ದೀಪ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಎಲ್ರಿಗೂ ಇಷ್ಟಾನೇ... ಹೌದೋ ಅಲ್ವೋ .. ಯಾಕಂದ್ರೆ ದೀಪದ ಮನಸ್ನಲ್ಲಿ ಯಾವುದೇ ಕಪಟ ಇಲ್ಲ. ಅದೊಂದು ಮುಗ್ದತೆಯ ದ್ಯೋತಕ. ಹಾಗಾಗಿ ಅದು ಎಲ್ರನ್ನ ಆಕರ್ಷಿಸ್ತದೆ. ಹಾಂ..ಅದ್ರ ಒಂದು ದೊಡ್ಡ ಕೆಲ್ಸ ಅಂದ್ರೆ ಬೇರೆಯವರಿಗೆ ದಾರಿ ತೋರ್ಸುದು. ತನ್ನನ್ನು ನೋಡುವವರ ಮನಸ್ಸಿಗೆ ಶಾಂತಿ, ಖುಷಿ ಕೊಡೋದು. ನೀವು ಯಾರು ? ನೀವು ಏನು? ಎಲ್ಲಿಯವರು? ಯಾವ ಜಾತಿ? ಅಂತ ಎಲ್ಲ ನೋಡದೆ ಸಾತ್ವಿಕ ದೃಷ್ಟಿಯಲ್ಲಿ ನಿಮ್ಮನ್ನ ನೋಡ್ಲಿಕ್ಕೆ ನಿಮ್ಮನ್ನ ಅರಿತು ಕೊಳ್ಳಿಕ್ಕೆ ಸಹಾಯ ಮಾಡುವುದು ಈ ದೀಪದ ಕೆಲಸ. ನನ್ನ ಮುಖ ನೀವು ನಿಮ್ಮ ಮುಖ ನಾನು ನೋಡ್ಬೇಕಾದ್ರೆ ಈ ದೀಪದ ಬೆಳಕು ತಾನೇ ಬೇಕು..
ದೇವರನ್ನ ದೀಪದಲ್ಲಿ ಕಾಣ್ತಾರೆ. ನಮ್ಮ ಸೌರಮಂಡಲದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ತೇಜಃ ಪುಂಜ.. ಈ ದೀಪ. ದೀಪವನ್ನು ಜ್ಞಾನ ಅಂತಲೂ ಕರೀತಾರೆ. ಹಾಗಾಗಿ ನಾವು ದೀಪ ಆಗೋದ್ರಲ್ಲಿ ಜ್ಞಾನಿಗಳು ಅನ್ಸಿ ಕೊಳ್ಳೋದ್ರಲ್ಲಿ ಏನು ತಪ್ಪು?
ಎಣ್ಣೆ ಇದ್ದಷ್ಟು ಹೊತ್ತು ದೀಪ ಉರಿತದೆ. ಹಾಗೆಯೇ ನಮ್ಮೊಳಗೆ ಪ್ರಾಣವಾಯು ಇರುವಷ್ಟು ದಿನ ನಾವೂ ಉರೀತೇವೆ. ಇನ್ನು ಈ ದೀಪ ಆರುದಕ್ಕೂ ನಮ್ಮ ಪ್ರಾಣಪಕ್ಷಿ ಹಾರುದಕ್ಕೂ ಕಾರಣ ಆಗುದು ಈ ಗಾಳಿಯೇ...ಎಂತಹ ಸಾಮ್ಯತೆ ನೋಡಿ. ಆದ್ರೆ ಇದ್ದಷ್ಟು ದಿನ ಬೇರೆಯವರಿಗೆ ತನ್ನ ಸುತ್ತಮುತ್ತ ಇರುವವರಿಗೆ ಬೆಳಕು ಚೆಲ್ತಾ ಸುಂದರ ಜೀವನ ನಡೆಸೋದು ಅದ್ರ ಚಾಳಿ.. ಅದನ್ನು ನಾವೂನೂ ಬೆಳ್ಸಿಕೊಳ್ಳೋಣ ಅಲ್ವಾ... ನೀವೇನಂತೀರಿ! ಈ ದೀಪದ ಮೇಲೆ ಎಲ್ರಿಗೂ ಗೌರವ.. ಎಲ್ರೂ ಕೈ ಮುಗಿಯೋರು.. ನಾವೂ ಆಗೋಣ ಅಲ್ವಾ ಈ ದೀಪ. ನಮ್ಗೂ ಕೈ ಮುಗೀತಾರೆ. ಇದು ನಿಮ್ಗೆ ಗೊತ್ತಾ.. ದೀಪದಿಂದ ಎಷ್ಟೇ ದೀಪ ಹಚ್ಚಿದ್ರೂ ದೀಪದ ಶಕ್ತಿ ಕುಂದೋದೇ ಇಲ್ಲ. ಹಾಗೇನೇ ನಮ್ಮ ಈ ಜ್ಞಾನ ಅನ್ನೋ ದೀಪವನ್ನ ಹಚ್ಚೋದ್ರಿಂದ ಹಂಚೋದ್ರಿಂದ ನಮ್ಮ ಜ್ಞಾನದ ಶಕ್ತಿ ಖಂಡಿತಾ ಕುಂದೋದಿಲ್ಲ. ವೃದ್ದೀನೇ ಆಗುತ್ತೆ. ದೀಪ ಹಚ್ಚುದು ಅಂದ್ರೆ ಜ್ಞಾನ ಪಡೆಯುವುದು ಅಂತ ಅರ್ಥ. ಈ ಜಗತ್ತಿನಲ್ಲಿ ನಮ್ಮ ಕಣ್ಣಿಗೆ ಕಾಣುವ ವಿಸ್ಮಯ ಅಥವ ವಿಶೇಷ ವಸ್ತು ಅಂದ್ರೆ ದೀಪ / ಬೆಳಕು. ಅಂಧಾಕಾರವನ್ನು ಹೊಡೆದೋಡಿಸುವ ಈ ದೀಪದ ಸುತ್ತ ಇರುವ ಪ್ರಭಾ ವಲಯಗಳ ಹಾಗೇ ನಮ್ಮ ದೇಹದ ಸುತ್ತಲೂ ಅವ್ಯಕ್ತವಾದ ಪ್ರಭಾ ವಲಯಗಳು ಇವೆಯಂತೆ. ದೀಪವನ್ನು ನೀವು ಸರಿಯಾಗಿ ಗಮನಿಸಿದ್ರೆ ಅದರೊಳಗೆ ನೀಲಿ, ಕೇಸರಿ ಹಾಗೂ ಹಳದಿ ಬಣ್ಣ ಕಾಣಿಸ್ತದೆ. ನೀಲಿ ಭಕ್ತಿಯ ಸಂಕೇತ, ಕೇಸರಿ ಧರ್ಮದ ಸಂಕೇತ ಹಾಗೆಯೇ ಹಳದಿ ಜ್ಞಾನದ ಸಂಕೇತ. ಹಾಗಾಗಿ ಈ ದೀಪಗಳು ತನ್ನ ಸುತ್ತ ಸಾತ್ವಿಕ ತರಂಗಗಳನ್ನು ಹಬ್ಬುತ್ತವಂತೆ. ಈ ಗುಣಗಳನ್ನು ನಾವೂ ಅಳವಡಿಸಿಕೊಂಡಾಗ ನಾವೂ ಕೂಡ ದೀಪಗಳಾಗಲು ಸಾಧ್ಯವಿಲ್ವೇ...?
ಈ ಜ್ಯೋತಿ ದೇವರ ಗುಡಿಯಲ್ಲಿ - ಭಕ್ತರ ಮನೆಯಲ್ಲಿ ಮನಸ್ಸಿಗೆ ಮುದ ನೀಡುವ ನಂದಾದೀಪವಾದ್ರೆ ಅಮ್ಮನಿಗೆ ಅಡಿಗೆ ಮನೆಯಲ್ಲಿ ಒಲೆ ಉರಿಸೋ ಬೆಂಕಿ ಆಗಬಹುದು. ಅದೇ ತನ್ನನ್ನು ಕೆಣಕಲು ಪ್ರಹಾರ ಮಾಡಲು ಬಂದಾಗ ಶತ್ರುಗಳ ಪಾಲಿಗೆ ಅದೇ ದೀಪ ರೌದ್ರ ರೂಪ ತಾಳಿ ಕೊಳ್ಳಿ, ಬೆಂಕಿ, ಚಿತೆ ಅಥವಾ ಜ್ವಾಲೆ ಅಂತ ಅನ್ನಿಸಿಕೊಳ್ಳಬಹುದು. ಆದರೆ ಈಗ ಅದೆಲ್ಲದರ ಅಗತ್ಯ ನಮಗಿಲ್ಲ ... ಸಧ್ಯ ನಾವೆಲ್ಲ ನಮ್ಮಮನೆ, ನಮ್ಮ ಪರಿಸರ ಬೆಳಗುವ ನಂದಾ ದೀಪವಾಗೋಣ..
ಬನ್ನಿ ... ಒಂದಷ್ಟು ಜನರ ಬಾಳು ಬೆಳಗುವ... ನಾಡು ಬೆಳಗುವ.. ಕಾರ್ತಿಕ ದೀಪವಾಗುವ ...
ದೀಪ: ಜ್ಯೋತಿ ಪರಃ ಬ್ರಹ್ಮ | ದೀಪಃ ಸರ್ವತೋ ಮಪಃ ದೀಪೇನ ಸಾಧ್ಯತೇ ಸರ್ವಮ್ ಪ್ರಾತಃ/ ಸಂಧ್ಯಾ ದೀಪ ನಮೋಸ್ತುತೇ ||🪔🪔🪔🪔🪔🙏ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು
🖋️ *ರಾಜೇಶ್ ಭಟ್ ಪಣಿಯಾಡಿ* ಲೇಖನಿಯಿಂದ....🙏

0 ಕಾಮೆಂಟ್‌ಗಳು