ಸಮಾರಾಧನೆ ಅದಮ್ಯ ಆನಂದವನ್ನು ನೀಡುವಲ್ಲಿ ಪಾರಮ್ಯ ಮೆರೆಯಿತು.

ರಾಜ್ಯದ 24 ಅತ್ಯುತ್ತಮ ಯುವ ಕಲಾವಿದರ ತಂಡವು ವಿಶೇಷ ತಾಳವಾದ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವ ಮೂಲಕ ಬೆಳಗಿನ ಮೊದಲ ಅವಧಿಯ ಸಂಭ್ರಮಕ್ಕೆ ಮುನ್ನುಡಿ ಬರೆಯಿತು. ಪ್ರಖ್ಯಾತ ವಿದ್ವಾಂಸರಾದ ಸೋಮಶೇಖರ್ ಜೋಯಿಸ್, ಅನಿರುದ್ಧ ಭಟ್, ಅದಮ್ಯ ರಮಾನಂದ ಅವರ ನೇತೃತ್ವದಲ್ಲಿ ವಿವಿಧ ವಾದ್ಯಗಳ ಮೇಳವು ಕಲಾ ರಸಿಕರ ಮನದಲ್ಲಿ ಅನುರಣಿಸಿದವು. ನಂತರ ಮೇರು ಕಲಾವಿದ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಹಾಡುಗಾರಿಕೆ (ಕರ್ನಾಟಕ ಶಾಸ್ತ್ರೀಯ ಸಂಗೀತ) ಮನೋಜ್ಞವಾಗಿತ್ತು.

ಪಿಟೀಲಿನಲ್ಲಿ ವಿದುಷಿ ಚಾರುಲತಾ ರಾಮಾನುಜಂ, ಮೃದಂಗದಲ್ಲಿ ವಿದ್ವಾನ್ ಎಚ್. ಎಸ್. ಸುಧೀಂದ್ರ, ಘಟಂನಲ್ಲಿ ವಿದ್ವಾನ್ ಓಂಕಾರ್ ಹಾಗೂ ಮೋರ್ಸಿಂಗ್‌ನಲ್ಲಿ ವಿದ್ವಾನ್ ಎಸ್. ವಿ. ಗಿರಿಧರ ಅವರ ಪಕ್ಕವಾದ್ಯ ಸಹಕಾರವು ನೆರೆದಿದ್ದ ಸಂಗೀತಾಸಕ್ತರನ್ನು ಕಲಾ ಲೋಕದಲ್ಲಿ ಮಿಂದೇಳಿಸಿತು. ವಿದ್ವಾನ್‌ಪದ್ಮನಾಭ ಅವರು ತಮ್ಮ ವಿಶೇಷವಾದ ಪಲ್ಲವಿಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಯುಕ್ತಿ ಉಡುಪರಿಂದ ನಾಟ್ಯ ರಂಜನೆ: ಸಂಜೆ 5ಕ್ಕೆ ಭಾರತದ ಪಾರಂಪರಿಕ ಹೆಗ್ಗಳಿಕೆಗಳಲ್ಲಿ ಒಂದಾದಂತಹ ಭರತನಾಟ್ಯವನ್ನು ಪ್ರೇಕ್ಷಕರಿಗಾಗಿ ಉಣಬಡಿಸಲಾಯಿತು. ಕುಂದಾಪುರ ಮೂಲದ ಯುವ ಪ್ರತಿಭೆ ಯುಕ್ತಿ ಉಡುಪ ಅವರು ತಮ್ಮ ಪ್ರತಿಭೆ ಹಾಗೂ ಬದ್ಧತೆಯು ಕಲಿಕೆಯನ್ನು ಪಡಮೂಡಿಸಿದರು. ಕ್ರಿಯಾಶೀಲ ನರ್ತಕಿ ನೀಡುವ ಪ್ರಸ್ತುತಿ ಹೇಗಿರಬೇಕು ಎಂಬುದಕ್ಕೆ ಅವರ ಕಾರ್ಯಕ್ರಮ ಮಾದರಿಯಾಗಿತ್ತು.

ವಿದ್ವತ್ ಪೂರ್ಣ ಅಭಿನಯ: ರಾಮಕಥಾ, ದ್ವಾರಂ ಮುಂತಾದ ವಿಭಿನ್ನ, ವಿಶೇಷ ಪ್ರಸ್ತುತಿಗಳಿಂದ ಕಲಾ ಕೋವಿದರ ಮನದಂಗಳದಲ್ಲಿ ಮನೆ ಮಾಡಿದ ವಿಶ್ವ ವಿಖ್ಯಾತ ಕಲಾವಿದ ವಿದ್ವಾನ್ ಸತ್ಯನಾರಾಯಣ ರಾಜು ಅವರು ತಮ್ಮ ವಿದ್ವತ್ ಪೂರ್ಣ ನೃತ್ಯ ಅಭಿನಯ ತೋರಿ ತುಂಬಿದ ಸಭೆಯನ್ನು ಮಂತ್ರಮುಗ್ಧ ಗೊಳಿಸಿದರು. ಚಪ್ಪಾಳೆ ಸುರಿಮಳೆ ಮತ್ತು ಪ್ರಶಂಸೆಗಳು ಅವರ ಪ್ರೌಢಿಮೆಗೆ ಸಾಕ್ಷಿಯಾಗಿದ್ದವು.

ನಂತರ ಗುರುವಾಯೂರು ಮೂಲದ ವಿದುಷಿ ಮೀರಾ ನಾರಾಯಣ್ ಅವರ ಭರತನಾಟ್ಯದ ಉತ್ಕೃಷ್ಠ ಪ್ರದರ್ಶನ ಪ್ರೇಕ್ಷಕರ ಮನದಂಗಳದಲ್ಲಿ ಭಾವೋತ್ಕರ್ಷ ಮೂಡಿಸಿತು. ಸಂಗೀತ- ನೃತ್ಯ ಹಬ್ಬಕ್ಕೆ ಇವರು ಮಾಡಿದ ಮಂಗಳ ಬಹುಕಾಲ ಕಲಾಭಿಮಾನಿಗಳ ಹೃದಯದಲ್ಲಿ ಮನೆಮಾಡುವಂತಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು