ಮಲ್ಪೆ ಸಮೀಪದ ನಡುಗಡ್ಡೆ ಮಲ್ತಿ ದ್ವೀಪದಲ್ಲಿ ಮಕರ ಸಂಕ್ರಮಣ ಪೂಜೆ

ಮಕರ ಸಂಕ್ರಮಣ ಬುಧವಾರದಂದು ಮಲ್ಪೆ ಪಡುಕರೆ ಸಮೀಪ ಸಮುದ್ರ ಮಧ್ಯೆ ಇರುವ ಮಲ್ತಿ ದ್ವೀಪದಲ್ಲಿ ವಿಶೇಷ ಪೂಜೆ ನಡೆಯಿತು. ಕಳೆದ 12 ವರ್ಷಗಳಿಂದ ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಪೂಜೆಗೆ ಗ್ರಾಮದ ನೂರಾರು ಜನರು ಪಾಲ್ಗೊಂಡಿದ್ದರು.

ಪ್ರಾತಃ ಕಾಲ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತ ಜನರು ದೇಗುಲದಲ್ಲಿ ಪೂಜೆ ಸಲ್ಲಿಸಿ, ಬಳಿಕ ಮಲ್ಪೆ ಬಂದರು ಸಮೀಪದ ರಾಜರಾಜೇಶ್ವರಿ ಟೂರಿಸ್ಟ್‌ ಬೋಟ್‌ನಲ್ಲಿ ಪ್ರಯಾಣ ಬೆಳೆಸಿದರು. ದೊಡ್ಡ ಬೋಟು ದ್ವೀಪದ ಸಮೀಪ ತೆರಳಲು ಸಾಧ್ಯವಿರದ ಕಾರಣ ದ್ವೀಪದಿಂದ 100 ಮೀಟರ್‌ ದೂರದಲ್ಲೇ ಜನರನ್ನು ಸಣ್ಣ ದೋಣಿಗೆ ಇಳಿಸಿ ಅದರ ಬಳಿ ಕರೆದುಕೊಂಡು ಹೋಗಲಾಯಿತು.

ದ್ವೀಪದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ದಾರಿ ಮಾಡುತ್ತಾ ಮುಂದೆ ಸಾಗಿದಾಗ ಸಲ್ಲಿಕೆಯಾಗುವ ಪೂಜಾ ಸ್ಥಳ ಸಿಗುತ್ತದೆ. ದೇಗುಲದ ತಂತ್ರಿಗಳಾದ ವೇ| ಮೂ| ಪುತ್ತೂರು ಹಯವದನ ತಂತ್ರಿ ಅವರ ನೇತೃತ್ವದಲ್ಲಿ ಪೂಜಾ ವಿದಿವಿಧಾನಗಳು ಜರಗಿದವು. ಬಳಿಕ ಸಮುದ್ರರಾಜನಿಗೆ ಪುಷ್ಪ, ಕ್ಷೀರ ಮತ್ತು ಸಿಯಾಳವನ್ನು ಸಮರ್ಪಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ, ಸಮಿತಿಯ ಭಾಸ್ಕರ್‌ ಪಾಲನ್‌, ಯಶೋಧರ ಸಾಲ್ಯಾನ್‌, ಉಷಾ ಆನಂದ ಸುವರ್ಣ, ಶೀಲ ಕೃಷ್ಣ ದೇವಾಡಿಗ, ವಾದಿರಾಜ ಸಾಲ್ಯಾನ್‌, ರಾಜ ಶೇರಿಗಾರ, ಪ್ರವೀಣ್‌, ಜನಾರ್ದನ ಕೊಡವೂರು, ಪೂರ್ಣಿಮಾ ಜನಾರ್ದನ್‌, ರವಿರಾಜ್‌ ಸಾಲ್ಯಾನ್‌ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು