ಕಳೆದ 39 ವರ್ಷಗಳಿಂದ ನಮ್ಮ ಯುವ ಬ್ರಾಹ್ಮಣ ಪರಿಷತ್ ಜನಹಿತ ಹಾಗೂ ಜನ ಕಲ್ಯಾಣಕ್ಕಾಗಿ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಂತು ತನ್ನನ್ನು ತಾನು ತೊಡಗಿಸಿ ಕೊಳ್ಳುವುದರ ಜೊತೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿ ರುವವರಿಗೆ ಶಿಕ್ಷಣಕ್ಕೆ ಸಹಾಯ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು, ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ ಮತ್ತು ರಕ್ತದಾನ, ಆರೋಗ್ಯ ಸುರಕ್ಷಾ ಕಾರ್ಡ್ ಸೌಲಭ್ಯ ಅಶಕ್ತರಿಗೆ ಆರ್ಥಿಕ ಸಹಾಯ, ಕಾನೂನು ಮಾಹಿತಿ ಶಿಬಿರ, ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ, ಮಾಹಿತಿ, ಬಡವರಿಗೆ ಸೂರು, ವಿಪ್ರ ಸಾಧಕರ ಸೇವಕರ ಗುರುತಿಸುವಿಕೆ, ಹೀಗೆ ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಆಡಂಬರ ವಿಲ್ಲದೆ ಅಳಿಲ ಸೇವೆಯನ್ನು ಮಾಡುತ್ತಾ ಬಂದಿದೆ.
ಸಮಾಜ ಬಾಂಧವರ ಅಮೂಲ್ಯ ಸಹಕಾರದಿಂದಲೇ ನಿರ್ಮಿತವಾದ ಬ್ರಾಹ್ಮ ಸಭಾಭವನ ಮುಖ್ಯವಾಗಿ ಬಡ, ಮಧ್ಯಮ ವರ್ಗದ ವಿಪ್ರ ಬಾಂಧವರ ಮನೆಯ ಕಲ್ಯಾಣ ಕಾರ್ಯಕ್ರಮಗಳಿಗಾಗಿಯೇ ಕೈಗೆಟಕುವ ಬೆಲೆಯಲ್ಲಿ ಸಮಾಜಕ್ಕೆ ದೊರಕುತ್ತಿರುವುದು ನಮಗೆ ಹೆಮ್ಮೆಯ ವಿಷಯ.
ಇನ್ನು ಮುಖ್ಯವಾಗಿ ನಮ್ಮ ಸಮಾಜದ ಸಂಪತ್ತು - ಯುವ ಪೀಳಿಗೆಯನ್ನು ಮಹಿಳೆಯರನ್ನು ಮತ್ತು ಮಹನೀಯರನ್ನು ಒಗ್ಗೂಡಿಸುವಲ್ಲಿ ಅವರ ಪ್ರತಿಭೆಯನ್ನು ಹೊರ ಹಾಕುವ ನಿಟ್ಟಿನಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪರಿಷತ್ತು ಪ್ರತೀ ವರ್ಷವೂ ಹಮ್ಮಿ ಕೊಳ್ಳುತ್ತಾ ಬಂದಿದೆ.
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ 18-05-2025 ನೇ ಆದಿತ್ಯವಾರದಂದು ಬ್ರಾಹ್ಮ ಸಭಾಭವನದಲ್ಲಿ ಪ್ರಥಮ ಬಾರಿಗೆ ವಿಪ್ರ ಬಾಂಧವರಿಗಾಗಿ ಜಿಲ್ಲಾಮಟ್ಟದ ಜಾನಪದ ನೃತ್ಯ ಸ್ಪರ್ಧೆ - ಜಾನಪದ ನೃತ್ಯ ಸಂಭ್ರಮ 2025 " ನ್ನು ಹಮ್ಮಿಕೊಂಡಿದ್ದು 40ರ ಒಳಗಿನ ಹಾಗೂ 40 ರ ಮೇಲಿನ ಹರೆಯದವರಿಗಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಸಹಿತ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
ಅದೇ ದಿನ ಮುಂಜಾನೆಯಿಂದ ವಿಪ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಧವಿಧ ವಿಪ ಉದ್ಯಮಗಳ ಮಳಿಗೆಗಳಿಗೆ ಉಚಿತವಾದ ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಅದೇ ದಿನ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ರುಚಿ ಶುಚಿಯಾದ ಆಹಾರ ಖಾದ್ಯಗಳ ಮೇಳವನ್ನು ಕೂಡ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಈ ಉದ್ಯಮ ಮೇಳ ಮತ್ತು ಆಹಾರ ಮೇಳ ಮುಂಜಾನೆ 9 ರಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ. ಸಾರ್ವಜನಿಕರೆಲ್ಲರೂ ಈ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಮನೆಯವರು ಹಾಗೂ ಗೆಳೆಯರೊಂದಿಗೆ ಭಾಗವಹಿಸಿ ಅದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿ ಕೊಳ್ಳುತ್ತಿದ್ದೇವೆ.
ಈ ಸಂದರ್ಭದಲ್ಲಿ ಚಂದ್ರಕಾಂತ್ ಕೆ.ಎನ್., ವಿಷ್ಣು ಪ್ರಸಾದ್ ಪಾಡಿಗಾರ್, ರಘುಪತಿ ರಾವ್, ಚೈತನ್ಯ ಎಂ. ಜಿ ಮತ್ತು ರವಿರಾಜ್ ಉಪಸ್ಥಿತರಿದ್ದರು.