BREAKING
ಕಲಾಸಂಸ್ಕೃತಿ

ಉಡುಪಿಯಲ್ಲಿ ಎರಡು ದಿನಗಳ ‘ನೃತ್ಯಜಾತ್ರೆ’ ಸಂಭ್ರಮ

ಉಡುಪಿ: ನೃತ್ಯ, ಸಂಗೀತ, ಯಕ್ಷಗಾನ, ಜಾನಪದ ಕಲೆ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ನ. 21 ಮತ್ತು 22ರಂದು ಉಡುಪಿಯಲ್ಲಿ ಎರಡು ದಿನಗಳ ‘ನೃತ್ಯಜಾತ್ರೆ’ ಆಯೋಜಿಸಲಾಗಿದೆ.

ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿರುವ ಈ ಕಲಾ ಉತ್ಸವವು ಎರಡೂ ದಿನ ಮಧ್ಯಾಹ್ನ 3.30ರಿಂದ ರಾತ್ರಿ 9.30ರವರೆಗೆ ನಡೆಯಲಿದೆ. 375ಕ್ಕೂ ಅಧಿಕ ನೃತ್ಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನದ ಜತೆಗೆ ಸಂಗೀತ ಕಾರ್ಯಕ್ರಮಗಳು, ಕಲಾ ಪ್ರಾತ್ಯಕ್ಷಿಕೆಗಳು, ವಿವಿಧ ಮಳಿಗೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿವೆ ಎಂದು ನೃತ್ಯನಿಕೇತನ ಕೊಡವೂರು ಸಂಸ್ಥೆಯ ನಿರ್ದೇಶಕ ಕೆ. ಸುಧೀರ್ ರಾವ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 21ರಂದು ನಟರಾಜನ ಮೂರ್ತಿಯ ರಥೋತ್ಸವದೊಂದಿಗೆ ನೃತ್ಯಜಾತ್ರೆಗೆ ಚಾಲನೆ ದೊರೆಯಲಿದೆ. ಕಲಶ ಹಿಡಿದ ನೃತ್ಯಾಂಗನೆಯರು, ತಟ್ಟಿರಾಯ, ಗೊಂಬೆ ಮುಖವಾಡಗಳು, ವಾದ್ಯ, ಚೆಂಡೆ ವಾದನ, ಬಿರುದು ಬಾವಲಿಗಳು ಹಾಗೂ ಹುಲಿವೇಷ ಕುಣಿತದೊಂದಿಗೆ ಕಲಾವಿದರು ಮತ್ತು ಅತಿಥಿಗಳನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುವುದು. ಸಾಂಪ್ರದಾಯಿಕ ವೈಭವದೊಂದಿಗೆ ಕಲಾ ಉತ್ಸವಕ್ಕೆ ವಿಶಿಷ್ಟ ಮೆರುಗು ನೀಡಲಾಗುವುದು ಎಂದರು.

ನೃತ್ಯ ವೇದಿಕೆಯ ಎರಡೂ ಬದಿಗಳಲ್ಲಿ ಪ್ರತ್ಯೇಕ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ನಿರಂತರ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸುರಭಿ ಸುಧೀರ್ ಅವರಿಂದ ವಾದ್ಯಸಂಗೀತ, ವಿದುಷಿ ಪ್ರೀತಿಕಲಾ ದೀಪಕ್ ಪುತ್ತೂರು ಅವರಿಂದ ನೃತ್ಯಸಂಗೀತ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯರಿಂದ ಭಕ್ತಿ ಸಂಗೀತ, ಗಣೇಶ್ ಹೆಬ್ರಿ ಅವರಿಂದ ಯಕ್ಷಸಂಗೀತ, ಮೈಸೂರಿನ ನಾವು ಬ್ಯಾಂಡ್ ತಂಡದಿಂದ ರಂಗಸಂಗೀತ, ಕಲಾವತಿ ದಯಾನಂದ್ ಅವರಿಂದ ಜಾನಪದ ಸಂಗೀತ ಹಾಗೂ ಅನುಷ್ ಶೆಟ್ಟಿ ಮೈಸೂರು ಬಳಗದಿಂದ ‘ರಿದಂ ಅಡ್ಡ’ ಸಮಕಾಲೀನ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಜಾತ್ರೆಯ ಆವರಣದಲ್ಲಿ ನೃತ್ಯದ ಆಭರಣಗಳು, ವಸ್ತ್ರಗಳು, ಗೆಜ್ಜೆ, ಗೆಜ್ಜೆ ಚೀಲ, ಖಾದಿ ಬಟ್ಟೆಗಳು, ಪುಸ್ತಕಗಳು ಹಾಗೂ ಗೃಹ ಉತ್ಪನ್ನಗಳ ಮಳಿಗೆಗಳಿರಲಿವೆ. ಬಟ್ಟೆ ತಯಾರಿಕೆ, ಮಣ್ಣಿನ ಉತ್ಪನ್ನಗಳು, ಕಾವಿ ಕಲೆ ಮತ್ತು ಚುಕ್ಕಿ ಕಲೆಯ ಪ್ರಾತ್ಯಕ್ಷಿಕೆಗಳ ಜತೆಗೆ ಕಲಾ ಪ್ರದರ್ಶನ, ಸೆಲ್ಫಿ ಕಾರ್ನರ್ ಹಾಗೂ ವಿವಿಧ ತಿಂಡಿ-ತಿನಿಸುಗಳ ಮಳಿಗೆಗಳೂ ಇರಲಿವೆ.

ಎರಡೂ ದಿನ ಅತಿಥಿಗಳಿಂದ ದೀಪ ಬೆಳಗಿದ ಬಳಿಕ ನೃತ್ಯನಿಕೇತನ ಕೊಡವೂರು ಸಂಸ್ಥೆಯ 375ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ನಡೆಯಲಿದೆ. ಎರಡು ದಿನಗಳ ಕಾರ್ಯಕ್ರಮವನ್ನು ಸೃಜನಾತ್ಮಕವಾಗಿ ರೀಲ್ಸ್ ಮೂಲಕ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹10 ಸಾವಿರ, ದ್ವಿತೀಯ ₹7 ಸಾವಿರ ಹಾಗೂ ತೃತೀಯ ₹5 ಸಾವಿರ ನೀಡಲಾಗುವುದು ಎಂದು ತಿಳಿಸಿದರು.


ನ. 19ರಂದು ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ:

ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ನ. 19ರಂದು ಸಂಜೆ 6 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಹಾಲ್‌ನಲ್ಲಿ ‘ವಿಶ್ವ ನೃತ್ಯಪ್ರಭಾ-2026’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ನೃತ್ಯಸಂಗೀತ ಕ್ಷೇತ್ರದ ಸಾಧನೆಗಾಗಿ ಸಂಗೀತ ಬಾಲಚಂದ್ರ ಮತ್ತು ಮಣಿಪಾಲದ ಕೆ.ಆರ್. ರಾಘವೇಂದ್ರ ಆಚಾರ್ಯ, ನೃತ್ಯ ವರ್ಣಾಲಂಕಾರ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಯು.ಕೆ. ಪ್ರವೀಣ್ ಹಾಗೂ ಪ್ರಸನ್ನ ಹಿರಿಯಡ್ಕ ಅವರನ್ನು ಪುರಸ್ಕರಿಸಲಾಗುವುದು. ಕೃಷ್ಣಮೂರ್ತಿ ಉಪಾಧ್ಯಾಯ ಮತ್ತು ಕೃಷ್ಣಮೂರ್ತಿ ರಾವ್ ಅವರ ಸ್ಮರಣಾರ್ಥ ಯಕ್ಷಗಾನ ಕಲಿಯುತ್ತಿರುವ ವಿದ್ಯಾರ್ಥಿನಿ ವಿದುಷಿ ಅನ್ವಿತ ಎಂ. ತಂತ್ರಿ ಅವರಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಪ್ರಶಸ್ತಿ ಪ್ರದಾನದ ಬಳಿಕ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ‘ನೃತ್ಯ ಸಿಂಚನ’ ಕಾರ್ಯಕ್ರಮ ನಡೆಯಲಿದೆ.

ಹಿರಿಯ ಸಂಗೀತ ವಿಮರ್ಶಕ ಹಾಗೂ ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಮಾನಸಿ ಸುಧೀರ್, ವಾದಿರಾಜ್ ಭಟ್ ಹಾಗೂ ಉಮೇಶ್ ಭಟ್ ಉಪಸ್ಥಿತರಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

RAVIRAJ HP

RAVIRAJ HP
HAPPY DEEPAVALI

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!