ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ (KMC) ನಾಲ್ಕನೇ ಮಹಡಿಯಿಂದ ಒಳರೋಗಿಯೊಬ್ಬರು ಕೆಳಗೆ ಬಿದ್ದು ತೀವ್ರ ಗಾಯಗೊಂಡಿರುವ ದುರದೃಷ್ಟಕರ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಗಾಯಾಳು ರೋಗಿಯನ್ನು ತೀರ್ಥಹಳ್ಳಿ ಮೂಲದ ರಾಜೇಶ್ ಆರ್. ಶೆಟ್ಟಿ ಎಂದು ಗುರುತಿಸಲಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜೇಶ್ ಶೆಟ್ಟಿ ಅವರು ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ಆ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯ 4ನೇ ಮಹಡಿಯ ಕಿಟಕಿಯಿಂದ ಹೊರಬರಲು ಯತ್ನಿಸಿದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಬಿದ್ದ ರಭಸಕ್ಕೆ ರಾಜೇಶ್ ಅವರಿಗೆ ತೀವ್ರ ಗಾಯಗಳಾಗಿದ್ದು, ಪ್ರಸ್ತುತ ಅವರ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯ ವೈದ್ಯರ ತಂಡ ಅವರಿಗೆ ತುರ್ತು ಚಿಕಿತ್ಸೆ ಮುಂದುವರಿಸಿದೆ.
ಘಟನೆ ನಡೆದ ಕ್ಷಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
