Header Ads Widget

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರ 142ನೆಯ ಜನ್ಮದಿನೋತ್ಸವ

ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಕಟ್ಟಡಕ್ಕೆ ಸ್ಥಳವನ್ನು ನೀಡಿ ಕಟ್ಟಡದ ನಿರ್ಮಾಣದ ಉಸ್ತುವಾರಿಯನ್ನು ವಹಿಸಿ ಕೊಂಡು, ಮುಂದೆಯೂ ಪರಿಷತ್ತಿನ ಬೆಳವಣಿಗೆಯಲ್ಲಿ ಸದಾ ಆಸಕ್ತಿ ಹೊಂದಿದವರು ಸರ್ ಮಿರ್ಜಾ ಇಸ್ಮಾಯಿಲ್ , ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ತನ್ನ ಆಧಾರ ಸ್ತಂಭಗಳಲ್ಲೊಬ್ಬರಾಗಿ ಸದಾ ಸ್ಮರಿಸುತ್ತದೆ. ಅವರ ಅವಧಿಯಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಮನ್ನಣೆಯನ್ನು ಪಡೆದಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ 142ನೆಯ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಜೊತೆಗಾರಿಕೆಯ ಅವಧಿ “ಮೈಸೂರು ಸಂಸ್ಥಾನದ ಸ್ವರ್ಣಕಾಲ” ಎಂದು ಬಣ್ಣಿತವಾಗಿದೆ. ವಿಭಿನ್ನ ಧರ್ಮಗಳ ನೆಲೆಯಿಂದ ಬಂದು ಸೋದರರಂತೆ ಒಂದುಗೂಡಿ ಕೆಲಸ ಮಾಡಿದ ಈ ಈರ್ವರ ಜೊತೆಗಾರಿಕೆಯನ್ನು ಮೆಚ್ಚಿ ಇದೋ ಇಲ್ಲಿದೆ ‘ರಾಮರಾಜ್ಯ’ ಎಂದು ಮಹಾತ್ಮ ಗಾಂಧೀಜಿ ಕೈತೋರಿದರು ಎಂಬುದನ್ನು ಸ್ಮರಿಸಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ದುಂಡುಮೇಜಿನ ಪರಿಷತ್ತೆಂದು ಕರೆಯಲಾಗುತ್ತಿದ್ದ ಅಂದಿನ ದಿನಗಳ ಸಭೆಯೊಂದರಲ್ಲಿ ಲಾರ್ಡ್ ಸ್ಯಾಂಕಿ ಅವರು ಮೈಸೂರನ್ನು “ವಿಶ್ವದಲ್ಲೇ ಅತ್ಯಂತ ಶ್ರೇಷ್ಟ ಆಡಳಿತಾತ್ಮಕ ನಗರ” ಎಂದು ಬಣ್ಣಿಸಿದರು. ಇದರಿಂದಾಗಿ ಭಾರತದ ವಿವಿಧ ಸಂಸ್ಥಾನಗಳಲ್ಲಿದ್ದ ರಾಜಕುವರರಿಗೆ ಮೈಸೂರಿನಲ್ಲಿ ಆಡಳಿತಾತ್ಮಕ ತರಬೇತಿ ವ್ಯವಸ್ಥೆ ಏರ್ಪಾಡು ಮಾಡಲಾಗಿತ್ತು ಎಂದು ಹೇಳಿದರು

ತಮ್ಮ ಹೃದಾಯಾಂತರಾಳದಲ್ಲಿ ಮೈಸೂರು ರಾಜ್ಯದ ಬಗ್ಗೆ ಅಪಾರ ಪ್ರೇಮ ತುಂಬಿಕೊಂಡಿದ್ದ ಮಿರ್ಜಾ ಇಸ್ಮಾಯಿಲ್ಲರು ರಾಜ್ಯದೆಲ್ಲೆಡೆ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದನ್ನು ಪ್ರೋತ್ಸಾಹಿಸಿದರು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಸರ ಮಿರ್ಜಾ ಇಸ್ಮಾಯಿಲ್ ಅವರ ಆಡಳಿತಾವಧಿಯಲ್ಲಿ ಸರ್ವರಿಗೂ ಸಮಾನತೆಯ ನಿಷ್ಪಕ್ಷಪಾತವಾದ ಆಡಳಿತವನ್ನು ರೂಢಿಯಲ್ಲಿರಿಸಿದ್ದರು. ಬೆಂಗಳೂರು ನಗರಕ್ಕೆ ಆಧುನೀಕರಣದ ಸಕಲ ಸೌಭಾಗ್ಯಗಳನ್ನು ಮೂಡಿಸುವುದರಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ಲರ ಶ್ರಮ ಪ್ರಮುಖ ಪಾತ್ರ ನಿರ್ವಹಿಸಿತು. ಸರ್ ಮಿರ್ಜಾ ಇಸ್ಮಾಯಿಲ್ಲರು ಮೈಸೂರು ಸಂಸ್ಥಾನವನ್ನು ಸುಂದರವಾಗಿಸಲು ಕೈಗೊಂಡ ಅಸಂಖ್ಯಾತ ಕಾರ್ಯಗಳಲ್ಲಿ ಎದ್ದು ಕಾಣುವಂತದ್ದು ‘ಕೃಷ್ಣರಾಜ ಸಾಗರದ ಬೃಂದಾವನ’. ಇಲ್ಲಿನ ಉದ್ಯಾನವನ, ವೈವಿಧ್ಯದ ನೀರಿನ ಕಾರಂಜಿಗಳು, ವಿದ್ಯುದ್ಧೀಕರಣಗಳ ಸೊಬಗು ವಿಶ್ವದೆಲ್ಲೆಡೆ ಮೈಸೂರಿನ ಕೀರ್ತಿಯನ್ನು ಬೆಳಗಿಸಲು ಮತ್ತಷ್ಟು ಪ್ರೇರಕವಾಯಿತು ಎಂದು ಅವರ ಮಹತ್ವನ್ನು ವರ್ಣಿಸಿದರು. 

ಭಾರತೀಯ ವಿಜ್ಞಾನದಲ್ಲಿ ಪ್ರಮುಖ ಹೆಸರಾದ ರಾಮನ್ ಇನ್ಸ್ಟಿಟ್ಯೂಟ್ ನಿರ್ಮಾಣಕ್ಕಾಗಿ ಭಾರತೀಯ ವಿಜ್ಞಾನ ಅಕಾಡಮಿಗೆ ಹನ್ನೆರಡು ಎಕರೆಗಳ ಭೂಮಿಯನ್ನು ಮಹಾರಾಜರಿಂದ ಒದಗುವಂತೆ ಮಾಡಿದ್ದು ಸರ್ ಮಿರ್ಜಾ ಇಸ್ಮಾಯಿಲ್ಲರು ಮಾಡಿದ ಮತ್ತೊಂದು ಶ್ರೇಷ್ಠ ಕೆಲಸ ಎಂದ ನಾಡೋಜ ಡಾ.ಮಹೇಶ ಜೋಶಿಯವರು ಬೆಂಗಳೂರು ನಗರದಲ್ಲಿ ಉತ್ಕೃಷ್ಟ ರೀತಿಯ ಉದ್ಯಾನವನಗಳು ಮತ್ತು ಸಸ್ಯರಾಶಿಯನ್ನು ನಿರ್ಮಿಸಲು ವಿಶ್ವದೆಲ್ಲೆಡೆಯಿಂದ ಉತ್ಕೃಷ್ಟ ಚಿಂತಕರನ್ನು ಒಂದುಗೂಡಿಸಿ ಇಲ್ಲಿನ ಮರಗಳು ವರ್ಷವಿಡೀ ಹಸುರಾಗಿರುವಂತೆಯೂ, ವಿವಿಧ ರೀತಿಯಲ್ಲಿ ಎಲ್ಲ ಕಾಲದಲ್ಲೂ ವರ್ಣಾಲಂಕಾರದ ಪುಷ್ಪಗಳಿಂದ ಕಂಗೊಳಿಸುವಂತೆಯೂ ಕ್ರಮ ಕೈಗೊಂಡರು. ಬೆಂಗಳೂರು, ಮೈಸೂರುಗಳಿಗೆ “ಉದ್ಯಾನವನಗಳ ನಗರ” ಎಂದು ಹೆಸರು ಬರುವಂತೆ ಮಾಡಿದರು ಎಂದು ಅವರ ಮಹತ್ವವನ್ನು ವರ್ಣಿಸಿದರು. 

 ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ.ಪಟೇಲ್ ಪಾಂಡು, ಗೌರವ ಕೋಶಾಧ್ಯಕ್ಷರಾದ ಡಿ.ಆರ್.ವಿಜಯ ಕುಮಾರ್ ಮತ್ತು ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. 


~ಎನ್.ಎಸ್.ಶ್ರೀಧರ ಮೂರ್ತಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು