‘ಸಮಾಧಾನ ಮಹೋತ್ಸವ’ ತಡೆಯಲು ಬಂದ ಹಿಂಜಾವೇ ಕಾರ್ಯಕರ್ತರ ಬಂಧನ!

ಹಿಂದು ಜಾಗರಣ ವೇದಿಕೆಯ ಪ್ರತಿಭಟನೆ, ಎಚ್ಚರಿಕೆ ನಡುವೆಯೂ ತಮಿಳುನಾಡು ಮೂಲದ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದ ಪೀಸ್ ಫೆಸ್ಟಿವಲ್ ಹೆಸರಿನ ಮೂರು ದಿನಗಳ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ಆರಂಭಗೊಂಡಿದೆ.

ಉಡುಪಿ ನಗರದ ಮಿಷನ್ ಕಂಪೌಂಡಿನಲ್ಲಿ ಮಾರ್ಚ್ 20ರಿಂದ 22ರ ವರೆಗೆ ಕಾರ್ಯಕ್ರಮ ಆಯೋಜಿಸಿದ್ದು, ಇದರ ಹಿಂದೆ ಮತಾಂತರದ ಷಡ್ಯಂತ್ರ ಇದೆ, ಲಾಜರಸ್ ಭಾಗವಹಿಸಲು ಅವಕಾಶ ನೀಡಬಾರದೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆಕ್ಷೇಪಿಸಿದ್ದರು. ಅಲ್ಲದೆ, ಜಿಲ್ಲಾಡಳಿತಕ್ಕೂ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಒತ್ತಾಯ ಮಾಡಿದ್ದರು.

ಆದರೆ ಕಾರ್ಯಕ್ರಮ ಸಂಘಟಕರು ಹೈಕೋರ್ಟ್ ಮೂಲಕ ಆದೇಶ ತಂದಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಭದ್ರತೆ ನೀಡಬೇಕು ಎನ್ನುವ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಪೊಲೀಸರು ಕಾರ್ಯಕ್ರಮಕ್ಕೆ ಭದ್ರತೆ ನೀಡಿದ್ದಾರೆ. ತಮಿಳುನಾಡಿನ ಮಿಷನರಿ ಮೋಹನ್ ಲಾಝರಸ್ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಕ್ರಮವೂ ಆರಂಭಗೊಂಡಿದೆ. ಇದೇ ವೇಳೆ, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಶ್ರೀಕಾಂತ್ ಶೆಟ್ಟಿ ಮತ್ತಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನಲ್ಲಿ ಲಾಝರಸ್ ವಿರುದ್ಧ ಹಲವು ಕೇಸು ದಾಖಲಾಗಿದ್ದು, ಹಿಂದು ವಿರೋಧಿ ಭಾಷಣಕ್ಕಾಗಿ ಕುಖ್ಯಾತಿ ಪಡೆದಿದ್ದಾರೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿಯಿಂದಿರುವ ಉಡುಪಿಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದರು. ಇದರಂತೆ, ಪೊಲೀಸರು ಕಾರ್ಯಕ್ರಮ ಸಂಘಟಕರಿಗೆ ನೋಟೀಸ್ ನೀಡಿ, ಲಾಝರಸ್ ಬದಲು ಬೇರೆ ಭಾಷಣಕಾರರನ್ನು ಕರೆಯುವಂತೆ ಸಲಹೆ ಮಾಡಿದ್ದರು. ಆದರೆ ಸಂಘಟಕರು ಹೈಕೋರ್ಟ್ ಮೂಲಕ ಅನುಮತಿ ಪಡೆದು ಕಾರ್ಯಕ್ರಮ ನಡೆಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು