ಮುಖ್ಯಮಂತ್ರಿ ಡಿ.ಕೆ.ಶಿ ಭೇಟಿಯಾದ ಸಂಸದ ಕೋಟ

ಕಳೆದ ಸುಮಾರು 30 ವರ್ಷಗಳಿಂದ ಕೊಂಕಣ ರೈಲ್ವೆ ಅಭಿವೃದ್ಧಿ ಕಾಣದೆ ಏಕ ಪಥದ ಹಳಿಗಳ ಮೂಲಕ ಚಲಿಸುತ್ತಿದ್ದು, ಕರಾವಳಿ ಜಿಲ್ಲೆಯ ಜನತೆಗೆ ರೈಲ್ವೆ ಸೇವೆ ಸೀಮಿತವಾಗಿದೆ. ಕೇಂದ್ರ ಸರ್ಕಾರ ಕೊಂಕಣ ರೈಲ್ವೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಮತ್ತು ರೈಲ್ವೆ ಹಳಿಗಳ ದ್ವಿಪಥಗೊಳಿಸಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲೋಸುಗ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಕಾರ್ಯ ತುಂಬಾ ಅಗತ್ಯವಿದೆ. ಹಿರಿಯ ಮುತ್ಸದ್ದಿ ಜಾರ್ಜ್ ಫೆರ್ನಾಂಡಿಸ್ ರವರು ಕೊಂಕಣ ರೈಲ್ವೆ ಕರಾವಳಿ ಜನತೆಗೆ ಸಮರ್ಪಿಸುವಾಗ ಮಾಡಿಕೊಂಡ ವ್ಯವಸ್ಥೆಯಂತೆ ಕೆಲವು ರಾಜ್ಯಗಳು ಶೇರ್ ಗಳನ್ನು ತ್ಯಜಿಸಬೇಕಾಗಿದೆ. ಕೇರಳ ಮತ್ತು ಗೋವಾ ರಾಜ್ಯಗಳು ಈಗಾಗಲೇ ತಮ್ಮ ಪಾಲಿನ ಶೇರ್ ಗಳನ್ನು ತ್ಯಜಿಸಿದ್ದು, ಕರ್ನಾಟಕ ಸರ್ಕಾರವೂ ಕೊಂಕಣ ರೈಲ್ವೆಯ ಅಭಿವೃದ್ಧಿಗಾಗಿ ಸಹಕಾರ ನೀಡಬೇಕೆಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ರಾಜ್ಯ ಸರ್ಕಾರದ ನೆರವು ಕೋರಿದರು. ಕರಾವಳಿ ಭಾಗದ ಸಂಸದರಾದ ಬ್ರಿಜೇಶ್ ಚೌಟ ಮತ್ತು ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಇದೇ ಅಭಿಪ್ರಾಯ ಹೊಂದಿದ್ದು, ಕೇಂದ್ರ ಸರ್ಕಾರದ ಮೂಲಕ ಕೊಂಕಣ ರೈಲ್ವೆಯ ಅಭಿವೃದ್ಧಿ ನಮ್ಮ ಗುರಿಯಾಗಿದೆ ಎಂದು ಸಂಸದ ಕೋಟ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.

 ಸಂಸದರೊಂದಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಉಪಸ್ಥಿತರಿದ್ದು, ತಮ್ಮ ಅನುಭವದ ಮಾಹಿತಿ ಒದಗಿಸಿದರು. ಸಂಸದ ಮತ್ತು ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿ ಕೊಂಕಣ ರೈಲ್ವೆಯ ಅಭಿವೃದ್ಧಿಗೋಸ್ಕರ ಸಂಸದರ ಪ್ರಯತ್ನಕ್ಕೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ಇತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು