ಉಡುಪಿ: ಪೂರ್ಣಪ್ರಜ್ಞಾ ಕಾಲೇಜು (ಸ್ವಾಯತ್ತ), ಉಡುಪಿ ಇದರ ಆಶ್ರಯದಲ್ಲಿ ವಾರ್ಷಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಉಡುಪಿ ಇದರ ಸಹ ಪ್ರಾಧ್ಯಾಪಕರಾದ ಕೃಷ್ಣ ಭಟ್ ಅವರು ಮಾತನಾಡಿ, “ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಮನೋಭಾವ ಜೀವನದಲ್ಲಿ ಅತ್ಯಂತ ಅಗತ್ಯವಾಗಿದೆ. ಇಂತಹ ಚಟುವಟಿಕೆಗಳ ಮೂಲಕ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು” ಎಂದು ತಿಳಿಸಿದರು.
ಪಿಐಎಂ ನಿರ್ದೇಶಕರಾದ ಡಾ. ಪಿ.ಎಸ್. ಐತಾಳ್, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್, ಐಕ್ಯೂಎಸಿ ಸಂಯೋಜಕರಾದ ವಿನಯ್ ಕುಮಾರ್ ಡಿ, ಸ್ಟೂಡೆಂಟ್ ವೆಲ್ಫೇರ್ ಅಧಿಕಾರಿಗಳಾದ ಸುಮಲತಾ ಪಿ.ಜೆ ಮತ್ತು ಪ್ರತಿಭಾ ಸಿ ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕೆ.ಪಿ. ನೇಹಾ, ಶರಲ್ ಕಾರ್ನೆಲಿಯೋ, ದೀಪ ಬಿ, ವಂದನಾ ಆರ್ ಹೆಗ್ಡೆ ,ಪ್ರೀತಿ ಶೆಟ್ಟಿ ,ಸಫಾ ಆಮಿನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಾರ್ಷಿಕ ವರದಿಯನ್ನು ನೇಹಾ ವಾಚಿಸಿದರು. ಭಾಗ್ಯಶ್ರೀ ಎನ್‌ಸಿಸಿ ವಿಭಾಗದ ಚಟುವಟಿಕೆಗಳ ವರದಿ ಮಂಡಿಸಿದರು. ಕಾರ್ತಿಕ್ ಎನ್‌ಸಿಸಿ ನೌಕಾ ವಿಭಾಗದ ವರದಿಯನ್ನು, ಜ್ಞಾನ ಎನ್‌ಎಸ್‌ಎಸ್ ವರದಿಯನ್ನು ಹಾಗೂ ಅಭಯ್ ಕ್ರೀಡಾ ವರದಿಯನ್ನು ವಾಚಿಸಿದರು.
ಸುಮಾರು ಐವತ್ತೇಳು ದತ್ತಿನಿಧಿಗಳು ಹಾಗೂ ವಿಷಯವಾರು ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಹಾಗು ಕಾಲೇಜಿನ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಮಂಜುನಾಥ ಕರಬ ಸ್ವಾಗತಿಸಿದರು. ಶ್ರದ್ಧಾ ವಂದಿಸಿದರು. ಸಿರಿ ಕಾರ್ಯಕ್ರಮವನ್ನು ನಿರೂಪಿಸಿದರು.

0 ಕಾಮೆಂಟ್‌ಗಳು