ದ.ಕ. ಮೊಗವೀರ ಮಹಾಜನ ಸಂಘ ಆಡಳಿತಕ್ಕೊಳಪಟ್ಟ ಕರ್ನಾಟಕದ ಕೊಲ್ಹಾಪುರ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಚತುರ್ಥ ವರ್ಷದ ಉಡುಪಿ ಉಚ್ಚಿಲ ದಸರಾ ಸಂದರ್ಭದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿ ವಿಸರ್ಜನೆ ವೈಭವದ ಶೋಭಾಯಾತ್ರೆಗೆ ಗುರುವಾರ ಸಂಜೆ ದೇವಳದ ಆವರಣದಲ್ಲಿ ಚಾಲನೆ ನೀಡಲಾಯಿತು. ಮಹೋತ್ಸವದ ರೂವಾರಿ ಹಾಗೂ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ಮತ್ತು ಶಾಲಿನಿ ಜಿ.ಶಂಕರ್ ಹಾಗೂ ಗಣ್ಯರು ಆನೆ ಹೊತ್ತ ಅಂಬಾರಿ ಪ್ರತಿಕೃತಿಯಲ್ಲಿ ಮಂಡಿಸಿರುವ ಕ್ಷೇತ್ರದ ಅಧಿದೇವತೆ ಶ್ರೀ ಮಹಾಲಕ್ಷ್ಮಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅಪರಾಹ್ನ 3 ಗಂಟೆಗೆ ವಿಸರ್ಜನೆ ಪೂಜೆ ನಡೆಸಿದರು.
ಸೇವಾಕರ್ತರಿಗೆ ಮಹಾಪ್ರಸಾದ ವಿತರಣೆ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಸುಮಾರು 4 ಗಂಟೆಗೆ ದೇವಳದ ಗೋಪುರದ ಮುಂಭಾಗದಲ್ಲಿ ಅಂಬಾರಿ ಹೊತ್ತ ಆನೆಯ ಟ್ಯಾಬ್ಲೊಗೆ ಗಣ್ಯರು ಪುಷ್ಪಾರ್ಚನೆ ನಡೆಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಅಂಬಾರಿ ಹೊತ್ತ ಟ್ಯಾಬ್ಲೊ, ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಕ್ಕೆ ಡ್ರೋನ್ ಮೂಲಕ ನಡೆದ ಪುಷ್ಪಾರ್ಚನೆ ನೆರೆದ ಭಕ್ತರ ಕಣ್ಮನ ಸೆಳೆಯಿತು.
ವೈಭವದ ಶೋಭಾಯಾತ್ರೆ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಚ್ಚಿಲ, ಎರ್ಮಾಳು ಜನಾರ್ದನ ದೇವಸ್ಥಾನ, ಎರ್ಮಾಳು ಬಡಾ, ಉಚ್ಚಿಲ ಪೇಟೆ, ಮೂಳೂರು, ಕೊಪ್ಪಲಂಗಡಿ ಮೂಲಕ ಸಾಗಿದ ಶೋಭಾಯಾತ್ರೆಯಲ್ಲಿ 45 ಟ್ಯಾಬ್ಲೊಗಳು, ಭಜನಾ ತಂಡಗಳು, ವಾದ್ಯ ಮೇಳಗಳು ಉಚ್ಚಿಲ ದಸರಾ ವೈಭವಕ್ಕೆ ಮೆರುಗು ತಂದವು.
ಶಾರದೆ ಮತ್ತು ನವದುರ್ಗೆಯರನ್ನು ಹೊತ್ತುಕೊಂಡ ವಾಹನಗಳು,ಸ್ತಬ್ಧಚಿತ್ರಗಳ ಸಹಿತ ದೇವಸ್ಥಾನದ ಬಿರುದಾವಳಿ, ಸಿಂಧೂರ ಯುದ್ಧ ವಿಮಾನದ ಮಾದರಿ ವಿಶೇಷ ಗಮ ನಸೆಳೆದಿದ್ದು, ಅದರೊಂದಿಗೆ 20 ಬಣ್ಣದ ಕೊಡೆ, ಕೊಂಬು ಡೋಲು, ಸ್ಯಾಕ್ರೋಫೋನ್, ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್, ಚೆಂಡೆ, ಬ್ಯಾಂಡ್ ಸೆಟ್, ಕೋಳಿ ಮತ್ತು ಮೀನು, ಸು ಫ್ರಂ ಸೋ ಚಿತ್ರದ ಗೊಂಬೆ ಬಳಗ, ಕೇರಳ ಗೊಂಬೆ, ಕುಣಿತ ಭಜನೆ, ತಾಲೀಮು, ಆಮೆ, ಕುರುಕ್ಷೇತ್ರ, ಮತ್ಸ್ಯಾವತಾರ, ಲಂಕಿಣಿ, ಉಚ್ಚಿಲ ಶ್ರೀಮಹಾಲಕ್ಷ್ಮಿ, ವರಾಹಾವತಾರ, ಮಂತ್ರದೇವತೆ, ಡ್ರಾಗನ್ ಟ್ಯಾಬ್ಲೊ, ಸದಿಯ ಸಾಹುಕಾರ್, ಮಾಧವ ಮಂಗಲ, ಭಜನೆ ಟ್ಯಾಬ್ಲೊ, ಪರ್ಸಿನ್ ಬೋಟ್, ಅಯ್ಯಪ್ಪ, ಮಹಿಷಾಸುರಮರ್ದಿನಿ, ಹುಲಿವೇಷ, ಅಯೋಧ್ಯ, ಪರಿಸರ, ದಶಾವತಾರ, ರಾಕ್ಷಸ ವೇಷಗಳ ಟ್ಯಾಬೊ ಇತ್ಯಾದಿ ಶೋಭಾಯಾತ್ರೆಗೆ ಮೆರುಗು ನೀಡಿತು.
ಶೋಭಾಯಾತ್ರೆ ಯಲ್ಲಿ ಪಾಲ್ಗೊಂಡವರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ನೀರು ಸರಬರಾಜು ವಾಹನ, ಶುಚಿತ್ವ ವಾಹನ ಮತ್ತು ಮೆಟಲೈಟ್ ವಾಹನಗಳು ಮೆರವಣಿಗೆಗೆ ಸಾಥ್ ನೀಡಿದವು.
ಸುಗಮ ಶೋಭಾಯಾತ್ರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಈ ಸಂದರ್ಭದಲ್ಲಿ ಉಚ್ಚಿಲ ದಸರಾ ರೂವಾರಿ ಜಿ. ಶಂಕರ್, ಶಾಲಿನಿ ಜಿ. ಶಂಕರ್ ಮತ್ತು ಕುಟುಂಬಸ್ಥರು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡರಾದ ಪ್ರಸಾದರಾಜ್ ಕಾಂಚನ್, ಎಂ.ಎ. ಗಫೂರ್, ಉದ್ಯಮಿಗಳಾದ ಆನಂದ ಸಿ. ಕುಂದರ್ ಮತ್ತು ಭುವನೇಂದ್ರ ಕಿದಿಯೂರು, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಉದಯ ಕುಮಾರ್ ಹಟ್ಟಿಯಂಗಡಿ, ಯುವರಾಜ್ ಮಸ್ಕತ್, ಶಿವಕುಮಾರ್ ಮೆಂಡನ್, ಶೇಖರ್ ಸಾಲ್ಯಾನ್, ಸತೀಶ್ ಕುಂದರ್, ಶಿಲ್ಪಾ ಕುಂದರ್, ಉಷಾರಾಣಿ, ಸಂಧ್ಯಾದೀಪ ಸುನಿಲ್, ಸುಗುಣ ಪದ್ಮಾಕರ್, ಕೇಶವ ಕೋಟ್ಯಾನ್, ಯತೀಶ್ ಕಿದಿಯೂರು, ಗಿರೀಶ್ ಕುಮಾರ್, ಶಿಲ್ಪಾ ಗಂಗಾಧರ್ ಸುವರ್ಣ, ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ ಮೊದಲಾದವರಿದ್ದರು.
0 ಕಾಮೆಂಟ್‌ಗಳು