ಕುಂದಾಪುರ : ಬೆಳ್ಳಂಬೆಳಗ್ಗೆ ಗುಂಡಿಕ್ಕಿ ಬಾರ್ಕೂರು ಮೂಲದ ವ್ಯಕ್ತಿಯ ಬರ್ಬರ ಹತ್ಯೆ!

ಕುಂದಾಪುರ ನಗರದ ಚರ್ಚ್ ರಸ್ತೆಯಲ್ಲಿರುವ ಹೋಲಿ ರೋಸರಿ ಚರ್ಚ್ ಎದುರು ಶುಕ್ರವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಮೃತರನ್ನು ಬಾರ್ಕೂರು ಸಮೀಪದ ಕಚ್ಚೂರು ನಿವಾಸಿ ಐವನ್ ರಿಚರ್ಡ್ ಮಸ್ಕರೇನಸ್ (45) ಎಂದು ಗುರುತಿಸಲಾಗಿದೆ.

ಲಭ್ಯ ಮಾಹಿತಿಯ ಪ್ರಕಾರ, ಹಣಕಾಸಿನ ವ್ಯವಹಾರ ನಡೆಸುತ್ತಿದ್ದ ಐವನ್ ರಿಚರ್ಡ್ ಅವರು ತಮ್ಮೊಂದಿಗೆ ಇದ್ದ ಮಹಿಳೆಯೊಂದಿಗೆ ಕಾರಿನಲ್ಲಿ ಕುಂದಾಪುರಕ್ಕೆ ಬಂದಿದ್ದ ವೇಳೆ, ಮುಂಜಾನೆ ಸುಮಾರು 3.30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ತೀವ್ರ ರಕ್ತಸ್ರಾವಗೊಂಡ ಐವನ್ ರಿಚರ್ಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯ ವೇಳೆ ಐವನ್ ಅವರೊಂದಿಗೆ ಇದ್ದ ಮಹಿಳೆ ಆರೋಪಿಯ ಗುರುತನ್ನು ಪೊಲೀಸರಿಗೆ ತಿಳಿಸಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡಗಳು ಬಲೆ ಬೀಸಿವೆ.

ಪ್ರಾಥಮಿಕ ತನಿಖೆಯಲ್ಲಿ ಹಣಕಾಸಿನ ವ್ಯವಹಾರ ಅಥವಾ ಇತರ ವೈಯಕ್ತಿಕ ವೈಮನಸ್ಸಿನ ಹಿನ್ನೆಲೆಯಿಂದ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಯರಾಮ ಗೌಡ, ಠಾಣಾಧಿಕಾರಿ ನಂಜಾ ನಾಯಕ್, ಪಿಎಸ್‌ಐ ಪುಷ್ಪ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ನಗರ ಪೊಲೀಸರು ಆರೋಪಿಯ ಪತ್ತೆ ಹಾಗೂ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಕೊಲೆಗೆ ನಿಖರ ಕಾರಣವೇನು ಎಂಬುದು ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು