ಉಡುಪಿ: "ಮನೆಮನೆಯಲ್ಲಿ ಯೋಗ ಪಸರಿಸಬೇಕು, ಆಬಾಲವೃದ್ದರಾಗಿ ಪ್ರತಿಯೊಬ್ಬರೂ ಯೋಗಾಸನ-ಪ್ರಾಣಾಯಾಮ ಮಾಡಬೇಕು, ಈ ಮೂಲಕ ಮನೆಗಳಲ್ಲಿ, ಕೇರಿಗಳಲ್ಲಿ, ರಾಜ್ಯದಲ್ಲಿ, ತನ್ಮೂಲಕ ದೇಶದಾದ್ಯಂತ ಯೋಗ ಪ್ರಸಾರವಾಗಬೇಕು. ಇದು ಯೋಗ ಋಷಿ ಬಾಬಾ ರಾಮದೇವ್ ಜೀ ಅವರ ಕನಸು. ಇದನ್ನು ನನಸಾಗಿಸಲು ಪತಂಜಲಿ ಯೋಗ ಪೀಠ, ಹರಿದ್ವಾರ ಸಂಸ್ಥೆಯನ್ನು ಹುಟ್ಟುಹಾಕಿ, ಬಾಲಕೃಷ್ಣಜೀ ಅವರ ಸಹಯೋಗದೊಂದಿಗೆ ಮುನ್ನಡೆಸುತ್ತಿದ್ದಾರೆ. ಜತೆಗೆ ಸ್ವದೇಶೀ ವಸ್ತುಗಳ ಬಳಕೆ, ಸ್ವಾವಲಂಬನೆ, ಚಾರಿತ್ರ್ಯ ನಿರ್ಮಾಣ, ರಾಷ್ಟ್ರಕ್ಕಾಗಿ ಸಮರ್ಪಣೆ ಇತ್ಯಾದಿ ವಿಚಾರಗಳೆಡೆಗೆ ಯುವಕರ ಗಮನ ಸೆಳೆಯುತ್ತಿದ್ದಾರೆ.ಯೋಗ ಪೀಠದ ಕರ್ನಾಟಕ ರಾಜ್ಯ ವರಿಷ್ಠ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುವ ಸುಯೋಗ ನನ್ನದು. ಪತಂಜಲಿ ಯೋಗ ಸಮಿತಿ ಉಡುಪಿಯ ಪದಾಧಿಕಾರಿಗಳ ಶ್ರಮ,ದೂರದರ್ಶಿತ್ವದ ಫಲವಾಗಿ ವಿದ್ಯೋದಯ ಸಭಾಂಗಣದಲ್ಲಿ 21-04-2026ರಿಂದ ನಡೆಯುತ್ತಿರುವ ಈ 25 ದಿನಗಳ ಎಡ್ವಾನ್ಸ್ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವ ಸೌಭಾಗ್ಯ ನನ್ನ ಪಾಲಿಗೆ ಎಂದು ಶ್ರೀ ಭವರ್ಲಾಲ್ ಆರ್ಯ ಜೀ ನುಡಿದರು. ಯಾವುದೇ ಕಾರ್ಯಕ್ರಮದಲ್ಲಿ ಸಭಿಕರಾಗಿ ಭಾಗವಹಿಸುವಾಗ ಸುಮ್ಮನೆ ಕುಳಿತುಕೊಳ್ಳದೆ, ಪ್ರಾಣಾಯಾಮ ಮಾಡಿದರೆ ನಿಮ್ಮ ಆರೋಗ್ಯ, ಕೇಳ್ಮೆ ಚೆನ್ನಾಗಿರುತ್ತದೆ" ಎನ್ನುವ ಕಿವಿಮಾತು ಹೇಳಿದರು.ಯೋಗ ಪೀಠ ಹರಿದ್ವಾರದಿಂದ ಪರಿಣತ ಪಡೆದ ವಿವಿಧ ಜಿಲ್ಲೆಯ 13 ನುರಿತ ಯೋಗ ಶಿಕ್ಷಕರು ಶಿಬಿರಾರ್ಥಿಗಳಿಗೆ ವೈವಿಧ್ಯಮಯ ಶಿಕ್ಷಣ ನೀಡಿದರು. ಶಿಬಿರಾರ್ಥಿಗಳಿಗೆ ಲಿಖಿತ ಹಾಗೂ ಪ್ರಾಯೋಗಿಕ (Theory and Practical) ಪರೀಕ್ಷೆ ಏರ್ಪಡಿಸಿದ್ದು, ಪ್ರಥಮ ಮೂರು ಸ್ಥಾನ ಗಳಿಸಿದವರನ್ನು ಬಹುಮಾನಗಳೊಂದಿಗೆ ಪುರಸ್ಕರಿಸಿ, ಎಲ್ಲಾ ಶಿಬಿರಾರ್ಥಿಗಳಿಗೆ ಶ್ರೀ ಆರ್ಯ ಜೀ ಪ್ರಮಾಣಪತ್ರ ವಿತರಿಸಿದರು. ಶಿಬಿರಾರ್ತಿಗಳು ತಮಗಾದ ಅನುಭವಗಳನ್ನು ಹಂಚಿಕೊಂಡರು.
ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದ ಶ್ರೀ ರಾಘವೇಂದ್ರ ಆಚಾರ್ಯ ಜೀ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಾಬಾ ರಾಮದೇವ್ ಜೀ ಅವರ ಮುಂದಾಳುತ್ವದಲ್ಲಿ ನಡೆದ 'ಇಂಡಿಯಾ ಎಗೈನ್ಸ್ಟ್ ಕರಪ್ಷನ್' ಪ್ರತಿಭಟನೆಯಲ್ಲಿ ತಾನು ಪಾಲ್ಗೊಂಡಿದ್ದು, 2013ರಲ್ಲಿ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಹರಿದ್ವಾರದಲ್ಲಿ ನಡೆದ ಅಭೂತಪೂರ್ವ ಸಂತ ಸಮ್ಮೇಳನವನ್ನು ಬಾಬಾ ರಾಮದೇವ್ ಸಂಘಟಿಸಿದುದನ್ನು ನೆನಪು ಮಾಡಿಕೊಂಡು, ವಿಶ್ವದಾದ್ಯಂತ ರಾಮದೇವ್ ಜೀ ಅವರ ಯೋಗಪ್ರಸಾರ ದಿಗ್ವಿಜಯವನ್ನು ಶ್ಲಾಘಿಸಿದರು.
ಇನ್ನೋರ್ವ ಅತಿಥಿ ವಿದ್ಯೋದಯ ವಿದ್ಯಾ ಸಂಸ್ಥೆಯ ಜತೆಕಾರ್ಯದರ್ಶಿ ಶ್ರೀಮತಿ ರೂಪಾ ನಾಗರಾಜ ಬಲ್ಲಾಳ್ ಅವರು ಮಾತನಾಡುತ್ತಾ, ಹರೆಯದಲ್ಲಿ ತಾನು ಆಸ್ತಮಾದಿಂದ ಬಳಲಿ, ಮೆಟ್ಟಿಲೇರಲೂ ಕಷ್ಟ ಪಟ್ಟುದು, ಬಳಿಕ ಸತತ ಯೋಗಾಭ್ಯಾಸ ಮಾಡಿ, ಆರೋಗ್ಯಭಾಗ್ಯ ಹೊಂದಿದುದನ್ನು ನೆನಪಿಸಿಕೊಂಡರು. ಮಗಳ ಪ್ರೋತ್ಸಾಹದೊಂದಿಗೆ ತಾನು ಕೆಎಂಸಿ ಮಣಿಪಾಲದಲ್ಲಿ ಯೋಗ ಎಂಎಸ್ಸಿಯಲ್ಲಿ ಪ್ರಥಮ ರಾಂಕ್ ಪಡೆದಿದ್ದು, "ಆಜೀವಪರ್ಯಂತ ಯೋಗಾಭ್ಯಾಸ ಮಾಡುತ್ತೇನೆ, ಇದರಿಂದ ತನ್ನ ಜೀವನೋತ್ಸಾಹ ಎಂದಿಗೂ ಕುಗ್ಗುವುದಿಲ್ಲ," ಎಂದರು.
"124 ಮಂದಿ ಯೋಗಾರ್ಥಿಗಳು ಈ ಎಡ್ವಾನ್ಸ್ ಯೋಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು, ಪತಂಜಲಿ ಯೋಗ ಸಮಿತಿ ಉಡುಪಿಯ ಸಂಘಟಕರಿಗೆ ಅತ್ಯಂತ ಸಾರ್ಥಕತೆಯ ಕ್ಷಣ" ಎಂದು ಇನ್ನೋರ್ವ ಅತಿಥಿ ಶ್ರೀ ರಾಘವೇಂದ್ರ ರಾವ್ ಜೀ ಅವರು ಹೇಳಿದರು.
ಶ್ರೀ ರಾಘವೇಂದ್ರ ಭಟ್ ಜೀ ಗಣ್ಯರನ್ನು, ಶಿಬಿರಾರ್ಥಿಗಳವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶ್ರೀ ರಂಜಿತ್ ಕೆ ಎಸ್ ಜೀ ಕಾರ್ಯಕ್ರಮ ನಿರ್ವಹಿಸಿದರು.ಲಕ್ಷ್ಮಣ್ ಜೀ ಧನ್ಯವಾದ ಸಮರ್ಪಿಸಿದರು. ಅಜೀವ ಸದಸ್ಯರಾದ ವಿಶ್ವನಾಥ್ ಭಟ್ ಜೀ, ಸುರೇಶ ಭಕ್ತ ಜೀ,ಮಹಿಳಾ ಪ್ರಭಾರಿ ಶ್ರೀಮತಿ ಲೀಲಾ ಆರ್ ಅಮೀನ್, ಕಿಸಾನ್ ಪ್ರಭಾರಿ ಅನಂತರಾಯ ಶೆಣೈ ಜೀ, ಯುವಪ್ರಭಾರಿ ಜಗದೀಶ್ ಕುಮಾರ್ ಜೀ, ಮಾಧ್ಯಮ ಪ್ರಭಾರಿ ಹರಿಪ್ರಸಾದ್ ಕೆ ಜೀ ವೇದಿಕೆಯಲ್ಲಿದ್ದರು.

0 ಕಾಮೆಂಟ್‌ಗಳು