ಸೋಮವಾರ ಸಂಜೆ 8 ಘಂಟೆಗೆ ಉಡುಪಿಯ ಪರ್ಯಾಯ ಮಹೋತ್ಸವದ ಅಂಗವಾಗಿ ಪ್ರಸ್ತುತ ಭಾರತದ ಸಂಗೀತದ ಮಹೋನ್ನತ ಲೆಜೆಂಡಗಳಲ್ಲಿ ಒಬ್ಬರಾದ ಪಂಡಿತ್ ಮಹೇಶ್ ಕಾಳೆ ಅವರ ಭಕ್ತಿ ಸಂಗೀತದ ಕಾರ್ಯಕ್ರಮ - ಅಭಂಗ ವಾರಿ ಏರ್ಪಾಡಾಗಿದೆ. ಮಹೇಶ್ ಅವರಿಗೆ ಜಾಗತಿಕವಾಗಿ ಲಕ್ಷ ಲಕ್ಷ ಅಭಿಮಾನಿಗಳು ಇರುವ ಕಾರಣ ಉಡುಪಿಯ ಕೃಷ್ಣನ ನಾಡು ಅವರನ್ನು ಎರಡೂ ತೋಳುಗಳಿಂದ ಸ್ವಾಗತಿಸುವುದು ಖಂಡಿತ.
ಮೂರನೇ ವರ್ಷಕ್ಕೇ ಸೋಲೋ ಸಂಗೀತ ಕಛೇರಿ!
1976ರ ಜನವರಿ 12ರಂದು (ಗಮನಿಸಿ ಅದು ವಿವೇಕಾನಂದರ ಜಯಂತಿ) ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಆಗಿರುವ ಪೂನಾದಲ್ಲಿ ಜನಿಸಿದ ಮಹೇಶ್ ಕಾಳೆಗೆ ಬಾಲ್ಯದಿಂದಲೂ ಸಂಗೀತವೇ ಊಟ, ತಿಂಡಿ, ಆಟ ಎಲ್ಲವೂ ಆಗಿ ಹೋಗಿತ್ತು. ಅದಕ್ಕೆ ಕಾರಣ ಅವರ ಅಮ್ಮ ಮೀನಲ್ ಕಾಳೆ! ಆಕೆ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆ ಮತ್ತು ಪ್ರಸಿದ್ಧ ಸಂಗೀತ ಕಲಾವಿದೆ ವೀಣಾ ಸಹಸ್ರ ಬುದ್ಧೆ ಅವರ ಶಿಷ್ಯೆ!
ಆದ್ದರಿಂದ ತಾಯಿಯ ಜೋಗುಳದ ಮೂಲಕವೇ ಮಗನಿಗೆ ಸಂಗೀತದ ಪಾಠವು ಆರಂಭ ಆಗಿತ್ತು. ಮೂರನೇ ವರ್ಷಕ್ಕೆ ಮಹೇಶ್ ಕಾಳೆ ಸಂಗೀತದ ವೇದಿಕೆಯನ್ನೇರಿ ಲಘು ಸಂಗೀತದ ಕಾರ್ಯಕ್ರಮ ನೀಡಿದಾಗ ಎದುರು ಕೂತಿದ್ದ 5000 ಪ್ರೇಕ್ಷಕರು ಬೆರಗಾಗಿದ್ದರು. ಆ ಹುಡುಗನ ಧ್ವನಿಯಲ್ಲಿ ಅಂತಹ ಮಿರಾಕಲ್ ಇತ್ತು. ತಾಯಿಗೆ ತನ್ನ ಮಗನನ್ನು ಸಂಗೀತ ಕ್ಷೇತ್ರದಲ್ಲಿ ಹೇಗೆ ಬೆಳೆಸಬೇಕು ಎಂದು ಗೊತ್ತಿತ್ತು. ಮಗನ ವಿದ್ಯಾಭ್ಯಾಸಕ್ಕೆ ಏನೂ ತೊಂದರೆ ಆಗದ ಹಾಗೆ ಕೂಡ ಅವರು ನೋಡಿಕೊಂಡರು.
ಹಾಗೆ ಮಹೇಶ್ ಕಾಳೆ ಸಂಗೀತ ಶಿಕ್ಷಣದ ಜೊತೆಗೆ ಇಲೆಕ್ಟ್ರಿಕಲ್ ಇಂಜಿನಿಯರಿಂಗನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಪಂಡಿತ್ ಜಿತೇಂದ್ರ ಅಭಿಷೇಕಿ ಅವರ ಪಟ್ಟ ಶಿಷ್ಯ.
ತಾಯಿ 15 ವರ್ಷದ ಪ್ರಾಯದ ಮಗನನ್ನು ತಂದು ಒಪ್ಪಿಸಿದ್ದು ಮಹಾನ್ ಸಂಗೀತದ ಗುರುವಾದ ಪಂಡಿತ್ ಜಿತೇಂದ್ರ ಅಭಿಶೇಕಿ ಅವರಲ್ಲಿ. ಮರಾಠಾ ಅಭಂಗಗಳನ್ನು ತುಂಬಾ ಅದ್ಭುತವಾಗಿ ಹಾಡಿ ಮ್ಯೂಸಿಕಲ್ ಲೆಜೆಂಡ್ ಎಂದು ಕರೆದುಕೊಂಡವರು ಅವರು. ಅದರ ಜೊತೆಗೆ ಅಜಿತ್ ಖಡಕಡೆ ಮತ್ತು ರಾಹುಲ್ ದೇಶಪಾಂಡೆ ಎಂಬ ಸಹಪಾಠಿಗಳೂ ಅವರಿಗೆ ಜೊತೆಯಾದರು. ಗುರುಕುಲ ಪದ್ಧತಿಯಲ್ಲಿ ಎಂಟು ವರ್ಷಗಳ ಕಾಲ ಅವರು ಗುರುವಿನ ಪಾದಮೂಲದಲ್ಲಿ ಕುಳಿತು ಹಿಂದೂಸ್ತಾನಿ ಸಂಗೀತ ಅರೆದು ಕುಡಿದರು. ತನ್ನ ಮಹಾಗುರುವಿನ ಸಂಗೀತ ಕಛೇರಿಯು ಎಲ್ಲಿ ನಡೆದರೂ ತಂಬೂರಾ ಹಿಡಿದು ಹಿಂದೆ ಕೂತು ಧ್ವನಿಯನ್ನು ಸೇರಿಸಿ ಶಿಷ್ಯ ಹಾಡುವಾಗ ರೋಮಾಂಚನ ಪಟ್ಟದ್ದೇ ಪಟ್ಟದ್ದು!
ಹಾಗೆಯೇ ಗುರುವಿನ ಪುತ್ರನಾದ ಶೌನಕ್ ಅಭಿಶೇಕೀಯವರ ಒಡನಾಟವೂ ಅವರನ್ನು ತುಂಬಾ ಬೆಳೆಸಿತು.
ಮೈ ಮರೆತು ವಿಠ್ಠಲ ವಿಠ್ಠಲ.....!
ಮಹೇಶ್ ಕಾಳೆ ಅವರ ಸಂಗೀತ ಕಾರ್ಯಕ್ರಮಗಳು ಹೇಗಿರುತ್ತವೆ ಅಂದರೆ ಅದರಲ್ಲಿ ಹಿಂದೂಸ್ತಾನಿ ಕ್ಲಾಸಿಕ್, ಸೆಮಿ ಕ್ಲಾಸಿಕ್, ಮರಾಠಿ ನಾಟ್ಯ ಸಂಗೀತ್ ಇವೆಲ್ಲದರ ಹಿತಮಿತವಾದ ಮಿಶ್ರಣ ಇರುತ್ತದೆ. ಅವರು ಶುದ್ಧ ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ ಅದ್ಭುತವಾದ ಹಿಡಿತವನ್ನು ಹೊಂದಿದ್ದಾರೆ.
ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ಅವರು ಸಂಗೀತದ ಕಾರ್ಯಕ್ರಮ ನೀಡಿದ್ದಾರೆ. ಕೈಯ್ಯಲ್ಲಿ ತಾಳವನ್ನು ಹೊಡೆಯುತ್ತ, ಕಣ್ಣು ಮುಚ್ಚಿ ಅವರು ವಿಠ್ಠಲ ವಿಠ್ಠಲ ವಿಠ್ಠಲ ಎಂದು ಮೈ ಮರೆತು ಹಾಡುತ್ತಾ ಹೋದಾಗ ಅಲ್ಲಿ ಪಂಡರಾಪುರವೇ ನಿರ್ಮಾಣ ಆಗುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅದರ ಜೊತೆಗೆ ಎದುರು ಕೂತ ಸಾವಿರಾರು ಪ್ರೇಕ್ಷಕರನ್ನು ತಮ್ಮ ಜೊತೆಗೆ ಹಾಡಿಸುವ, ಜೊತೆಗೆ ತೆಗೆದುಕೊಂಡು ಹೋಗುವ ಶಕ್ತಿ ಅವರಿಗೆ ಇದೆ!
ಪ್ರೇಕ್ಷಕರ ಜೊತೆಗೆ ಆಧ್ಯಾತ್ಮಿಕ ಅನುಸಂಧಾನ!
ಅದರ ಜೊತೆಗೆ ಹೆಡ್ ಮೈಕ್ ಹಾಕಿಕೊಂಡು ನೇರವಾಗಿ ಜನರ ಮಧ್ಯೆ ಬಂದು ಹಾಡುವ, ಎಲ್ಲರನ್ನೂ ಹಾಡಿಸುವ ಅವರ ಶಕ್ತಿ ಅದು ಅದ್ಭುತವಾದದ್ದು! ಸಹಸ್ರ ಸಹಸ್ರ ಪ್ರೇಕ್ಷಕರ ಜೊತೆಗೆ ಅಷ್ಟೊಂದು ಸಂವಾದಿ ಆಗಿ ಹಾಡುವ, ಆಧ್ಯಾತ್ಮಿಕವಾದ ಅನುಸಂಧಾನ ಮಾಡುವ ಇನ್ನೊಬ್ಬ ಕಲಾವಿದ ಇಲ್ಲ ಅನ್ನುವುದು ನನ್ನ ಖಚಿತ ಅಭಿಪ್ರಾಯ!
ಗೇಟ್ ವೇ ಆಫ್ ಇಂಡಿಯಾದ ಮುಂದೆ ಸೇರಿದ್ದ ಲಕ್ಷಾಂತರ ಪ್ರೇಕ್ಷಕರ ಮುಂದೆ ಅವರು ಒಮ್ಮೆ ನಡೆಸಿ ಕೊಟ್ಟಿದ್ದ TRIBUTE CONCERT ಅದು ರಾಷ್ಟ್ರೀಯ ದಾಖಲೆಯೇ ಆಗಿ ಹೋಗಿತ್ತು. ಭೀಮಸೇನ್ ಜೋಶಿಯವರು ಪೂನಾದಲ್ಲಿ ಆರಂಭ ಮಾಡಿದ್ದ ಅವರ ಗುರು ಸವಾಯಿ ಗಂಧರ್ವರ ನೆನಪಿನ ಕಚೇರಿಯಲ್ಲಿ ಮಹೇಶ್ ಕಾಳೆ ಹಾಡಿದಾಗ ಸೇರಿದ್ದ ಸಾವಿರಾರು ಜನರು ಅವರಿಗೆ ಓವೇಶನ್ ಕೊಟ್ಟಿದ್ದರು.
ಮಹೇಶ್ ಕಾಳೆ ಕಚೇರಿಯಲ್ಲಿ ಅದ್ಭುತವಾದ ವೈವಿಧ್ಯ!
ಟುಮ್ರಿ, ದಾದ್ರಾ, ಭಜನ್, ತಾಪಾ, ಅಭಂಗ್ ಯಾವುದನ್ನು ಅನುಭವಿಸಿ ಹಾಡಿದಾಗಲೂ ಅವರು ಅವರದ್ದೇ ಒಂದು ಸಿಗ್ನೇಚರ್ ಒತ್ತಿರುತ್ತಾರೆ! ಮೂರು ಸ್ತರಗಳಲ್ಲಿಯೂ ಅವರ ಸ್ವರ ಸಂಚಾರವು ಅದು ಅವರಿಗೆ ಮಾತ್ರವೇ ಸಾಧ್ಯವಾಗುತ್ತದೆ. ಕರ್ನಾಟಕಕ್ಕೆ ಬಂದಾಗ ಅವರು ಹಾಡುವ ( ಶುದ್ಧ ಸಾಹಿತ್ಯದ) ಕನ್ನಡದ ಹಾಡುಗಳನ್ನು ಕೇಳುವುದೇ ಒಂದು ಅದ್ಭುತವಾದ ಅನುಭೂತಿ!
ಹಿನ್ನೆಲೆ ಸಂಗೀತಕ್ಕೆ ಒಲಿದಿದೆ ರಾಷ್ಟ್ರ ಪ್ರಶಸ್ತಿ.
ಒಂದು ಮರಾಠಿ ಸಿನೆಮಾದಲ್ಲಿ ಹಿನ್ನೆಲೆ ಹಾಡನ್ನು ಹಾಡಿದ್ದಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯು ಕೂಡ ದೊರೆತಿದೆ! ಟೈಮ್ಸ್ ಆಫ್ ಇಂಡಿಯಾ ನಡೆಸಿದ ಭಾರತದ ಮ್ಯೂಸಿಕಲ್ ಲೆಜೆಂಡಗಳ ಸಮೀಕ್ಷೆಯಲ್ಲಿ ಅವರಿಗೆ ಅತ್ಯುನ್ನತವಾದ ಸ್ಥಾನವೂ ದೊರೆತಿದೆ. ಅವರದ್ದೇ ವಯಸ್ಸಿನ ರಾಹುಲ್ ದೇಶಪಾಂಡೆ ಮತ್ತು ಕೌಶಿಕಿ ಚಟರ್ಜಿ ಅವರ ಜೊತೆಗೆ ಮಹೇಶ್ ಕಾಳೆ ಅವರ ಸಂಗೀತ ಜುಗಲ್ಬಂದಿಯ ಕಾರ್ಯಕ್ರಮಗಳು ಭಾರೀ ಜನ ಮೆಚ್ಚುಗೆಯನ್ನು ಪಡೆದಿವೆ. (ಯು ಟ್ಯೂಬ್ ವೇದಿಕೆಯಲ್ಲಿ ಕಾನಡಾ ರಾಜಾ ಪಂಡರಿಚಾ ಹಾಡಿನ ಜನಪ್ರಿಯತೆಯನ್ನು ಒಮ್ಮೆ ಗಮನಿಸಿ)
ಜಗತ್ತಿನಾದ್ಯಂತ ಅವರಿಗೆ ಅಭಿಮಾನಿಗಳು.
ಮಹೇಶ್ ಕಾಳೆ ಜಗತ್ತಿನ ನೂರಾರು ವೇದಿಕೆಗಳಲ್ಲಿ ಸಂಗೀತದ ಕಾರ್ಯಕ್ರಮ ನೀಡಿದ್ದಾರೆ. ಎಲ್ಲ ಕಡೆಯೂ ಗೆದ್ದಿದ್ದಾರೆ. ಅವರು ಒಬ್ಬ ಅದ್ಭುತವಾದ ಮ್ಯೂಸಿಕಲ್ ಕಂಪೋಸರ್ ಕೂಡ ಆಗಿರುವ ಕಾರಣ ಅವರು ಪ್ರತೀಯೊಂದು ವೇದಿಕೆಗಳಲ್ಲಿ ದಿನವೂ ಬೇರೆ ಬೇರೆಯಾಗಿ ಮೂಡಿಬರುತ್ತಾರೆ! ಅವರ ಮ್ಯೂಸಿಕಲ್ ಆಲ್ಬಂ ಹಾಗೂ ಡಿವಿಡಿಗಳಿಗೆ ಜಾಗತಿಕವಾದ ಭಾರೀ ಮಾರ್ಕೆಟ್ ಇದೆ. ಭಾರತದ ಎಲ್ಲ ಸಂಗೀತದ ಮಹೋತ್ಸವಗಳಲ್ಲಿಯೂ ಅವರು ಹಾಡಿದ್ದಾರೆ. ಮಹೇಶ್ ಕಾಳೆ ಬರುತ್ತಾರೆ ಎಂದರೆ ಸಾವಿರಾರು ಯುವಕ, ಯುವತಿಯರು ಬಂದು ಸೇರಿ ಮೈ ಮರೆತು ಕೂತು ಆಲಿಸುತ್ತಾರೆ. ಸಾವಿರಾರು ಜನರು ಕಣ್ಣೀರು ಸುರಿಸುತ್ತಾರೆ. ಅದು ಮಹೇಶ್ ಕಾಳೆ ಅವರ ಶಕ್ತಿ.
ಈಗ ಅಮೆರಿಕದಲ್ಲಿ ವಾಸವಾಗಿರುವ ಅವರಿಗೆ ಜಗತ್ತಿನಾದ್ಯಂತ ಶಿಷ್ಯರು ಇದ್ದಾರೆ. ' ಮಹೇಶ್ ಕಾಳೆ ಸ್ಕೂಲ್ ಆಫ್ ಮ್ಯೂಸಿಕ್' ಮೂಲಕ ಅವರು ನಡೆಸುವ ಆನ್ಲೈನ್ ಸಂಗೀತದ ತರಗತಿಗಳಿಗೆ ಭಾರತದಲ್ಲಿಯೂ ಸಾವಿರಾರು ಶಿಷ್ಯರಿದ್ದಾರೆ.
ನನ್ನನ್ನು ಯಾವ ಸಂಗೀತದ ದಿಗ್ಗಜರ ಜೊತೆಗೆ ಕೂಡ ಹೋಲಿಕೆ ಮಾಡಬೇಡಿ. ನಾನಿನ್ನೂ ಸಂಗೀತದ ವಿದ್ಯಾರ್ಥಿ ಮಾತ್ರ ಎಂದು ವಿನೀತವಾಗಿ ನುಡಿಯುವ ಪ. ಮಹೇಶ್ ಕಾಳೆ ಸೋಮವಾರ ಉಡುಪಿಗೆ ಬಂದು ಹಾಡಲಿದ್ದಾರೆ ಅನ್ನೋದು ಬಹಳ ದೊಡ್ಡ ಸುದ್ದಿ. ಉಡುಪಿಯ ವೇದಿಕೆಯನ್ನು ಪಂಢರಪುರ ಮಾಡುವ ಶಕ್ತಿ ಅವರಿಗೆ ಖಂಡಿತವಾಗಿಯೂ ಇದೆ!
-ರಾಜೇಂದ್ರ ಭಟ್

0 ಕಾಮೆಂಟ್‌ಗಳು