Header Ads Widget

ಮಧುಮೇಹ ಮತ್ತು ಗರ್ಭಧಾರಣೆ ~ಡಾ ರಾಜಲಕ್ಷ್ಮಿ

ಮಧುಮೇಹ ಎಂಬುದು ದೇಹದಲ್ಲಿ ಇನ್ಸುಲಿನ್ ಎನ್ನುವ ಹಾರ್ಮೋನಿನ ಉತ್ಪಾದನೆ ಕಡಿಮೆಯಾದಾಗ ಅಥವಾ ದೇಹದಲ್ಲಿರುವ ಇನ್ಸುಲಿನ್ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವಾಗ ಕಾಣಿಸಿಕೊಳ್ಳುವ ಅಸಾಂಕ್ರಾಮಿಕ ಕಾಯಿಲೆ. ದೇಹಕ್ಕೆ ಅಹಿತಕರವಾದ ಆಹಾರ ಸೇವನೆ, ವ್ಯಾಯಾಮವಿಲ್ಲದ ದಿನಚರಿ, ಸದಾಕಾಲ ಮಾನಸಿಕ ಒತ್ತಡದ ಜೀವನ ಮುಂತಾದ ಅನಾರೋಗ್ಯಕರವಾದ ಜೀವನಶೈಲಿ ಮಧುಮೇಹಕ್ಕೆ ದಾರಿ ಮಾಡಿಕೊಡುವುದರಿಂದ ಡಯಾಬಿಟಿಸ್ ಅಥವಾ ಸಿಹಿ ಮೂತ್ರ ಅಥವಾ ಸಕ್ಕರೆ ಕಾಯಿಲೆಯನ್ನು ಜೀವನಶೈಲಿಯ ರೋಗವೆಂದು ಪರಿಗಣಿಸಲಾಗುತ್ತದೆ. 

ಪ್ರಸ್ತುತ ಭಾರತೀಯರ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದಾಗಿ ಭಾರತವಿಂದು ಮಧುಮೇಹ ಕಂಡುಬರುವ ಜಗತ್ತಿನ ರಾಷ್ಟ್ರಗಳಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಈ ಮಧುಮೇಹ ಬಾಲ್ಯಾವಸ್ಥೆಯಿಂದ ಹಿಡಿದು ಗರ್ಭಿಣಿಯರಲ್ಲೂ ಕಂಡು ಬರುತ್ತಿದೆ. ಮಹಿಳೆಯಲ್ಲಿ ಗರ್ಭಿಣಿಯಾದಾಗ ಅಥವಾ ಗರ್ಭ ಪೂರ್ವವಾಗಿ ಮಧುಮೇಹ ಕಂಡು ಬರಬಹುದು. ಪ್ರೀ ಡಯಾಬಿಟಿಸ್ (pre diabetes ) ಮತ್ತು ಪಿ ಸಿ ಓ ಎಸ್ (PCOS) ನಂತಹ ಸಮಸ್ಯೆಗಳಿದ್ದು ಗರ್ಭಧಾರಣೆಗೆ ವಿಳಂಬವಾಗಬಹುದು. ಈ ಕಾಯಿಲೆಗಳನ್ನು ಮಧುಮೇಹದ ಮೊದಲ ಹಂತಗಳೆಂದು ಗುರುತಿಸಲಾಗುತ್ತಿದೆ. ಗರ್ಭವತಿಯಾಗುವ ಮುನ್ನವೇ ಮಧುಮೇಹದಿಂದ ಬಳಲುತ್ತಿರುವ ಮಹಿಳೆ ಗರ್ಭ ಧರಿಸಿದ ಮೇಲೂ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿ ಇಲ್ಲದಿದ್ದಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 



 ಗರ್ಭಾವಸ್ಥೆಯಲ್ಲಿ ಮಹಿಳೆಗೆ ಮಧುಮೇಹ ಕಂಡುಬರುವ ಸಂಭಾವ್ಯತೆ ಇತ್ತೀಚಿನ ದಿನಗಳಲ್ಲಿ ಅಧಿಕಗೊಂಡಿದೆ. ಭಾರತದಲ್ಲಿ ಸಾಮಾನ್ಯವಾಗಿ 13% ಗರ್ಭಿಣಿಯರಲ್ಲಿ ಮಧುಮೇಹ ಅಥವಾ ಜಸ್ಟೇಶನಲ್ ಡಯಾಬಿಟಿಸ್ (Gestational Diabetes) ತೋರಿ ಬರುತ್ತಿದೆ. ನಗರ ಪ್ರದೇಶಗಳಲ್ಲಿ 12 ಶೇಕಡಾ ಗರ್ಭಿಣಿಯರಲ್ಲಿ ಮಧುಮೇಹ ಕಾಣಿಸಿಕೊಂಡರೆ, ಗ್ರಾಮೀಣ ಪ್ರದೇಶದ 10% ಗರ್ಭಿಣಿಯರಲ್ಲಿ ಮಧುಮೇಹ ಕಂಡು ಬರುತ್ತಿದೆ. ಅಂಕಿ ಅಂಶಗಳನ್ನು ಗಮನಿಸಿದಾಗ ಕಳೆದೈದು ವರ್ಷಗಳಲ್ಲಿ ಗರ್ಭಿಣಿಯರ ಮಧುಮೇಹದ ಸಂಭವನೀಯತೆ 0.53% ದಿಂದ 0.80% ರಷ್ಟು ಹೆಚ್ಚಿರುವುದನ್ನು ಕಾಣಬಹುದು. ಕೇರಳ ಮೇಘಾಲಯ ತಮಿಳುನಾಡು ಗೋವಾ ಮುಂತಾದ ರಾಜ್ಯಗಳಲ್ಲಿ ಗರ್ಭಿಣಿಯರಲ್ಲಿ ಮಧುಮೇಹ ಗಣನೀಯವಾಗಿ ಹೆಚ್ಚುತ್ತಿದೆ.


  ಗರ್ಭಿಣಿಯಾದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದು ಈ ಕಾಯಿಲೆಯ ಪ್ರಮುಖ ಗುಣಲಕ್ಷಣವಾಗಿದೆ. ಸಕ್ಕರೆಯ ಪ್ರಮಾಣ ಆಹಾರ ಸೇವನೆಯ ಮೊದಲು ಖಾಲಿ ಹೊಟ್ಟೆಯಲ್ಲಿ 90mg% ಗಿಂತ ಹೆಚ್ಚು ಮತ್ತು ಊಟ ಸೇವಿಸಿದ ಎರಡು ತಾಸುಗಳ ಬಳಿಕ 140 mg% ಗಿಂತ ಹೆಚ್ಚು ಅಥವಾHbA1C 6.5 ಕಿಂತಾ ಹೆಚ್ಚಿರುವ ಗರ್ಭಿಣಿಯರನ್ನು ಮಧುಮೇಹಿಗಳು ಎಂದು ವರ್ಗೀಕರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಪಾಯಕಾರಿ ಗರ್ಭಧಾರಣೆ ಎಂಬ ಗುಂಪಿಗೆ ಸೇರುವ ಸಮಸ್ಯೆಗಳಲ್ಲಿ ಗರ್ಭಧಾರಣೆಯ ಮಧುಮೇಹವೂ ಒಂದು.


 ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಮಧುಮೇಹ ಐದು ತಿಂಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯಲ್ಲಿ ಅತಿಯಾದ ತೂಕ, ಮಗುವಿನ ಹೆಚ್ಚಿನ ತೂಕ, ಗರ್ಭಕೋಶದಲ್ಲಿ ನೀರು ಹೆಚ್ಚಾಗುವಿಕೆ ಮುಂತಾದ ಚಿಹ್ನೆಗಳು ಮಧುಮೇಹದ ಕಡೆಗೆ ಬೆರಳು ತೋರಬಹುದು. ಹೆಚ್ಚಿದ ಬಾಯಾರಿಕೆ ಹಸಿವು ಮೂತ್ರ ವಿಸರ್ಜನೆ ಮುಂತಾದ ಮಧುಮೇಹದ ಖಚಿತ ಚಿಹ್ನೆಗಳು ಗರ್ಭಿಣಿಯರಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳದೇ ಇರಬಹುದು.


ಸ್ಥೂಲಕಾಯದ ಗರ್ಭಿಣಿಯರಲ್ಲಿ, ಹತ್ತಿರದ ರಕ್ತ ಸಂಬಂಧಿಕರಲ್ಲಿ ಮಧುಮೇಹವಿದ್ದಾಗ, ಹಿಂದಿನ ಗರ್ಭ ಧಾರಣೆಯ ಸಮಯದಲ್ಲಿ ಮಧುಮೇಹವಿದ್ದಲ್ಲಿ ಈ ಬಾರಿಯೂ ಮಧುಮೇಹ ಕಾಣಿಸಿಕೊಳ್ಳುವ ಸಂಭಾವ್ಯತೆ ಅಧಿಕವಾಗುತ್ತದೆ. ಜೊತೆಗೆ ಹಿರಿಯ ವಯಸ್ಸಿನ ಗರ್ಭಿಣಿಯರಲ್ಲಿ, ಗರ್ಭದಲ್ಲಿ ಅವಳಿ ಶಿಶುಗಳಿದ್ದಾಗ, ಚಟುವಟಿಕೆ ಮತ್ತು ವ್ಯಾಯಾಮ ರಹಿತ ಜೀವನ ಶೈಲಿಯಿಂದಾಗಿ ಗರ್ಭಿಣಿಯರಲ್ಲಿ ಮಧುಮೇಹ ಕಾಣಿಸಿಕೊಳ್ಳಬಹುದು. 


 ಗರ್ಭವತಿಯರಲ್ಲಿ ಹೆಚ್ಚಿದ ಇನ್ಸುಲಿನ್ ಬೇಡಿಕೆ, ಕುಗ್ಗಿದ ಇನ್ಸುಲಿನ್ ಉತ್ಪಾದನೆ ಯೊಂದಿಗೆ ಇನ್ಸುಲಿನ್ ರೆಸಿಸ್ಟೆನ್ಸ್ (insulin resistance) ನಿಂದಾಗಿ ಮಧುಮೇಹ ಹೆಚ್ಚಿನ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುತ್ತದೆ. ಅಧಿಕ ರಕ್ತದೊತ್ತಡ, ಪ್ರೀ ಡಯಾಬಿಟಿಸ್ ಹಾಗೂ PCOS ಸಮಸ್ಯೆಗಳನ್ನು ಹೊಂದಿರುವವರಲ್ಲಿಯೂ ಮಧುಮೇಹ ಕಾಣಿಸಿಕೊಳ್ಳಬಹುದು.


ಗರ್ಭಧಾರಣೆಯ ಮುನ್ನವೇ ಮಧುಮೇಹವಿದ್ದವರಲ್ಲಿ ಗರ್ಭಾವಸ್ಥೆಯಲ್ಲಿ ಅನಿಯಂತ್ರಿತ ಸಕ್ಕರೆಯ ಪ್ರಮಾಣದಿಂದಾಗಿ ಮಧುಮೇಹ ಉಲ್ಬಣಗೊಂಡು ಗರ್ಭಿಣಿಯ ಹೃದಯ, ಕಣ್ಣು ಹಾಗೂ ಮೂತ್ರಪಿಂಡಗಳಿಗೆ ಹಾನಿಯುಂಟಾಬಹುದು. ಗರ್ಭಸ್ಥ ಶಿಶುವಿನಲ್ಲಿ ಹೃದಯ, ನರವ್ಯೂಹದ ನ್ಯೂ ನತೆಗಳೊಂದಿಗೆ ಸೀಳುತುಟಿ ಮುಂತಾದ ಸಮಸ್ಯೆಗಳು ಕಂಡು ಬರಬಹುದು. 


 *ಗರ್ಭಿಣಿಯರಲ್ಲಿ ಮಧುಮೇಹವನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ ?*


GCT (glucose challange test) ಎಂಬ ತಪಾಸಣೆಯಿಂದ ಗರ್ಭಿಣಿಯಲ್ಲಿ ಮಧುಮೇಹವನ್ನು ಪತ್ತೆಹಚ್ಚಲಾಗುತ್ತದೆ. ಅಧಿಕ ಶರ್ಕರದ ಆಹಾರ (75 g ಗ್ಲುಕೋಸ್ ) ನೀಡಿ ದೇಹದಲ್ಲಿರುವ ಇನ್ಸುಲಿನ್ ಸಕ್ಕರೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತದೆಯೇ ಎಂದು ಪರೀಕ್ಷಿಸಲಾಗುತ್ತದೆ. ಸಕ್ಕರೆ ಸೇವನೆಯ ಎರಡು ತಾಸುಗಳ ಬಳಿಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಅಳೆಯಲಾಗುತ್ತದೆ. ಸಕ್ಕರೆಯ ಪ್ರಮಾಣ 140 ಮಿಲಿ ಗ್ರಾಂ ಗಿಂತ ಅಧಿಕವಾಗಿದ್ದಾಗ, ಮಧುಮೇಹವಿರುವ ಗರ್ಭಿಣಿ ಎಂದು ನಿರ್ಧರಿಸಲಾಗುತ್ತದೆ. ಈ ರೀತಿಯ ವಿಶೇಷ ತಪಾಸಣೆಯನ್ನು ಗರ್ಭಧಾರಣೆಯ ಮೊದಲ ಮೂರು ತಿಂಗಳಲ್ಲಿ ಒಮ್ಮೆ, 24 ವಾರಗಳ ಬಳಿಕ ಒಮ್ಮೆ, ಹಾಗೂ 32 ವಾರಗಳ ಬಳಿಕ ಪುನರಾವರ್ತಿಸಲಾಗುತ್ತದೆ.


ಮಧುಮೇಹ ಹೊಂದಿರುವ ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡವೂ ಕಾಣಿಸಿಕೊಳ್ಳಬಹುದು. ಗರ್ಭಿಣಿಯಲ್ಲಿ ಕಂಡುಬರುವ ಮಧುಮೇಹದಿಂದಾಗಿ ಮಗುವಿನ ಗಾತ್ರ ಹಿರಿದಾಗಿ ಸಹಜ ಹೆರಿಗೆ ಕಷ್ಟ ಸಾಧ್ಯವಾಗಬಹುದು. ಅತಿತ್ರಾಸದ ಸಹಜ ಹೆರಿಗೆಯಿಂದ ಮಗುವಿನ ಮೂಳೆ ಹಾಗೂ ನರಗಳಿಗೆ ಆಘಾತವಾಗಬಹುದು. ಸಿಸೇರಿಯನ್ ಹೆರಿಗೆ ಅವಶ್ಯಕವೆನಿಸಬಹುದು. ಅವಧಿ ಪೂರ್ವ ಹೆರಿಗೆ ಹಾಗೂ ನವಜಾತ ಶಿಶುವಿಗೆ ತೀವ್ರ ನಿಗಾ ಘಟಕದ ಅಗತ್ಯತೆಯು ಇಂತಹ ಗರ್ಭಿಣಿಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭ್ರೂಣದಲ್ಲಿರುವ ಮಗು ಗರ್ಭಾಶಯದಲ್ಲಿಯೇ ಉಸಿರುಗಟ್ಟಿ ಮರಣ ಹೊಂದುವ ಸಂಭವನೀಯತೆಯು ಮಧುಮೇಹಿ ಗರ್ಭಿಣಿಯರಲ್ಲಿ ಕಂಡುಬರುತ್ತದೆ.


ಗರ್ಭಿಣಿಯರಲ್ಲಿನ ಮಧುಮೇಹದ ಪರಿಹಾರಕ್ಕಾಗಿ ಮಿತ ಆಹಾರ ಹಾಗೂ ವ್ಯಾಯಾಮ ಪ್ರಥಮ ಹೆಜ್ಜೆಗಳಾಗಿವೆ. ಈ ಸುಲಭ ಉಪಾಯಗಳಿಂದ ಸಕ್ಕರೆಯ ಪ್ರಮಾಣ ಹತೋಟಿಗೆ ಬಾರದಿದ್ದಲ್ಲಿ ಗುಳಿಗೆಗಳು ಹಾಗೂ ಇನ್ಸುಲಿನ ಅವಶ್ಯಕತೆ ಇರುತ್ತದೆ. ಇಂತಹ ಗರ್ಭಿಣಿಯರಿಗೆ ರಕ್ತ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ ಗಳನ್ನು ಸಾಮಾನ್ಯ ಗರ್ಭಿಣಿಯರಿಗಿಂತ ಅಧಿಕ ಬಾರಿ ಮಾಡಿಸಬೇಕಾಗುತ್ತದೆ. ಗರ್ಭ ಧರಿಸುವ ಮುನ್ನವೇ ಮಧುಮೇಹ ವಿದ್ದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಿದ ಬಳಿಕ ಗರ್ಭಿಣಿಯಾಗಲು ಸಲಹೆ ನೀಡಲಾಗುತ್ತದೆ. ಗರ್ಭಿಣಿಯಾದ ಬಳಿಕವು ಮನೆಯಲ್ಲಿಯೇ ಪ್ರತಿದಿನ ಸಕ್ಕರೆಯ ಪ್ರಮಾಣವನ್ನು ತಪಾಸಣೆ ಮಾಡಿಕೊಳ್ಳಲು ನಿರ್ದೇಶಿಸಲಾಗುತ್ತದೆ.  


 *ಮಧುಮೇಹವಿರುವ ಗರ್ಭಿಣಿಯರು ಏನು ಮಾಡಬೇಕು?*


 1 ದಿನದಲ್ಲಿ ಎರಡು ಮೂರು ಗಂಟೆಗೊಮ್ಮೆ ಅಲ್ಪ ಪ್ರಮಾಣದ ಆಹಾರ ಸೇವಿಸಬೇಕು. 

 

2 ಸಕ್ಕರೆ ಬೆಲ್ಲಗಳಿಂದ ಕೂಡಿದ ಸಿಹಿ ತಿನಿಸುಗಳನ್ನು ತ್ಯಜಿಸಬೇಕು. 


 3 ಮಿತವಾಗಿ ಸಿಹಿಯಿರುವ ಸೇಬು, ಪೇರಳೆ ದಾಳಿಂಬೆ, ಪಪ್ಪಾಯಿ ಹಣ್ಣುಗಳು, ಹಸಿ ತರಕಾರಿಗಳು, ಧಾನ್ಯಗಳಿಂದ ಕೂಡಿದ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಬೇಕು. ಭತ್ತ, ಅಕ್ಕಿ, ರಾಗಿ, ಗೋಧಿ, ಜೋಳದಂತಹ ಧಾನ್ಯಗಳಿಂದ ತಯಾರಾದ ಆಹಾರ ಪದಾರ್ಥಗಳ ಪ್ರಮಾಣವನ್ನು (quantity) ಕಡಿಮೆ ಮಾಡಿರಿ.


 4 ಸಾಕಷ್ಟು ನೀರು ಕುಡಿಯಬೇಕು. 


 5 ದಿನವೂ ಕನಿಷ್ಠ 30 ನಿಮಿಷದ ನಡಿಗೆ ಅಥವಾ ವ್ಯಾಯಾಮವನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಬೇಕು. ಪ್ರತೀ ಬಾರಿ ಊಟದ/ಆಹಾರ ಸೇವನೆಯ ನಂತರ 10 ನಿಮಿಷದ ನಡಿಗೆ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಕಾರಿ.


 6 ವೈದ್ಯರ ಸಲಹೆಯಂತೆ ರಕ್ತ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ ಗಳನ್ನು ಮಾಡಿಸಿಕೊಳ್ಳಬೇಕು. 


 7 ಆಹಾರ ತಜ್ಞರು ನೀಡಿದ ಪೌಷ್ಟಿಕ ಆಹಾರ ಯೋಜನೆಯನ್ನು ಅನುಸರಿಸಬೇಕು. 


 7 ಸಾಕಷ್ಟು ವಿಶ್ರಾಂತಿ ಪಡೆಯಲು ಆರರಿಂದ ಎಂಟು ತಾಸುಗಳ ನಿದ್ದೆ ಮಾಡಬೇಕು. 


 8 ಧ್ಯಾನ, ಪ್ರಾಣಾಯಾಮ ಹಾಗೂ ಕ್ರಮಬದ್ಧ ಉಸಿರಾಟವನ್ನು ನಡೆಸಬೇಕು.


*ಮಧುಮೇಹವಿರುವ ಗರ್ಭಿಣಿಯರು ಏನನ್ನು ಮಾಡಬಾರದು?*


 1ಸಿಹಿ ತಿಂಡಿ, ಜ್ಯೂಸ್, ಪೆಪ್ಸಿ ಕೋಕ್ ನಂತಹ ತಂಪು ಪಾನೀಯಗಳ ಸೇವನೆ. 


 2 ಎಣ್ಣೆಯಲ್ಲಿ ಕರಿದ ತಿಂಡಿ, ಜಂಕ್ ಅಥವಾ ತ್ವರಿತ ಆಹಾರ ಸೇವನೆ .


 3 ಊಟವನ್ನು ತಪ್ಪಿಸುವುದು.


 4 ಅತಿ ಸಿಹಿಯಾದ ಹಣ್ಣುಗಳಾದ ಮಾವು ಚಿಕ್ಕು ಮುಂತಾದವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು.


 5 ವೈದ್ಯರ ಸಲಹೆ ಇಲ್ಲದೆ ಔಷದ ಸೇವಿಸುವುದು. 


 6 ಒತ್ತಡ, ಕೋಪ, ಗಾಬರಿ, ಆತಂಕಕ್ಕೊಳಗಾಗುವುದು. 


 7 ನಿದ್ರಾಹೀನತೆ. 


 8 ಅನಿಯಮಿತ ಅನಾರೋಗ್ಯಕರ ಜೀವನ ಶೈಲಿ.


 9 ಅತಿ ಕಡಿಮೆ ಅಥವಾ ಅತಿ ಹೆಚ್ಚು ವ್ಯಾಯಾಮ.



ಗರ್ಭಿಣಿಯಾದಾಗ ಕಾಣಿಸಿಕೊಂಡ ಮಧುಮೇಹ ಇನ್ನು ಜೀವನಪರ್ಯಂತ ನಮ್ಮೊಂದಿಗಿರುತ್ತದೆಯೇ ಎನ್ನುವ ಪ್ರಶ್ನೆ ಹಲವರದಾಗಿರಬಹುದು. ಗರ್ಭಧಾರಣೆಯಲ್ಲಿ ರಕ್ತದ ಗ್ಲುಕೋಸ್/ ಸಕ್ಕರೆ ಪ್ರಮಾಣದ ನಿರ್ವಹಣೆಯ ಏರುಪೇರಿನಿಂದ ಕಾಣಿಸಿಕೊಂಡ ಮಧುಮೇಹ ಹೆರಿಗೆಯ ನಂತರ ಹತೋಟಿಗೆ ಬರುತ್ತದೆ. ಆದರೂ ಹೆರಿಗೆಯ ಆರು ವಾರಗಳ ಬಳಿಕ ಮತ್ತು ಪ್ರತಿ ಆರರಿಂದ ಎಂಟು ತಿಂಗಳಿಗೊಮ್ಮೆ ರಕ್ತದ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಿರುವುದು ಅಗತ್ಯ. ಹೆರಿಗೆಯ ನಂತರ ಸಕ್ಕರೆಯ ಪ್ರಮಾಣ ನಿಯಂತ್ರಣಕ್ಕೆ ಬಂದರೂ ಆ ಮಹಿಳೆಗೆ 35 ರಿಂದ 40ರ ವಯಸ್ಸಿನ ಬಳಿಕ ಮಧುಮೇಹ ಕಾಣಿಸಿಕೊಳ್ಳುವ ಸಂಭವನೀಯತೆ ಅಧಿಕವಾಗಿರುತ್ತದೆ. ಆದುದರಿಂದ ಮಿತ ಆಹಾರ ಹಾಗೂ ವ್ಯಾಯಾಮಗಳನ್ನು ಒಳಗೊಂಡ ಆರೋಗ್ಯಕರ ಜೀವನ ಶೈಲಿಯನ್ನು ಪ್ರಸವದ ಬಳಿಕವೂ ಮುಂದುವರೆಸಿಕೊಂಡು ಹೋಗುವುದು ದೀರ್ಘಕಾಲೀನ ಆರೋಗ್ಯದ ದೃಷ್ಟಿಯಿಂದ ಉತ್ತಮ ಹೆಜ್ಜೆಯಾಗಿರುತ್ತದೆ.

ಗರ್ಭಧಾರಣೆಯ ಮಧುಮೇಹವನ್ನು ಅರಿವು, ಕಾಳಜಿ ಹಾಗೂ ಮುಂಜಾಗ್ರತೆಯಿಂದ ಯಶಸ್ವಿಯಾಗಿ ನಿರ್ವಹಿಸಬಹುದು. ತಾಯಿ ಮತ್ತು ಶಿಶು ಆರೋಗ್ಯವಾಗಿರಲು ರಕ್ತದ ಸಕ್ಕರೆಯ ಪ್ರಮಾಣದ ನಿಯಂತ್ರಣ ಅತಿ ಅಗತ್ಯ. ಸಮತೋಲನದ ಆಹಾರ, ನಿಯಮಿತ ವ್ಯಾಯಾಮ, ಮಾನಸಿಕ ಒತ್ತಡದ ನಿರ್ವಹಣೆ ಹಾಗೂ ಸಮರ್ಪಕ ವಿಶ್ರಾಂತಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡಲು ನೆರವಾಗುವ ಪ್ರಮುಖ ಅಂಶಗಳು. ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಹಾಗೂ ಕ್ಲಪ್ತ ಸಮಯದಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಿಂದ ತಾಯಿ ಮತ್ತು ಮಗು ಇಬ್ಬರೂ ಗರ್ಭಿಣಿಯಲ್ಲಿ ಮಧುಮೇಹವಿದ್ದರೂ ಆರೋಗ್ಯಯುತರಾಗಿ ನವಮಾಸಗಳನ್ನು ಕಳೆಯಬಹುದು ಆರೋಗ್ಯಕರ ಜೀವನ ಶೈಲಿ ಆರೋಗ್ಯವಂತ ತಾಯಿ ಹಾಗೂ ಶಿಶುವಿನಡೆಗೆ ದಾರಿ ತೋರುತ್ತದೆ.


~ಡಾ ರಾಜಲಕ್ಷ್ಮಿ 

ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು

ವಾತ್ಸಲ್ಯ ಕ್ಲಿನಿಕ್ ಸಂತೆಕಟ್ಟೆ 

ಕಾರ್ಯದರ್ಶಿ, ಸಾರ್ವಜನಿಕ ಆರೋಗ್ಯ ಅರಿವು ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿ 

ಕರ್ನಾಟಕ ರಾಜ್ಯ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರ ಸಂಘ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು