ಆನಂದ ತೀರ್ಥರು ಶ್ರೀಮಧ್ವ ಮುನಿಗಳು
ದಾನವಾಂತಕನಿಗೆ ಪ್ರಿಯರಿವರು|
ಶ್ರೀನಾಥನಿಗೆ ಅಷ್ಟಮಠವನ್ನು ರಚಿಸಿಹ
ಜ್ಞಾನದ ಚಿಲುಮೆಯು ಮುನಿಶ್ರೇಷ್ಠರು||
ಈ ಜೀವರಿಂಗಿಹ ಅನುಭವ ಜಡಕಿಲ್ಲ
ನೈಜವು ಜೀವ ಜೀವರ ಭೇದವು|
ಆ ಜಡ ಈಶ್ವರ ಭೇದವ ತಿಳಿಸಿಹ
ರಾಜೀವಲೋಚನನಿಗೆ ಭಕ್ತರು||
ಕೋಪವ ಗೆದ್ದಿಹ ಸಜ್ಜನ ಬಂಧುವು
ತಾಪವ ಕಳೆಯುವ ಯತಿವರ್ಯರು|
ಗೋಪಿಚಂದನದಿ ಮುಚ್ಚಿದ್ದ ಶ್ರೀಕೃಷ್ಣನ
ರೂಪಾತಿಶಯವನ್ನು ಕಂಡವರು||
ಭಾಷ್ಯವ ರಚಿಸಿ ಸಜ್ಜನರನು ಕಾಯ್ದಿಹ
ಶಿಷ್ಯ ಕೋಟಿಗೆ ಮಾರ್ಗದರ್ಶಕರು|
ದೃಶ್ಯದ ಮಾಯೆಯ ಜಾಲವ ಸೀಳಿದ
ವಶ್ಯಯೋಗಾಚಾರ್ಯ ಯತಿರಾಜರು||
ಹರಿಸರ್ವೋತ್ತಮ ವಾಯು ಜೀವೋತ್ತಮವು ಎಂದ
ಗುರುಗಳು ಭೂಸುರ ಪುಂಗವರು|
ವರಸುಪ್ರಶಾಂತನ ರಜತ ಪೀಠಕೆ ತಂದ
ಮರುದಂಶ ಪೂರ್ಣಪ್ರಜ್ಞರು ರಾಯರು||
✍ ಪ್ರಶಾಂತ ಕುಮಾರ್ ಮಟ್ಟು

0 ಕಾಮೆಂಟ್‌ಗಳು