ದೈಹಿಕ ರೋಗಗಳನ್ನು ವಾಸಿ ಮಾಡುವ ವೈದ್ಯನೋರ್ವ ಮಾನಸಿಕ ಚಿಕಿತ್ಸಕನಾಗಿ, ರೋಗಿಗಳಿಗೆ ಆಪ್ತನಾಗಿ, ವೈದ್ಯಕೀಯ ವೃತ್ತಿಯನ್ನು ಒಂದು ರೀತಿಯ ತಪಸ್ಸಿನಂತೆ ನಡೆಸಿಕೊಂಡು ಬರುತ್ತಿರುವ ರೀತಿಯನ್ನು ಡಾ. ವಾಯ್ ಎನ್ ಇರಕಲ್ ಇವರ ಸಾರ್ಥಕ ಜೀವಿ ಡಾ. ಇರಕಲ್ (80 ವಸಂತಗಳ ಇಣುಕು ನೋಟ) ಈ ಒಂದು ಕೃತಿಯಲ್ಲಿ ಕಾಣಬಹುದು. ತಮ್ಮ ಪತ್ನಿ ದಿ. ಪುಷ್ಪಾವತಿ ಇರಕಲ್ ರವರಿಗೆ ಸಮರ್ಪಿಸಿದ ಹಾಗೂ ಶ್ರೀ ವೀರೇಶ ಜಾಲಿಕಟ್ಟಿ ಸಂಪಾದಿತ ಈ ಕೃತಿಗೆ ಮುನ್ನುಡಿಯನ್ನು ಧಾರವಾಡದ ಹಿರಿಯ ಪ್ರಸಿದ್ಧ ಸಾಹಿತಿಗಳಾದ ಡಾ. ಎಸ್ ಆರ್ ಗುಂಜಾಳರವರು ಬರೆದಿದ್ದು ಬೆನ್ನುಡಿಯಲ್ಲಿ ಧಾರವಾಡದ ಪ್ರಸಿದ್ಧ ವೈದ್ಯರಾದ ಡಾ.ರಾಜನ್ ದೇಶಪಾಂಡೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.ಧಾರವಾಡದ ಜುಬಿಲಿ ವೃತ್ತದಲ್ಲಿ ಭವ್ಯವಾದ ಶ್ರೀಯಾ ಹಾಸ್ಪಿಟಲ್ ನ್ನು ನಿರ್ಮಿಸಿ ಸದಾಕಾಲ ರೋಗಿಗಳ ಆರೋಗ್ಯ ಹಾಗೂ ನೆಮ್ಮದಿಗೆ ವಿಶೇಷ ಕಾಳಜಿ ತೋರಿ ಆರೋಗ್ಯ ಸೇವೆಯನ್ನು ತನ್ನ ಜೀವನದ ಧ್ಯೇಯವಾಗಿಸಿಕೊಂಡಿರುವ ಡಾ ಯಲ್ಲನಸಾ ಇರಕಲ್ ರವರು ತಮ್ಮ 80 ವರ್ಷಗಳ ಸಾರ್ಥಕ ಬದುಕಿನಲ್ಲಿ ತಾವು ಕಂಡುಕೊಂಡ ಜೀವನ ಸತ್ಯ ಹಾಗೂ ಬದುಕಿನ ವಿವಿಧ ಮಜಲುಗಳ ವೈವಿಧ್ಯತೆಗೆ ಅಕ್ಷರ ರೂಪ ನೀಡಿದ್ದು ಈ ಒಂದು ಕೃತಿ ಸಾರಸ್ವತ ಲೋಕಕ್ಕೆ ಒಂದು ಕೊಡುಗೆಯಾಗಿದೆ.ಪ್ಲಾಸ್ಟಿಕ್ ಸರ್ಜರಿಯಲ್ಲಿ ಅಪೂರ್ವ ಪ್ರಾವೀಣ್ಯತೆ ಪಡೆದಿರುವ ಶ್ರೀಯುತರು ಪ್ಲಾಸ್ಟಿಕ್ ಸರ್ಜರಿಯ ಕುರಿತಾಗಿ ಕನ್ನಡದಲ್ಲಿ ಒಂದು ಕೃತಿಯನ್ನು ಕೂಡ ಬರೆದಿದ್ದಾರೆ. ಮೂಲವ್ಯಾಧಿ ಚಿಕಿತ್ಸೆಯಲ್ಲಿ ಹೆಸರುವಾಸಿಯಾಗಿರುವ ಡಾ.ಇರಕಲ್ ರವರು ವೈದ್ಯ ವೃತ್ತಿ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡು ಸಾರ್ಥಕ ಬದುಕನ್ನು ಮುಂದುವರಿಸುತ್ತಿದ್ದಾರೆ.
ಆತ್ಮ ಸಾಕ್ಷಿಯಾಗಿ ವೈದ್ಯ ವೃತ್ತಿಯನ್ನು ಮುಂದುವರೆಸುತ್ತ ರೋಗಿಗಳ ಸಮಸ್ಯೆಗೆ ಸ್ಪಂದಿಸುವ ಗುಣ ಹೊಂದಿದ್ದು ಸಹನೆ ತಾಳ್ಮೆಯಿಂದ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಹಾಗೂ ರೋಗಿಗಳ ಆರೈಕೆಗೆ ಪ್ರಥಮ ಆದ್ಯತೆ ನೀಡಿ ವೈದ್ಯ ವೃತ್ತಿಯಲ್ಲಿ ಸಾರ್ಥಕತೆ ಪಡೆದಿರುವ ಇವರು ಡಾ ವಾಯ್ ಎನ್ ಇರಕಲ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಸಮಾಜ ಸೇವೆಯಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ..
ತನ್ನ ಹಿರಿಯರ ಹಾಗೂ ಕುಟುಂಬದ ಉದ್ಯೋಗ ನೇಕಾರಿಕೆ ಆಗಿದ್ಯಾಗೂ ಅಜ್ಜ ವಿಠಲಸ ಹಾಗೂ ತಂದೆ ನಾರಾಯಣಸಾ, ತಾಯಿ ಚಂದ್ರಬಾಯಿ ಯವರ ಸಂಪೂರ್ಣ ಪ್ರೋತ್ಸಾಹ, ಸ್ಫೂರ್ತಿ ಹಾಗೂ ಮಾರ್ಗದರ್ಶನ ಇವರನ್ನು ವೈದ್ಯರಾಗಲು ಪ್ರೇರೇಪಿಸಿತು. ಹುಬ್ಬಳ್ಳಿಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿ ತಾನು ಸಮಾಜಕ್ಕೆ ಏನನ್ನಾದರೂ ನೀಡಬೇಕೆಂಬ ಉದ್ದೇಶದಿಂದ ವೈದ್ಯ ವೃತ್ತಿಯನ್ನು ಆರಿಸಿಕೊಂಡು ಹುಬ್ಬಳ್ಳಿಯ ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿಯ ನಂತರ ಸ್ನಾತಕೋತ್ತರ ಪದವಿಯನ್ನು ಪಡೆದು ಜೀವನದಲ್ಲಿ ವೈದ್ಯನಾಗಬೇಕೆಂದು ತಾನು ಕಂಡ ಕನಸನ್ನು ನನಸು ಮಾಡಿಕೊಂಡವರು ಇವರು.
ತನ್ನ ಬಾಲ್ಯ ಮತ್ತು ಶಿಕ್ಷಣವನ್ನು ವಿವರಿಸುತ್ತ ಲೇಖಕರು ತಮ್ಮ ಅಜ್ಜ, ಮಾತಾ ಪಿತರ ಬಗ್ಗೆ ಅಭಿಮಾನ ಪೂರ್ವಕವಾಗಿ ಮಾತನಾಡುತ್ತಾ ಉಳಿತಾಯವು ಗಳಿಕೆಗೆ ಸಮಾನ ಎಂಬ ತಂದೆಯ ಮಾತನ್ನು ಹಾಗೂ ತಾನು ವೈದ್ಯನಾದಾಗ ತನ್ನ ಮಾತೆಗೆ ಆದ ಆನಂದ ಹಾಗೂ ಹೆಮ್ಮೆಯ ಅನುಭೂತಿಯನ್ನು ಸಂತಸದಿಂದ ಹಂಚಿಕೊಂಡಿದ್ದಾರೆ. ತನ್ನ ವೈದ್ಯಕೀಯ ಶಿಕ್ಷಣದ ಬಗ್ಗೆ ವಿವರಿಸುತ್ತಾ ತನ್ನ ಗುರು ಡಾ. ಆರ್ ಎನ್ ಎಚ್ ಶೆಣೈ ಯವರ ಮಾರ್ಗದರ್ಶನವನ್ನು ನೆನಪಿಸಿಕೊಳ್ಳುತ್ತಾ ದಾಂಡೇಲಿಯ ಸರಕಾರಿ ಆಸ್ಪತ್ರೆಯಲ್ಲಿ ಮುಖ್ಯ ಸರ್ಜನ್ ಆಗಿ, ಹುಬ್ಬಳ್ಳಿಯಲ್ಲಿ ನರ್ಸಿಂಗ್ ಹೋಮ್ ಆರಂಭಿಸಿದ ದಿನಗಳ ಬಗ್ಗೆ ತಮ್ಮ ನೆನಪಿನ ಬುತ್ತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು ಕಿರಿಯ ವೈದ್ಯ ವಿದ್ಯಾರ್ಥಿಗಳಿಗೆ ಇವರ ಅನುಭವಗಳ ಸರಮಾಲೆ ಒಂದು ರೀತಿಯ ಪಾಠವೆಂದು ಹೇಳಬಹುದು. ತಮ್ಮ ವೃತ್ತಿ ಜೀವನ ಹಾಗೂ ವಯಕ್ತಿಕ ಬದುಕಿನ ಬಗ್ಗೆ ವಿವರಿಸುತ್ತಾ ವೈದ್ಯ ವೃತ್ತಿ ಜೀವನದಲ್ಲಿ ಅಗತ್ಯವಾದ ಸಿಬ್ಬಂದಿಗಳ ಅಕ್ಕರೆ, ಪ್ರೀತಿ, ರೋಗಿಗಳ ವಿಶ್ವಾಸ, ಅವರ ಮನೆ ಮಂದಿಯ ಆತ್ಮೀಯತೆಯನ್ನು ಸಂಪಾದಿಸುತ್ತಾ ಸಾಧನೆಯ ಮೆಟ್ಟಿಲೇರಿದ ಪರಿ ಎಲ್ಲರಿಗೂ ಆದರ್ಶ. ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕಿನಲ್ಲಿ ಯಶಸ್ಸಿನ ವರಮಾಲೆಯೊಂದಿಗೆ ಜೀವನ ಪಯಣದಲ್ಲಿ ಸಾಥ್ ನೀಡಿದ ಜೀವನ ಸಂಗಾತಿ ಶ್ರೀಮತಿ ಪುಷ್ಪಾವತಿ ಅವರನ್ನು, ಅವರ ಸರಳ ನಡೆನುಡಿ, ತ್ಯಾಗ ಮನೋಭಾವ, ಜವಾಬ್ದಾರಿಯುತವಾಗಿ ಮನೆ ಹಾಗೂ ಮನೆಮಂದಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ರೀತಿಯನ್ನು ಮನಸಾರೆ ಕೊಂಡಾಡಿದ್ದಾರೆ. ತಮ್ಮ ವಿದ್ಯಾವಂತ ಮಕ್ಕಳು ಜೀವನದಲ್ಲಿ ಯಶಸ್ಸಿನ ಪಥದಲ್ಲಿ ನಡೆದಾಗ ಜೀವನದ ಸಾರ್ಥಕತೆ ಅನುಭವಿಸಿದವರು ಇವರು. ತನ್ನ ಯಶಸ್ವಿ ವೈದ್ಯಕೀಯ ವೃತ್ತಿಯ ಅನುಭವದಿಂದ ದಾಂಡೇಲಿ ಮಾತ್ರವಲ್ಲದೆ ಸುತ್ತಲಿನ ಊರುಗಳಾದ ಅಳ್ನಾವರ, ಹಳಿಯಾಳ, ಕುಮಟಾ, ಹೊನ್ನಾವರ, ಭಟ್ಕಳ ಮತ್ತು ಕಾರವಾರ ಕಡೆಯಿಂದ ಬರುತ್ತಿದ್ದ ಹಲವಾರು ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಿ ಮನೆಮಾತಾದವರು. ತಮ್ಮ ವಿದೇಶ ಭೇಟಿಯ ಅನುಭವ ಮತ್ತು ಕುಟುಂಬದ ಬಗ್ಗೆ ಬರೆಯುತ್ತಾ ತಮ್ಮ ಮಗಳು ಸುರೇಖಾ ಹಾಗೂ ಅಳಿಯ ಮಹೇಶ್,ಮೊಮ್ಮಕ್ಕಳಾದ ಈಶಾನ್ ಕುಶಾಲ್ ರವರೊಂದಿಗೆ ಅಮೆರಿಕದಲ್ಲಿನ ಕಳೆದ ಸಂತಸದ ಕ್ಷಣಗಳನ್ನು, ಅನುಭವಗಳನ್ನು ಚಂದದ ಅಕ್ಷರ ಮಾಲೆಯಲ್ಲಿ ಪೋಣಿಸಿದ್ದಾರೆ.
ಹಾಗೆಯೇ ಆಸ್ಪತ್ರೆ ಮತ್ತು ಬರವಣಿಗೆ ಬೆಳೆದು ಬಂದ ಬಗೆಯನ್ನು ವಿವರಿಸುತ್ತಾ ತನ್ನ ಬರವಣಿಗೆಗೆ ಕಾರಣರಾದ ಹಾಗೂ ಕನ್ನಡದಲ್ಲಿ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಬರೆದ ಕೃತಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯ ಪುಸ್ತಕದಲ್ಲಿ ಪ್ರಕಟವಾಗಲು ಕಾರಣರಾದ ಡಾ ಎಸ್ ಆರ್ ಗುಂಜಾಳರವನ್ನು ನೆನಪಿಸಿಕೊಂಡಿದ್ದಾರೆ..ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂದು ದೃಢವಾಗಿ ನಂಬುವ ಇವರು ತಿನ್ನುವ ಆಹಾರದ ಪ್ರಮಾಣ ಕಡಿಮೆ ಮಾಡಿ ವ್ಯಾಯಾಮ ಜಾಸ್ತಿ ಮಾಡುವುದು ಅಗತ್ಯ ಎಂದೆನ್ನುತ್ತಾ ಯೋಗಾಭ್ಯಾಸವನ್ನು ನಿತ್ಯ ನಿರಂತರ ತಪಸ್ಸಿನಂತೆ ಮಾಡುತ್ತಾ ಬಂದಿದ್ದು ಜೀವ ಹಾಗೂ ಜೀವನದಲ್ಲಿ ಲವಲವಿಕೆ ಉಳಿಸಿಕೊಂಡ ಗುಟ್ಟು ರಟ್ಟು ಮಾಡಿದ್ದಾರೆ. ಕೋವಿಡ್ ವ್ಯಾಪಾರವೆಂಬ ಉಪ ಕಾಯಿಲೆಯಿಂದ ಆಗಿರುವ ಅನಾಹುತಗಳನ್ನು ಹಾಗೂ ಕೋವಿಡ್ ಸಮಯದಲ್ಲಿ ಆದ ಲಾಭಗಳನ್ನು ವಿವರಿಸುತ್ತ ಕರೋನ ಸಂಕಟ ಕಾಲದ ಸಿಹಿ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.ಸುಧೀರ್ಘ ಮೂವತ್ತೈದು ವರ್ಷಗಳಿಂದ ಜನರಿಗೆ ನಿರಂತರವಾಗಿ ಉತ್ತಮ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ನೀಡುತ್ತಾ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಬಂದಿರುವ ಶ್ರೀಯಾ ಆಸ್ಪತ್ರೆಯು ಡಾಕ್ಟರ್ ಯಲ್ಲನಸಾ ಇರಕಲ್ಲರ ಕನಸಿನ ಕೂಸು. ಸುಸಜ್ಜಿತ ಶ್ರೀಯಾ ಆಸ್ಪತ್ರೆಯ ಭಾಗವಾಗಿ, ಶ್ರೀಯಾ ನರ್ಸಿಂಗ್ ಹೋಮ್ ಕೂಡಾ ಹಲವಾರು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಭಾಷ್ಯ ಬರೆದು ಸೈ ಅನಿಸಿಕೊಂಡಿದೆ. 80ರ ಹರೆಯದಲ್ಲೂ ತಮ್ಮ ಪುತ್ರ ಡಾ. ಸತೀಶ ಹಾಗೂ ಸೊಸೆ ಡಾ. ವಾಣಿಯವರ ಜೊತೆ ಸೇರಿಕೊಂಡು ಧಾರವಾಡ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಪ್ಲಾಸ್ಟಿಕ್ ಸರ್ಜರಿ ಮತ್ತು ಪೈಲ್ಸ್ (ಮೂಲವ್ಯಾಧಿ)ಚಿಕಿತ್ಸೆಯಲ್ಲಿ ಪ್ರಸಿದ್ಧ ರಾಗಿರುವ ಡಾ ಇರಕಲ್ ರವರ 80 ವರುಷದ ಸಂಭ್ರಮದಲ್ಲಿ ಲೋಕಾರ್ಪಣೆಗೊಂಡ "ಸಾರ್ಥಕ ಜೀವಿ ಡಾ. ಇರಕಲ್ " ಕೃತಿಯಲ್ಲಿ ಅವರ 80 ವಸಂತ ಇಣುಕು ನೋಟಕ್ಕೆ ಅಕ್ಷರ ಮಾಲೆಯೊಂದಿಗೆ ಅಪೂರ್ವ ಛಾಯಾಚಿತ್ರಗಳ ತೋರಣ ಹಾಗೂ ಗಣ್ಯರ ಮತ್ತು ಅವರ ಅಭಿಮಾನಿಗಳ, ವಿದ್ಯಾರ್ಥಿಗಳ, ಸಹಪಾಠಿಗಳ ಶುಭಾಶಯಗಳ ಅಲಂಕರಣ ಮೆರುಗು ತಂದಿದ್ದು ಈ ಕೃತಿ ಸಂಗ್ರಹ ಯೋಗ್ಯವಾಗಿದ್ದು ಡಾ.ಇರಕಲ್ ರವರಿಗೆ ಇನ್ನಷ್ಟು ಆಯಸ್ಸು, ಆನಂದ, ಆರೋಗ್ಯದ ಶುಭ ಹಾರೈಕೆಗಳು..
~ಪೂರ್ಣಿಮಾ ಜನಾರ್ದನ್ ಕೊಡವೂರು
0 ಕಾಮೆಂಟ್‌ಗಳು