‘ಪ್ರಜ್ಞಾ 2026’ರ ಸಮಾರೋಪ ಸಮಾರಂಭ

ಉಡುಪಿಯ ಪ್ರತಿಷ್ಠಿತ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ), ಆಯೋಜಿಸಿದ ರಾಜ್ಯ ಮಟ್ಟದ ಎರಡು ದಿನಗಳ ಅಂತರ ಕಾಲೇಜು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉತ್ಸವ ‘ಪ್ರಜ್ಞಾ 2026’ರ ಸಮಾರೋಪ ಸಮಾರಂಭವು ಮಂಗಳವಾರ ಸಂಜೆ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಆಶೀರ್ವಚಿಸಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ತಮ್ಮಲ್ಲಿ ಮೈಗೂಡಿಸಿ ಕೊಂಡರೆ ಹೇಗೆ ಸಂಸ್ಕರಣೆಗೆ ಒಳಗಾದ ಹಾಲು ತುಪ್ಪವಾಗಿ ಧೀರ್ಘ ಕಾಲ ಬಾಳಿ, ಸರ್ವ ರೋಗಗಳಿಗೂ ಔಷಧಿಯಾಗುತ್ತದೋ ಅದೇ ರೀತಿ ಶ್ರೇಷ್ಠತೆಯನ್ನು ತಮ್ಮದಾಗಿಸಿಕೊಂಡು, ಸಮಾಜಕ್ಕೆ ಉತ್ತಮ ಆಸ್ತಿ ಆಗಬಹುದು ಎಂದರು. ಹಾಗೆಯೇ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಒಳ್ಳೆಯ ಜ್ಞಾನ, ಪ್ರತಿಭೆ ಸಂಸ್ಕಾರ ಪಡೆದು ಸಮನ್ವಯದ ದೇಶವನ್ನು ನಿರ್ಮಿಸಲು ಕಾರಣರಾಗಬೇಕು ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆ ಆರಂಭವಾದಂದಿನಿಂದ, ಸಂಸ್ಥೆಯು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ, ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ವೇದಿಕೆಯನ್ನು ನಿರ್ಮಿಸುತ್ತ ಬಂದಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಇಂತಹ ಸ್ಪರ್ಧೆಗಳು ಅದಕ್ಕೆ ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು.

ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮಹಾಮಾಯ ಪ್ರಸಾದ್ ರಾಯ್ ಅವರು ಬ್ಯಾಂಕ್ ಇರುವುದು ಲಾಭ ಮಾಡುವುದಕ್ಕಲ್ಲ, ಸಮಾಜ ಸೇವೆಗಾಗಿ ಹಾಗಾಗಿ ನಾವು ಪೂರ್ಣ ಪ್ರಜ್ಞ ಕಾಲೇಜಿನೊಂದಿಗೆ ದೇಶದ ಬೆಳವಣಿಗೆಯಲ್ಲಿ ಕೈಜೋಡಿಸಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ರಾಮು. ಎಲ್ ಅವರು ಎರಡು ದಿನಗಳಲ್ಲಿ 33 ಶೈಕ್ಷಣಿಕ ಹಾಗೂ 6 ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ರಾಜ್ಯದ ಸುಮಾರು 29 ಕಾಲೇಜುಗಳಿಂದ 562 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಸಮಾಜಕ್ಕೆ ಕೊಡುಗೆಗಳನ್ನು ನೀಡುವಂತಹ ನಾಯಕರುಗಳನ್ನು ಸೃಷ್ಟಿಸುತ್ತಿದ್ದೇವೆ ಎಂದು ಹೇಳಿದರು.

ಉತ್ಸವದ ಅಂಗವಾಗಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದಿದ್ದು, ರಾಜ್ಯದ ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಪ್ರಥಮ ಸಮಗ್ರ ಪ್ರಶಸ್ತಿಯನ್ನು ಮತ್ತು 10,000 ನಗದನ್ನು ಡಾ ಬಿ ಬಿ ಹೆಗಡೆ ಕಾಲೇಜು ಕುಂದಾಪುರ ಇವರು, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಎಂಜಿಎಂ ಕಾಲೇಜು ಪಡೆದುಕೊಂಡಿತು.

ಎಸ್. ಬಿ. ಐ. ರೀಜನಲ್ ಆಫೀಸ್ ಮುಖ್ಯ ವ್ಯವಸ್ಥಾಪಕರಾದ ಶ್ರೀ ಕೃಷ್ಣರಾಜ ಭಟ್ ಕೀಳಿಂಜೆ, ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುರೇಶ್ ತುಂಗ, ಕಾಲೇಜು ಆಂತರಿಕ ಗುಣಮಟ್ಟ ಖಾತರಿ ಘಟಕದ ಸಹ ಸಂಯೋಜಕರಾದ ಡಾ. ಲಕ್ಷ್ಮೀಶ ರಾವ್, ಡಾ. ಆನಂದ ರಾಯಮಾನೆ, ಡಾ. ಮಂಜುನಾಥ ಕರಬ, ಡಾ. ಸಂದೀಪ್ ಸತ್ಯಮೂರ್ತಿ, ಶ್ರೀಮತಿ ಧನ್ಯಶ್ರೀ, ಶ್ರೀಮತಿ ಸುಮಲತಾ ಪಿ. ಜೆ, ಡಾ. ಶಿವಕುಮಾರ್ ಅಳಗೋಡು, ವಿದ್ಯಾರ್ಥಿ ಪ್ರತಿನಿಧಿಗಳಾದ ಭಾರ್ಗವ ಭಟ್, ಕೆ.ಪಿ ನೇಹಾ, ಹಾಗೂ ಸಂಯೋಜಕರು ಉಪಸ್ಥಿತರಿದ್ದರು. ಡಾ. ರಕ್ಷಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಪ್ರತಿಭಾ ಸಿ. ಆಚಾರ್ಯ ಸ್ವಾಗತಿಸಿ, ಡಾ. ಸೌಮ್ಯ ಶೆಟ್ಟಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು