ಜೀವಶಾಸ್ತ್ರ ಉಪನ್ಯಾಸಕರ ಪುನಶ್ಚೇತನಾ ತರಬೇತಿ ಕಾರ್ಯಾಗಾರ

ಪದವಿಪೂರ್ವ ಕಾಲೇಜು ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ, ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿ ಜಿಲ್ಲೆಯ ಜೀವಶಾಸ್ತ್ರ ಉಪನ್ಯಾಸಕರಿಗಾಗಿ ಒಂದು ದಿನದ ಪುನಶ್ಚೇತನಾ ತರಬೇತಿ ಕಾರ್ಯಾಗಾರವು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. 

ಕಾರ್ಯಾಗಾರದ ಉದ್ಘಾಟನೆ ನಡೆಸಿದ ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್, ಬೆಂಗಳೂರು ಇದರ ಗೌರವ ಕಾರ್ಯದರ್ಶಿಯಾದ ಡಾ.ಎ.ಪಿ. ಭಟ್‌ರವರು "ಇತ್ತೀಚೆಗೆ ಮಳೆ ಕಡಿಮೆಯಾಗಲು ಮನುಷ್ಯನ ವ್ಯವಹಾರವೇ ಕಾರಣವಾಗಿದೆ. ನಮ್ಮ ಸುತ್ತ ಬೆಳೆದ ಸಸ್ಯಗಳು ನಮ್ಮ ಮಾತು ಕೇಳುತ್ತವೆ. ಅದಕ್ಕೆ ಪ್ರತಿಕ್ರಿಯಿಸುತ್ತವೆ. ಇಂತಹ ಅನೇಕ ಅನುಭವ ನನಗೆ ಆಗಿದೆ" ಎಂದರು. 

ಮುಖ್ಯ ಅತಿಥಿಗಳಾಗಿ ಮಾತಾಡಿದ ಪದವಿಪೂರ್ವ ಶಿಕ್ಷಣ ವಿಭಾಗದ ಉಪನಿರ್ದೆಶಕರಾದ ಮಾರುತಿ ಅವರು "ಶಿಕ್ಷಕರು ಮಕ್ಕಳು ತಪ್ಪು ಮಾಡಿದಾಗ ಪ್ರೀತಿಯಿಂದ ಬುದ್ದಿ ಹೇಳಬೇಕು. ಉಪನ್ಯಾಸಕನಾದವನು ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು" ಎಂದರು. 

ಸಮಾರಂಭದ ಅದ್ಯಕ್ಷರಾಗಿ ಮಾತಾಡಿದ ವೇದಿಕೆಯ ಅಧ್ಯಕ್ಷರಾದ ಸುಬ್ರಮಣ್ಯ ಭಟ್ ಇವರು "ಜೀವಶಾಸ್ತ್ರ ಉಪನ್ಯಾಸಕರ ವೇದಿಕೆಯು ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಉಪನ್ಯಾಸಕರು ಭಾಗಿಯಾಗುವುದನ್ನು ಪ್ರೇರೇಪಿಸುತ್ತದೆ. ಒಂದು ಉತ್ತಮ ಭಾಂಧವ್ಯವನ್ನು ಬಯಸುತ್ತದೆ." ಎಂದರು. ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಯಾದ ರಮೇಶ್ ಹಂದೆಯವರು ಮತ್ತು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ. ಸುರೇಶ್ ತುಂಗ ಇವರು ಶುಭಾಶಂಸನೆಗೈದರು. 

ಸದ್ಯದಲ್ಲೇ ನಿವ್ರತ್ತಿಯಾಗಲಿರುವ ಉಪನಿರ್ದೇಶಕರಾದ ಮಾರುತಿ, ಸರಕಾರಿ ಪದವಿಪೂರ್ವಕಾಲೇಜು ಮಲ್ಪೆ ಇಲ್ಲಿನ ಪ್ರಾಂಶುಪಾಲರಾದ ಶ್ರೀ ವರ್ಗೀಸ್, ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿ ಇಲ್ಲಿಯ ಪ್ರಾಂಶುಪಾಲರಾದ ಕೆ. ಪಿ. ಲಕ್ಷಿ÷್ಮನಾರಾಯಣ ಇವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. 

ಸಂಪನ್ಮೂಲ ಉಪನ್ಯಾಸಕರಾದ ಪ್ರಶಾಂತ್ ಕುಮಾರ್ ಶೆಟ್ಟಿ ಅಳದಂಗಡಿ ಇವರಿಂದ "ಪೆಡಿಗ್ರೀ ಅನಾಲೈಸಿಸ್" ವಿಷಯದ ಕುರಿತು ಉಪನ್ಯಾಸ ಜರುಗಿತು. ಉಪನ್ಯಾಸಕರಾದ ಹರೀಶ್ ಕೊಟ್ಯಾನ್ ಇವರು "ಲೆಸ್ಸನ್ ಬೇಸ್ಡ್ ಅನಾಲೈಸಿಸ್" ಬಗ್ಗೆ ಮಾತಾಡಿದರು. ಜೀವಶಾಸ್ತ್ರದ ಪ್ರಾಯೋಗಿಕ ಪಠ್ಯಕ್ರಮದ ಬಗ್ಗೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರು ಭಾಗವಹಿಸಿದ್ದರು. ಕಳೆದ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಶೇಕಡಾ ನೂರು ಫಲಿತಾಂಶ ಬಂದ ಕಾಲೇಜುಗಳ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ವೇದಿಕೆಯ ಕಾರ್ಯದಶಿಯಾದ ಡಾ. ವಿಶಾಲಾಕ್ಷಿಯವರು ಸ್ವಾಗತಿಸಿದರು. ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಪದ್ಮ ಎ ಆಚಾರ್ಯ ನಿರೂಪಿಸಿದರು. ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಗನ್ನಾಥ ಗಾಣಿಗ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು