ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಎನ್ ಡಿಎ ಒಕ್ಕೂಟ ಬಿಹಾರ ಚುನಾವಣಾ ಇತಿಹಾಸದಲ್ಲೇ ಪ್ರಚಂಡ ದಾಖಲೆಯ ಜಯ ಗಳಿಸಿರುವುದಕ್ಕೆ ಸಾಕ್ಷಿಯಾಗಿದೆ. ಇದು ಕೇವಲ 160ಕ್ಕಿಂತಲೂ ಅಧಿಕ ಸ್ಥಾನ ಮಾತ್ರವಲ್ಲ, ಆದರೆ 243 ಸದಸ್ಯಬಲದ ವಿಧಾನಸಭೆಯಲ್ಲಿ 200ಕ್ಕೂ ಅಧಿಕ ಎಂಬುದು ಬಹುತೇಕ ಖಚಿತವಾಗಲಿದೆ.
ಮತ್ತೊಂದೆಡೆ ಚುನಾವಣೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಆರ್ ಜೆಡಿ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಧೂಳೀಪಟವಾಗುವ ಮೂಲಕ ಜನರಿಂದ ತಿರಸ್ಕರಿಸಲ್ಪಟ್ಟಿದೆ.
ಶುಕ್ರವಾರ (ನ.14) ಬೆಳಗ್ಗೆ 8ಗಂಟೆಗೆ ಅಂಚೆ ಮತ ಎಣಿಕೆ ಮಾಡುವ ವೇಳೆಯೇ ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟ ಭರ್ಜರಿ ಮುನ್ನಡೆ ಕಾಯ್ದುಕೊಂಡಿತ್ತು. ಅಷ್ಟೇ ಅಲ್ಲ ಈ ಟ್ರೆಂಡ್ ಎಲ್ಲಾ ಸುತ್ತಿನ ಮತ ಎಣಿಕೆಯಲ್ಲೂ ಮೇಲುಗೈ ಸಾಧಿಸುವ ಮೂಲಕ 190ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಭಾರೀ ಮುನ್ನಡೆಯೊಂದಿಗೆ ದಾಪುಗಾಲಿಟ್ಟಿತ್ತು. ಸಂಜೆ 5ಗಂಟೆಯ ಟ್ರೆಂಡ್ ಪ್ರಕಾರ ಎನ್ ಡಿಎ 204 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಆಡಳಿತರೂಢ ಮೈತ್ರಿಕೂಟದ ಜೆಡಿಯು ಕೂಡಾ ದೊಡ್ಡಣ್ಣನ ಪಾತ್ರ ವಹಿಸುವ ಮೂಲಕ 81 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭರ್ಜರಿ ಮತಬೇಟೆಯಾಡಿದಂತಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಆರ್ ಜೆಡಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು ಕೂಡಾ 2025ರ ಚುನಾವಣೆಯಲ್ಲಿ ಈ ಹಿಂದಿನ ಅರ್ಧಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡು ಕೇವಲ 26 ಕ್ಷೇತ್ರಗಳಷ್ಟೇ ಮುನ್ನಡೆಯಲ್ಲಿದೆ.
ಕಾಂಗ್ರೆಸ್ ಪಕ್ಷದ ಸ್ಥಿತಿಯಂತೂ ತೀರಾ ಹದಗೆಟ್ಟಿದ್ದು, ಕಳೆದ ಬಾರಿ 19 ಸ್ಥಾನಗಳಲ್ಲಿ ಗೆದ್ದಿದ್ದ ಕೈಪಡೆ, ಈ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳಲು ಹೆಣಗಾಡುವಂತಾಗಿದ್ದು, ಮಹಾಘಟಬಂಧನ್ ಭರವಸೆಯ ಮಹಾಪೂರ ಕೊಚ್ಚಿಕೊಂಡು ಹೋಗಿದೆ.
ಈತನ್ಮಧ್ಯೆ ಚುನಾವಣ ತಂತ್ರಗಾರ ಪ್ರಶಾಂತ್ ಕಿಶೋರ್ ಸ್ವತಃ ಜನ್ ಸುರಾಜ್ ಪಕ್ಷ ಸ್ಥಾಪಿಸುವ ಮೂಲಕ ಚುನಾವಣ ಅಖಾಡಕ್ಕಿಳಿದಿದ್ದರೂ ಕೂಡಾ ಪಕ್ಷ ಒಂದೇ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
ನ.11ರಂದು ಎರಡನೇ ಹಂತದ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಬಿತ್ತರಗೊಂಡಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ ಡಿಎ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಹೇಳಿದ್ದರೂ ಕೂಡಾ ಬಿಜೆಪಿ ಮತ್ತು ಜೆಡಿಯು ಸಮೀಕ್ಷೆಯ ನಿರೀಕ್ಷೆಯನ್ನೂ ಮೀರಿ ಪ್ರಚಂಡ ಗೆಲುವು ತಂದಿದೆ. ಆದರೆ ಕುತೂಹಲಕಾರಿ ಅಂಶವೇನೆಂದರೆ ನಿತೀಶ್ ಕುಮಾರ್ ಅವರು ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆಯೇ ಅಥವಾ ಬಿಜೆಪಿ ತನ್ನದೇ ನಾಯಕನನ್ನು ಆಯ್ಕೆ ಮಾಡಬಹುದೇ ಎಂಬುದು ಪ್ರಶ್ನೆಯಾಗಿದೆ!

0 ಕಾಮೆಂಟ್‌ಗಳು