BREAKING
ಭಕ್ತಿ ಪಥ

ಉಡುಪಿ ಉಚ್ಚಿಲ ದಸರಾ–2026ಕ್ಕೆ ಸಜ್ಜು:

 

  • ​ತಯಾರಿ ಭ​ರದಿಂದ ಸಾಗುತ್ತಿದ್ದು, ಅಕ್ಟೋಬರ್ 11ರಿಂದ 21ರವರೆಗೆ 11 ದಿನಗಳ ಕಾಲ ಶ್ರೀ ಕ್ಷೇತ್ರ ಉಚ್ಚಿಲದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿದ್ದು ಅಕ್ಟೋಬರ್ 12ರಂದು ಮಧ್ಯಾಹ್ನ 3 ಗಂಟೆಗೆ ಮಹಿಳಾ ದಸರಾ ನಡೆಯಲಿದ್ದು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿ ಸಲಿದ್ದಾರೆ ಎಂದು ದಕ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ ತಿಳಿಸಿದರು.
  • ಅವರು ಗುರುವಾರ ಉಚ್ಚಿಲ ಮೊಗವೀರ ಸಭಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸಲಾಗುತ್ತಿರುವ ದಸರಾ ಮಹೋತ್ಸವ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಈ ಬಾರಿ ಐದನೇ ವರ್ಷದ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಆಕರ್ಷಕವಾಗಿ ನಿರ್ಮಿಸಲಾದ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುವುದು.
  • ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 10ರಂದು ಸಂಜೆ 6.30ಕ್ಕೆ ಪಡುಬಿದ್ರಿಯಿಂದ ಕಾಪು ಸಮುದ್ರತೀರದವರೆಗೆ ಮಾಡಲಾಗಿರುವ ವಿಶೇಷ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 11ರಂದು ಬೆಳಗ್ಗೆ 9 ಗಂಟೆಗೆ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದ್ದು, ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
  • ಅದೇ ದಿನ ಬೆಳಗ್ಗೆ 10 ಗಂಟೆಗೆ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ವಸ್ತು ಪ್ರದರ್ಶನ, ಮಾಹಿತಿ ಶಿಬಿರ, ಮನೋರಂಜನಾ ಕಾರ್ಯಕ್ರಮ ಹಾಗೂ ಜಾತ್ರಾ ಮೈದಾನದ ಉದ್ಘಾಟನೆ ನಡೆ ಯಲಿದೆ. ಮತ್ಸ್ಯದ್ವಾರ, ದವಸ-ಧಾನ್ಯಗಳಿಂದ ನಿರ್ಮಿಸಲಾದ ಕಲಾಕೃತಿಗಳು, ಜನಜಾಗೃತಿ ಕಲಾಕೃತಿಗಳು, ಕಲ್ಪವೃಕ್ಷ ಉತ್ಪನ್ನಗಳ ಕಲಾಕೃತಿಗಳು, ವಿಶೇಷ ಚೇತನರಿಂದ ತಯಾರಿಸಲಾದ ಕಲಾಕೃತಿಗಳು, ಪುಷ್ಪ ಹಾಗೂ ಪಕ್ಷಿಗಳ ಪ್ರದರ್ಶನ, ಕೃಷಿಕರ ಪ್ರಾಚೀನ ಮನೆಯ ಮಾದರಿ, ಚರ್ಮವಾದ್ಯ ಪರಿಕರಗಳ ತಯಾರಿ, ಅಲಂಕಾರಿಕ ಕಲಾಕೃತಿಗಳು, ಯಕ್ಷಗಾನ ಕಲಾಕೃತಿಗಳು, ಎತ್ತಿನ ಗಾಣ, ಸಮುದ್ರ ಹಾಗೂ ಹೊಳೆ ಮೀನುಗಳ ಪ್ರದರ್ಶನ, ಕರಕುಶಲ ವಸ್ತುಗಳ ತಯಾರಿ ಮತ್ತು ಚನ್ನಪಟ್ಟಣ ಬೊಂಬೆ ತಯಾರಿ ಸೇರಿದಂತೆ ಹಲವು ವಿಶೇಷ ಪ್ರದರ್ಶನಗಳು ಇರಲಿವೆ.
  • ಅಕ್ಟೋಬರ್ 11ರಂದು ಬೆಳಗ್ಗೆ 10.30ಕ್ಕೆ ಉಡುಪಿ ಉಚ್ಚಿಲ ದಸರಾ–2026ರ ಅಧಿಕೃತ ಉದ್ಘಾಟನೆ ನಡೆಯಲಿದೆ. ಮುಜರಾಯಿ, ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಹಜ್ ಖಾತೆ ಸಚಿವ ಯು.ಟಿ. ಖಾದರ್ ಮತ್ತು ಸಕ್ಕರೆ ಹಾಗೂ ಜವಳಿ ಸಚಿವ ರುದ್ರಪ್ಪ ಎಂ. ಲಮಾಣಿ ವಿಶೇಷವಾಗಿ ಉಪಸ್ಥಿತರಿರಲಿದ್ದಾರೆ.​ ಅಕ್ಟೋಬರ್ 12ರಂದು ಮಧ್ಯಾಹ್ನ 3 ಗಂಟೆಗೆ ಮಹಿಳಾ ದಸರಾ ನಡೆಯಲಿದ್ದು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ದೊರಕಿಸಿಕೊಟ್ಟ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವೂ ನಡೆಯಲಿದೆ.
  • ಶರನ್ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಚಂಡಿಕಾಹೋಮ, ಮಧ್ಯಾಹ್ನ 12ರಿಂದ 3ರವರೆಗೆ ಮಹಾ ಅನ್ನಸಂತರ್ಪಣೆ, ಸಂಜೆ 6.30ರಿಂದ ಪ್ರಸಾದ ವಿತರಣೆ, ಸಂಜೆ 5.30ರಿಂದ 6.15ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಬೆಳಗ್ಗೆ ಭಜನಾ ಕಾರ್ಯಕ್ರಮ, ಸಂಜೆ ಧಾರ್ಮಿಕ ಸಭೆ ಹಾಗೂ ರಾತ್ರಿ 8.30ರಿಂದ ಕಲ್ಪೋಕ್ತ ಪೂಜೆ ನಡೆಯಲಿದೆ. ವಿಜಯದಶಮಿಯಂದು ಸಾಮೂಹಿಕ ಮಹಾಚಂಡಿಕಾಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದೆ.ದಸರಾ ಮಹೋತ್ಸವದ ಅಂಗವಾಗಿ ಪ್ರತಿದಿನ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಭಕ್ತಿ ಗಾನ ಸುಧೆ, ವಿದ್ವಾಂಸರಿಂದ ಧಾರ್ಮಿಕ ಪ್ರವಚನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಅಲೋಕ್ ಬಾಬು ಅವರ ‘ALL OK’ ತಂಡದಿಂದ ಸಂಗೀತ ರಸಮಂಜರಿ, ಕೇರಳದ ಸಿತಾನಿ ಭಜನ್ಸ್ ತಂಡದಿಂದ ಭಜನ್ ಫ್ಯೂಶನ್, ನಾಟ್ಯಾನಿಲಯಂ ಮಂಜೇಶ್ವರ ತಂಡದಿಂದ ಜಾನಪದ ಹಾಗೂ ಶಾಸ್ತ್ರೀಯ ನೃತ್ಯ, ಪುತ್ತೂರು ಜಗದೀಶ್ ಆಚಾರ್ಯ ಅವರಿಂದ ಸಂಗೀತ ಕಾರ್ಯಕ್ರಮ, ಆಳ್ವಾಸ್ ಸಾಂಸ್ಕೃತಿಕ ವೈಭವ, ಭರತನಾಟ್ಯ, ಜಾನಪದ ನೃತ್ಯ, ನೃತ್ಯರೂಪಕ, ಸ್ಯಾಕ್ಸೋಫೋನ್ ವಾದನ, ಶಾಸ್ತ್ರೀಯ ಸಂಗೀತ ಹಾಗೂ ವೀಣಾವಾದನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
  • ತುಳು ಹಾಸ್ಯಮಯ ನಾಟಕ ‘ರಾಘು ಮಾಸ್ಟ್ರು’ ಹಾಗೂ ತುಳು ನಾಟಕ ‘ಮಹಿಮೆದ ಅಪ್ಪೆ ಭಗವತಿ’ ಪ್ರದರ್ಶನಗೊಳ್ಳಲಿವೆ. ರಾಜ್ಯಮಟ್ಟದ ಆಹ್ವಾನಿತ ತಂಡಗಳಿಂದ ನೃತ್ಯೋತ್ಸವ, ಮುದ್ದುಮಕ್ಕಳಿಗಾಗಿ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಹಿಳೆಯರು ಹಾಗೂ ಪುರುಷರ ಹುಲಿಕುಣಿತ ಸ್ಪರ್ಧೆ, ಸಣ್ಣ ಮಕ್ಕಳ ಕಿನ್ನಿ ಪಿಲಿ ನಲಿಕೆ ಸ್ಪರ್ಧೆ, ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ ಹಾಗೂ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.​ ಇದರೊಂದಿಗೆ ಸಾಮೂಹಿಕ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯ ಹಾಗೂ ದಸರಾ ಕವಿಗೋಷ್ಠಿಯೂ ನಡೆಯಲಿದೆ.
  • ಉಡುಪಿ ಉಚ್ಚಿಲ ದಸರಾ–2026ರ ಪ್ರಮುಖ ಆಕರ್ಷಣೆಯಾಗಿರುವ ಭವ್ಯ ಶೋಭಾಯಾತ್ರೆ ಅಕ್ಟೋಬರ್ 21ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಡಲಿದೆ. ಇದಕ್ಕೂ ಮುನ್ನ ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. ಶ್ರೀ ಕ್ಷೇತ್ರ ಉಚ್ಚಿಲದಿಂದ ರಾಷ್ಟ್ರೀಯ ಹೆದ್ದಾರಿ–66ರ ಮೂಲಕ ಎರ್ಮಾಳ್, ಉಚ್ಚಿಲ, ಮೂಳೂರು ಮಾರ್ಗವಾಗಿ ಕಾಪು ಬೀಚ್ನ ದೀಪಸ್ತಂಭದವರೆಗೆ ಶೋಭಾಯಾತ್ರೆ ಸಾಗಲಿದೆ.​ ಕಾಪು ದೀಪಸ್ತಂಭದ ಸಮೀಪ ಸಮುದ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬೋಟುಗಳ ಮೂಲಕ ಸಮುದ್ರ ಮಧ್ಯೆ ಭವ್ಯ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಪಂಡಿತರಿಂದ ನವದುರ್ಗೆಯರು, ಶ್ರೀ ಶಾರದಾ ಮಾತೆ ಹಾಗೂ ಸಮುದ್ರರಾಜನಿಗೆ ವಿಶೇಷ ಗಂಗಾರತಿ ಮತ್ತು ಡ್ರೋನ್ ಮೂಲಕ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಗೆ ಪುಷ್ಪಾರ್ಚನೆ ಪ್ರಮುಖ ಆಕರ್ಷಣೆಗಳಾಗಿವೆ.
  • ದಸರಾ ಶೋಭಾಯಾತ್ರೆ ಸಾಗುವ ಮಾರ್ಗದ ಎರಡೂ ಬದಿಗಳಲ್ಲಿರುವ ಮನೆಗಳು, ಅಂಗಡಿಗಳು ಹಾಗೂ ಮಳಿಗೆಗಳನ್ನು ಜಾತಿ, ಮತ, ಧರ್ಮದ ಯಾವುದೇ ಭೇದವಿಲ್ಲದೆ ವಿದ್ಯುದ್ದೀಪಾಲಂಕಾರ ಹಾಗೂ ತಳಿರು-ತೋರಣಗಳಿಂದ ಅಲಂಕರಿಸುವ ಮೂಲಕ ದಸರಾ ಸಂಭ್ರಮಕ್ಕೆ ಮೆರುಗು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.ದಸರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಶೇಷ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಸರಸ್ವತಿ ಶಾಲೆಯ ಮೈದಾನ ಹಾಗೂ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ, ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.​ ಭಕ್ತರಿಗೆ ಸುಗಮವಾಗಿ ದೇವರ ದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲು ಪ್ರತಿದಿನ ಸುಮಾರು 1,500 ಸ್ವಯಂಸೇವಕರು ಸೇವೆಯಲ್ಲಿ ತೊಡಗಲಿದ್ದಾರೆ. ಸ್ವಚ್ಛತಾ ಕಾರ್ಯಗಳಲ್ಲಿ ಮಹಿಳಾ ತಂಡಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ.
  • ಉಡುಪಿ ಉಚ್ಚಿಲ ದಸರಾ–2026 ಭಕ್ತಿ, ಪರಂಪರೆ, ಸಂಸ್ಕೃತಿ, ಕಲೆ ಮತ್ತು ವೈಭವದ ಸಂಗಮವಾಗಿ ನಡೆಯಲಿದ್ದು, ಕರಾವಳಿಯ ಧಾರ್ಮಿಕ ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಉದ್ದೇಶ ಹೊಂದಿದೆ. 11 ದಿನಗಳ ಕಾಲ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ಭವ್ಯ ಶೋಭಾಯಾತ್ರೆಯಲ್ಲಿ ಸಾರ್ವಜನಿಕರು ಮತ್ತು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಶ್ರೀ ಕ್ಷೇತ್ರದ ವತಿಯಿಂದ ಮನವಿ ಮಾಡಲಾಗಿದೆ ಎಂದರು.
  • ಸುದ್ದಿಗೋಷ್ಠಿಯಲ್ಲಿ ವಿವಿಧ ಮುಖಂಡರುಗಳಾದ ಜಯ ಸಿ ಕೋಟ್ಯಾನ್, ವಿನಯ್ ಕರ್ಕೇರಾ, ಮೋಹನ್ ಬೆಂಗ್ರೆ, ಗಿರಿಧರ್ ಸುವರ್ಣ, ಕವಿತಾ, ಸುಗುಣ, ಮನೋಜ್ ಕಾಂಚನ್, ಶರಣ್ ಮಟ್ಟು, ಸತೀಶ್ ಕುಂದರ್, ರತ್ನಾಕರ ಸಾಲ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.




Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!