ಸಾವಿತ್ರಿಭಾಯಿ ಪುಲೆ ಜೀವನಾಧಾರಿತ ಸಿನಿಮಾವನ್ನು ಟೀಕಿಸುವ ಭರದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಾವಿತ್ರಿಭಾಯಿ ಪುಲೆ ಜೀವಾಧಾರಿತ ಸಿನಿಮಾವನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ಗೆ(CBFC) ಕಳುಹಿಸಲಾಗಿತ್ತು. CBFC ಪುಲೆ ಸಿನಿಮಾಗೆ ಯು ಸರ್ಟಿಫಿಕೇಟ್ ನೀಡಿತ್ತು. ಆದರೆ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ನಿರ್ದೇಶಿಸಿತ್ತು.
ಪ್ರಮುಖವಾಗಿ ಈ ಸಿನಿಮಾದಲ್ಲಿ ಬರುವ ಜಾತಿ ಆಧಾರಿತ ಹೆಸರುಗಳು, 3000 ವರ್ಷಗಳ ಗುಲಾಮಿ ಸೇರಿದಂತೆ ಕೆಲ ಡೈಲಾಗ್‌ಗಳಿಗೂ ಕತ್ತರಿ ಹಾಕುವಂತೆ ಸೂಚಿಸಿತ್ತು. ಈ ಸಿನಿಮಾಗೆ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯ ವಿರೋಧಿಸಿತ್ತು. ವಿರೋಧ ಜಾಸ್ತಿ ಆಗುತ್ತಿದ್ದಂತೆ ಏ. 11ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಏ. 25ಕ್ಕೆ ಮುಂದೂಡಿಕೆಯಾಗಿತ್ತು.
CBFC ಬೋರ್ಡ್ ಕತ್ತರಿ ಹಾಕುವಂತೆ ನಿರ್ದೇಶನ, ಸಿನಿಮಾ ಬಿಡುಗಡೆಗೆ ವಿಳಂಬಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾದಲ್ಲಿ ಅನುರಾಗ್ ಕಶ್ಯಪ್ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪೋಸ್ಟ್ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನುರಾಗ್ ಕಶ್ಯಪ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಶ್ಯಪ್ ಪೋಸ್ಟ್‌ನ ಸ್ಕ್ರೀನ್ ಶಾಟ್ ಅಪ್ಲೋಡ್ ಮಾಡಿ ಜನರು ಈಗ ಮುಂಬೈ ಪೊಲೀಸರಿಗೆ ದೂರು ನೀಡುತ್ತಿದ್ದಾರೆ.