ಸುರತ್ಕಲ್‌: ವಾಲಿಬಾಲ್‌ ಆಡುತ್ತಿದ್ದಾಗ ದಿಢೀರ್‌ ಹೃದಯಾಘಾತ- 10ನೇ ತರಗತಿ ವಿದ್ಯಾರ್ಥಿ ಸಾವು!

ಆಟದ ಮೈದಾನದಲ್ಲಿ ಸ್ನೇಹಿತರ ಜೊತೆ ವಾಲಿಬಾಲ್‌ ಆಡುತ್ತಿದ್ದ 15 ವರ್ಷದ ಬಾಲಕನೋರ್ವ ಆಟದ ಮಧ್ಯೆಯೇ ದಿಢೀರ್‌ ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ಸುರತ್ಕಲ್‌ ಸಮೀಪದ ಸೂರಿಂಜೆಯಲ್ಲಿ ಬುಧವಾರ (ಆ.5) ರಂದು ನಡೆದಿದೆ.

ಸೂರಿಂಜೆ ನಿವಾಸಿ ಮಾಧವ ಅಮೀನ್‌ ಅವರ ಪುತ್ರ ಲಿಖಿತ್‌ ಅಮೀನ್‌ (15) ಮೃತಪಟ್ಟ ಬಾಲಕ. ಈತ ಸೂರಿಂಜೆ ಕೋಟೆ ಬೊಳ್ಳಾರು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಲಿಖಿತ್‌ ತನ್ನ ಗೆಳೆಯರ ಜೊತೆ ಬುಧವಾರ ಸಂಜೆ ಸೂರಿಂಜೆ ಮೈದಾನದಲ್ಲಿ ವಾಲಿಬಾಲ್‌ ಆಡುತ್ತಿದ್ದನು. ಆಗ ಹಠಾತ್ತಾಗಿ ಕುಸಿದು ಬಿದ್ದಿದ್ದಾನೆ. ಇದರಿಂದ ಗಾಬರಿಗೊಂಡ ಸ್ನೇಹಿತರು ಮತ್ತು ಸ್ಥಳೀಯರು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಿಖಿತ್‌ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.

ಶಾಲೆಯಲ್ಲಿ ಎಲ್ಲರ ಜೊತೆ ಬೆರೆಯುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿಯ ಅಕಾಲಿನ ನೋವಿಗೆ ಸೂರಿಂಜೆ ಗ್ರಾಮ ಮತ್ತು ಶಾಲೆಯಲ್ಲಿ ಶೋಕದ ಛಾಯೆ ಉಂಟಾಗಿದೆ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು