ಮಂಗಳೂರು : ದಕ್ಕೆಯಲ್ಲಿ ಲೈಟ್ ಕಂಬ ಮುರಿದು ಬಿದ್ದು ಮೀನು ಕಾರ್ಮಿಕ ಸಾವು!

ಮಂಗಳೂರು ನಗರದ ದಕ್ಕೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಲೈಟ್ ಕಂಬವೊಂದು ಬುಡದಿಂದಲೇ ಮುರಿದು ಬಿದ್ದು ಮೀನು ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಮೃತರನ್ನು ತಮಿಳುನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ. ಅವರು ದಕ್ಕೆಯಲ್ಲಿ ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಪ್ರತಿದಿನದಂತೆ ಇಂದು ಬೆಳಗ್ಗೆ ಮೀನಿನ ಬಾಕ್ಸ್‌ಗಳನ್ನು ಹೊರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಲೈಟ್ ಕಂಬ ಏಕಾಏಕಿ ಬುಡದಿಂದಲೇ ಮುರಿದು ಕೆಳಗೆ ಬಿದ್ದಿದೆ. ಆ ವೇಳೆ ಸಮೀಪದಲ್ಲಿದ್ದ ಮುರುಗನ್ ಅವರ ಮೇಲೆ ಕಂಬ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲೈಟ್ ಕಂಬದ ನಿರ್ವಹಣೆಯಲ್ಲಿ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು