Header Ads Widget

ಡಿ.13: ಕೃಷ್ಣಮಠದಲ್ಲಿ ವಿಶ್ವಶಾಂತಿ ಸಮಾವೇಶ

ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ವಿಶ್ವಗೀತಾ ಪರ್ಯಾಯ ಸಂದರ್ಭದಲ್ಲಿ ಡಿ.13ರಂದು ರಾಜಾಂಗಣದಲ್ಲಿ ವಿಶ್ವಶಾಂತಿ ಸಮಾವೇಶ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಅಮೆರಿಕಾದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್. ವಿಂಡ್ಲೆ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ, ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಭಾಗವಹಿಸಲಿದ್ದಾರೆ. ಚಿಂತಕ ರೋಹಿತ್ ಚಕ್ರತೀರ್ಥ ಹಾಗೂ ಡಾ.ಸುಧೀರ್ ರಾಜ್ ಕೆ. ವಿಚಾರ ಮಂಡಿಸುವರು. 

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದು, ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಭಾಗವಹಿಸುವರು.

ಅಪರಾಹ್ನ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ, ವಾಗ್ಮಿ ಡಾ.ಕೆ.ಪಿ.ಪುತ್ತೂರಾಯ ಆಗಮಿಸುವರು.

ಈ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ `ಸರ್ವಮೂಲಭಾವಪರಿಚಯ' ಹಾಗೂ ಡಾ.ಚೂಡಾಮಣಿ ನಂದಗೋಪಾಲ್ ಮತ್ತು ಡಾ.ಅರುಣಾ ಕೆ.ಆರ್. ವಿರಚಿತ `ಉಡುಪಿ ಶ್ರೀಕೃಷ್ಣ ಮಠ' ದೇವಾಲಯದ ಸಂಸ್ಕೃತಿ ಸಿರಿ ಅನಾವರಣಗೊಳ್ಳಲಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.


ಮೂರು ವಿದ್ವತ್ ಸಮ್ಮೇಳನ ಸಂಪನ್ನ

ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ವಿಶ್ವ ಗೀತಾ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಮೂರು ಸಮ್ಮೇಳನಗಳು ರಾಜಾಂಗಣದಲ್ಲಿ ಈಗಾಗಲೇ ನಡೆದಿದೆ. ಕಳೆದ ಬಾರಿ ಪ್ರಾಚ್ಛವಿದ್ಯಾ ಸಮ್ಮೇಳನ, ಭಾರತೀಯ ಜ್ಞಾನಪರಂಪರಾ ಸಮ್ಮೇಳನ ಹಾಗೂ ದೇವಾಲಯಗಳ ವಾಸ್ತುಶಿಲ್ಪ ಮತ್ತು ಉತ್ಖನನ ಕುರಿತ ಸಮ್ಮೇಳನ ನಡೆದಿದೆ. ಇದೀಗ ವಿಶ್ವಶಾಂತಿ ಸಮಾವೇಶ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು