Header Ads Widget

ಅಕಾಲಿಕ ಮಗು ಅಥವಾ ಅವಧಿ ಪೂರ್ವ ಹೆರಿಗೆಯಾದ ಮಗುವಿನ ಕಾಳಜಿ

ಗರ್ಭಧರಿಸಿದ 37 ವಾರಗಳ ಮೊದಲೇ ಹೆರಿಗೆಯಾದಲ್ಲಿ ಜನಿಸಿದ ಶಿಶುವನ್ನು ಅಕಾಲಿಕ ಮಗು ಅಥವಾ ಅವಧಿ ಪೂರ್ವವಾಗಿ ಜನಿಸಿದ ಮಗು ಎಂದು ವರ್ಗೀಕರಿಸಲಾಗುತ್ತದೆ. ಭಾರತವು ಅವಧಿಪೂರ್ವ/ ಅಕಾಲಿಕವಾಗಿ ಜನಿಸುವ ಮಕ್ಕಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿವರ್ಷ 3.6 ಮಿಲಿಯನ್ ಮಕ್ಕಳು 37 ವಾರಗಳಿಗೆ ಮುನ್ನ ಜನನ ಹೊಂದುತ್ತಾರೆ. ವಿಶ್ವದಾದ್ಯಂತ ಅಕಾಲಿಕವಾಗಿ ಜನಿಸುವ ಮಕ್ಕಳಲ್ಲಿ 20 ಶೇಕಡಾ ಜನನ ಭಾರತದಲ್ಲಾಗುತ್ತದೆ. ಹೀಗೆ ಜನಿಸಿದ ಶಿಶುಗಳಲ್ಲಿ ಮೂರು ಲಕ್ಷದಷ್ಟು ಶಿಶುಗಳು ಪ್ರತಿವರ್ಷ ಮರಣ ಹೊಂದುತ್ತವೆ. ಹೆಚ್ಚುತ್ತಿರುವ ಕೃತಕ ಗರ್ಭಧಾರಣೆ, ಅವಳಿ ಮಕ್ಕಳು, ಗರ್ಭಿಣಿಯಲ್ಲಿ ಮಧುಮೇಹ, ಅತಿ ರಕ್ತದೊತ್ತಡ, ಬೊಜ್ಜುತನ ಮುಂತಾದ ಕಾರಣಗಳಿಂದ ಅವಧಿ ಪೂರ್ವ ಹೆರಿಗೆಗಳು ಅಧಿಕವಾಗುತ್ತಿವೆ. ಇದೊಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಆರೋಗ್ಯ ಸೇವೆಗಳು, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ದೊಡ್ಡ ಸವಾಲಾಗಿದ್ದು ದೇಶದ ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

37 ವಾರಗಳಿಗಿಂತ ಮುನ್ನ ಜನಿಸಿದ ಮಗುವಿನಲ್ಲಿ ಉಸಿರಾಟದ ಸಮಸ್ಯೆ, ಎದೆ ಹಾಲು ಚೀಪಲು ಮತ್ತು ಕುಡಿಯಲು ತೊಂದರೆ, ನವಜಾತ ಶಿಶುವಿನ ಕಾಮಾಲೆ, ಮೆದುಳಿನ ರಕ್ತಸ್ರಾವ, ಶ್ವಾಸಕೋಶ ಹಾಗೂ ಕರುಳಿನ ಸೋಂಕು, ಸಕ್ಕರೆಯ ಪ್ರಮಾಣದಲ್ಲಿ ಏರಿಳಿತ, ಅಪಸ್ಮಾರ ಮುಂತಾದ ಸಮಸ್ಯೆಗಳು ಅತಿಯಾಗಿ ಕಾಣಿಸಿಕೊಳ್ಳುತ್ತವೆ. ಇಂಥ ಮಕ್ಕಳನ್ನು ದೀರ್ಘಕಾಲ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿರಿಸಿ ಆರೈಕೆ ಹಾಗೂ ಔಷಧೋಪಚಾರ ನೀಡಬೇಕಾಗುತ್ತದೆ. ದೀರ್ಘ ಅವಧಿಗೆ ತೀವ್ರ ನಿಗಾ ಘಟಕದಲ್ಲಿ ಇರಿಸಲ್ಪಟ್ಟ ಅತಿ ಕಡಿಮೆ ತೂಕದ ಮಕ್ಕಳಲ್ಲಿ ದೃಷ್ಟಿ ಹಾಗೂ ಶ್ರವಣ ಸಮಸ್ಯೆಗಳು, ನರವ್ಯೂಹದ ನ್ಯೂನತೆಗಳು ಹಾಗೂ ನಿಧಾನ ಗತಿಯ ಬೆಳವಣಿಗೆ ಕಂಡು ಬರಬಹುದು.

ಕಡಿಮೆ ತೂಕದ ಮಗು 37 ವಾರಗಳ ಮುಂಚಿತವಾಗಿ ಜನಿಸಿರಬಹುದು ಅಥವಾ ಭ್ರೂಣದಲ್ಲಿನ ಅಸಮರ್ಪಕ ಬೆಳವಣಿಗೆಯಿಂದಾಗಿ ಮಗುವಿನ ತೂಕ ಕಡಿಮೆಯಾಗಿರಬಹುದು. ಇಂಥ ಶಿಶುಗಳು ಆರೋಗ್ಯವಂತರಾಗಿ ಬೆಳೆಯಲು ಬಳಸುವ ಉತ್ತಮ ಚಿಕಿತ್ಸಾ ವಿಧಾನವೆಂದರೆ ಕಾಂಗರೂ ತಾಯಿ ಆರೈಕೆ Kangaroo mother care. ಕಾಂಗರೂ ತನ್ನ ಮರಿಯನ್ನು ಚೀಲದೊಳಗಿರಿಸಿ, ಮೈಗಾನಿಸಿಕೊಂಡು ರಕ್ಷಿಸುವಂತೆ ತಾಯಿ ಮತ್ತು ಶಿಶುವಿನ ಚರ್ಮಸ್ಪರ್ಶದ ಮೂಲಕ ಮಗುವಿಗೆ ಕಾವು, ಸುರಕ್ಷತೆ ಹಾಗೂ ವಾತ್ಸಲ್ಯವನ್ನು ಧಾರೆ ಎರೆಯುವ ವಿಧಾನವೇ ಈ ಕಾಂಗರೂ ಆರೈಕೆ. 1978ರಲ್ಲಿ ಕೊಲಂಬಿಯಾದ ಡಾ ಎಡ್ಗರ ರೇ ಮತ್ತು ಡಾ ಹೆಕ್ಟರ್ ಮಾರ್ಟೀನಿ ಎಂಬವರು ಅತಿ ಕಡಿಮೆ ತೂಕದ ಮಕ್ಕಳ ರಕ್ಷಣೆಗಾಗಿ ತೀವ್ರ ನಿಗಾ ಘಟಕ ಹಾಗೂ ಇಂಕ್ಯೂಬೇಟರ್ ಗಳು ಲಭ್ಯವಿಲ್ಲದಿದ್ದ ಸಮಯದಲ್ಲಿ ಈ ವಿಧಾನವನ್ನು ಪ್ರಾರಂಭಿಸಿದರು. ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಶಿಶುಗಳ ಆರೋಗ್ಯ ಸುಧಾರಣೆಗೆ ಇದೊಂದು ಅತ್ಯುತ್ತಮ ವಿಧಾನ ವಾಗಿದ್ದು ಕ್ರಮೇಣ ಇತರ ರಾಷ್ಟ್ರಗಳು ಈ ಪದ್ಧತಿಯನ್ನು ಅನುಸರಿಸ ತೊಡಗಿದವು. 1994 ರಿಂದ ವಿಶ್ವ ಆರೋಗ್ಯ ಸಂಸ್ಥೆಯು ಕಡಿಮೆ ತೂಕದ ಹಾಗೂ ಅವಧಿಗೆ ಮುನ್ನ ಜನಿಸಿದ ಶಿಶುಗಳ ಆರೈಕೆಗಾಗಿ ಈ ವಿಧಾನವನ್ನು ಅನುಮೋದಿಸಿದೆ.


ಕಾಂಗರೂ ತಾಯಿ ಆರೈಕೆ ಹೇಗೆ ನೀಡಬೇಕು?

1 ಚರ್ಮ- ಚರ್ಮ ಸ್ಪರ್ಶ: ಶಿಶುವನ್ನು ಯಾವುದೇ ಬಟ್ಟೆಗಳಿಲ್ಲದೆ, ತಾಯಿಯ ಬರೇ ಎದೆಯ ಮೇಲೆ ಇರಿಸಬೇಕು. ಮಗುವಿನ ತಲೆ ನೇರವಾಗಿದ್ದು ಮುಖ ಒಂದು ಬದಿಗೆ ತಿರುಗಿರಬೇಕು. ತಾಯಿ ಮತ್ತು ಶಿಶು ಇಬ್ಬರನ್ನೂ ಜೊತೆಗೆ ಮೆತ್ತಗಿನ ಹಾಗೂ ಬೆಚ್ಚಗಿನ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಒಂದರಿಂದ ಒಂದೂವರೆ ತಾಸು ಈ ಭಂಗಿಯಲ್ಲಿರಬೇಕು. ಮಗುವಿನ ಕಾಲುಗಳು ತಾಯಿಯ ಹೊಟ್ಟೆಯ ಭಾಗದ ಮೇಲೆ ಇರಬೇಕು. (Frog leg position)

2 ಉಷ್ಣತೆ ಕಾಪಾಡುವಿಕೆ: ತಾಯಿಯ ದೇಹದ ತಾಪಮಾನ ಮಗುವಿನ ದೇಹದ ತಾಪಮಾನವನ್ನು ಸ್ಥಿರವಾಗಿರಿಸುತ್ತದೆ. 

 3 ಹಾಲೂಡಿಸುವಿಕೆ: ಈ ಭಂಗಿಯಲ್ಲಿ ಮಗುವಿಗೆ ಎದೆ ಹಾಲು ನೀಡುವುದರಿಂದ ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ ವರ್ಧಿಸುತ್ತದೆ.

4 ಶಿಶು ಶಾಂತವಾಗಿದ್ದು ಚೆನ್ನಾಗಿ ನಿದ್ರಿಸುತ್ತದೆ. ನಿದ್ದೆ ಸರಿಯಾದಂತೆ ಬೆಳವಣಿಗೆಯ ಹಾರ್ಮೋನುಗಳು(growth hormones) ಕ್ರಮದಲ್ಲಿ ಸ್ರವಿಸಿ ಮಗುವಿನ ತೂಕ ಹೆಚ್ಚುತ್ತದೆ.

 5 ತಾಯಿ ಮತ್ತು ಮಗುವಿನ ಭಾವನಾತ್ಮಕ ಕೊಂಡಿ ದೃಢಗೊಳ್ಳುತ್ತದೆ. 

 6 ಮಗುವಿನ ಉಸಿರಾಟ ಹಾಗೂ ಹೃದಯ ಬಡಿತ ಸುಧಾರಿಸಿ ಬೆಳವಣಿಗೆ ತ್ವರಿತಗೊಳ್ಳುತ್ತದೆ.

 7 ಮಗುವಿಗೆ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.


 ಕಾಂಗರೂ ತಾಯಿ ಆರೈಕೆಯನ್ನು ಯಾರು ನೀಡಬಹುದು?

 ತಾಯಿ, ತಂದೆ, ಅಜ್ಜಿ ಅಥವಾ ಕುಟುಂಬದ ಇತರ ಸದಸ್ಯರು ನೀಡಬಹುದು.


ಕಾಂಗರೂ ತಾಯಿ ಆರೈಕೆ ನೀಡುವಾಗ ಅನುಸರಿಸಬೇಕಾದ ಮುಂಜಾಗರುಕತಾ ಕ್ರಮಗಳೇನು?

  1 ಆರೈಕೆ ನೀಡುವವರ ಕೈ, ಮೈ, ತ್ವಚೆ ಸ್ವಚ್ಛವಾಗಿರಬೇಕು. 

 2 ಜ್ವರ, ಶೀತ,ನೆಗಡಿ ಗಳಿದ್ದಲ್ಲಿ, ನಿದ್ದೆಯಲ್ಲಿದ್ದಾಗ ಮಗುವಿಗೆ ಆರೈಕೆ ನೀಡಬಾರದು.

 3 ಕಾಂಗರೂ ತಾಯಿ ಆರೈಕೆ ನೀಡುವಾಗ ಯಾವುದೇ ಸುಗಂಧಿತ ದ್ರವ್ಯ ಅಥವಾ ಸ್ಪ್ರೇಗಳನ್ನು ಬಳಸಬಾರದು.

 4 ಧೂಮಪಾನ, ಮದ್ಯಪಾನ ಮಾಡಬಾರದು. 

5 ಆರೈಕೆ ನೀಡುವವರ ಗಮನವೆಲ್ಲ ಮಗುವಿನ ಕಡೆಗಿರಬೇಕು. ಮೊಬೈಲ್ ಬಳಸಬಾರದು.

 6 ತಾಯಿ ನೇರವಾಗಿ ಕುಳಿತಿದ್ದು, ಮಗುವನ್ನು ಎರಡು ಸ್ಥಾನಗಳ ಮಧ್ಯೆ ನೇರವಾಗಿ ಹಿಡಿದುಕೊಳ್ಳಬೇಕು.

 7 ಮಗುವಿನ ನೋಟದೊಂದಿಗೆ ನೋಟವಿಡಬೇಕು. ಮಗುವಿನ ತಲೆ ಮೂಗು ಒಂದು ಬದಿಗೆ ತಿರುಗಿರಬೇಕು. 

 ಮಗುವಿನ ಶ್ವಾಸನಾಳ ಹಾಗೂ ಮೂಗು ಮುಚ್ಚದಂತೆ ಗಮನವಿಡಬೇಕು.

 8 ಆರೈಕೆ ನೀಡುವ ಸ್ಥಳ ಬೆಚ್ಚಗಿದ್ದು ಪ್ರಶಾಂತವಾಗಿರಬೇಕು.  

 9 ಆರೈಕೆ ನೀಡುವ ವ್ಯಕ್ತಿಯ ಮನಸ್ಸು ಪ್ರಶಾಂತವಾಗಿದ್ದು ಉಲ್ಲಾಸಕರವಾಗಿರಬೇಕು. ಯಾವುದೇ ಒತ್ತಡದಲ್ಲಿರಬಾರದು.  

10 ಆರೈಕೆ ನೀಡುವಾಗ ಯಾವುದೇ ಸಮಸ್ಯೆಗಳಾದಲ್ಲಿ ಕೂಡಲೇ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರನ್ನು ಭೇಟಿ ಮಾಡಬೇಕು.

ಕಾಂಗರೂ ತಾಯಿ ಆರೈಕೆ ಸರಳ, ಕಡಿಮೆ ವೆಚ್ಚದ, ಅತ್ಯಂತ ಪರಿಣಾಮಕಾರಿ ಶಿಶು ಆರೈಕೆಯ ವಿಧಾನವಾಗಿದೆ. ಶಿಶುಮರಣವನ್ನು ಗಣ ನೀಯವಾಗಿ ತಗ್ಗಿಸುವಲ್ಲಿ ಸಹಕಾರಿಯಾಗಿದೆ. ಇಂತಹ ಆರೈಕೆಯಿಂದ ಮಗುವು ಆರೋಗ್ಯಕರವಾಗಿ ಬೆಳೆಯುವುದರೊಂದಿಗೆ ತಾಯಿ ಹಾಗೂ ಕಂದಮ್ಮನ ನಡುವೆ ಪ್ರೀತಿ, ವಾತ್ಸಲ್ಯ ಹಾಗೂ ನಂಬಿಕೆಯೂ ವೃದ್ಧಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು