Header Ads Widget

ಡಾ. ಶರತ್ ಕೆ. ರಾವ್ ಅವರಿಗೆ ಲಂಡನ್ ನ ಗೌರವಾನ್ವಿತ ಎಫ್‌ಆರ್‌ಸಿಪಿ ಪ್ರಶಸ್ತಿ

ಪ್ರಸಿದ್ಧ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಮತ್ತು ಶೈಕ್ಷಣಿಕ ನಾಯಕ ಡಾ. ಶರತ್ ಕುಮಾರ್ ರಾವ್ ಕೆ ಅವರ, ವೈದ್ಯಕೀಯ ನಾಯಕತ್ವ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಅವರ ಸಾಧನೆ ಕೊಡುಗೆಗಳನ್ನು ಗುರುತಿಸಿ, ಲಂಡನ್ ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅದರ ಗೌರವ ಡಾಕ್ಟರೇಟ್ (ಎಫ್ ಆರ್ ಸಿ ಪಿ) ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಜುಲೈ 8 ರಂದು ಲಂಡನ್‌ನ ರಾಯಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಶರತ್ ಕೆ ರಾವ್ ಅವರಿಗೆ ಅಧಿಕೃತವಾಗಿ ಪ್ರದಾನ ಮಾಡಲಾಯಿತು.

ಡಾ. ರಾವ್ ಅವರು ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಆರೋಗ್ಯ ವಿಜ್ಞಾನಗಳ ಪ್ರೊ ವೈಸ್ ಚಾನ್ಸೆಲರ್ (ಪ್ರೊ ಉಪಕುಲಪತಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯನ್ನು ಅವರು 2023ರಿಂದ ನಿಭಿಯಿಸುತ್ತಿದ್ದಾರೆ. ಅದಕ್ಕಿಂತ ಮೊದಲು ಅವರು 2019 ರಿಂದ 2023 ರವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜ್ (ಕೆಎಂಸಿ), ಮಣಿಪಾಲ್ ನ ಡೀನ್ ಆಗಿದ್ದರು. ಅದಕ್ಕೂ ಮೊದಲು ಅವರು ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಅಸೋಸಿಯೇಟ್ ಡೀನ್ (2015–2019) ಮತ್ತು ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥ (2009–2014) ಆಗಿ ಕಾರ್ಯನಿರ್ವಹಿಸಿದ್ದರು. ಈ ಎಲ್ಲಾ ಹುದ್ದೆಗಳಲ್ಲಿ ಇರುವಾಗ ಅವರು ನಿರಂತರವಾಗಿ ಸಂಸ್ಥೆಯ ಬೆಳವಣಿಗೆ, ಶೈಕ್ಷಣಿಕ ಫಲಿತಾಂಶಗಳ ಸುಧಾರಣೆ, ಮತ್ತು ಕ್ಲಿನಿಕಲ್ ತರಬೇತಿ ಪರಿಸರದ ಬಲಪಡಿಕೆಗೆ ನಿರಂತರ ಶ್ರಮಿಸಿ ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ.

ಡಾ. ರಾವ್ ಅವರ ಆಡಳಿತಾತ್ಮಕ ಕೌಶಲ್ಯ ಎಷ್ಟು ಪ್ರಸಿದ್ಧವೋ ಅಷ್ಟೇ ಅವರ ವೈದ್ಯಕೀಯ ವೃತ್ತಿಯೂ ಕೂಡ ಸುಪ್ರಸಿದ್ಧವಾಗಿದೆ. ಸಂಕೀರ್ಣ ಗಾಯಚಿಕಿತ್ಸೆ, ಸಂಧಿ ಜೋಡಣೆ, ಬದಲಾವಣೆ ಮತ್ತು ಮಣಿಗಂಟು ಆರ್ಥೋಸ್ಕೋಪಿ (knee arthroscopy) ಯಲ್ಲಿ ನಿಪುಣರಾಗಿರುವ ಅವರು, ಜರ್ಮನಿ, ಇಟಲಿ, ಯುಕೆ, ಮತ್ತು ಆಸ್ಟ್ರೇಲಿಯಾದ ಪ್ರಸಿದ್ಧ ವೈದ್ಯಕೀಯ ಕೇಂದ್ರಗಳಲ್ಲಿ ಮಂಡಿ ಮತ್ತು ಸೊಂಟದ ಬದಲೀ ಶಸ್ತ್ರಚಿಕಿತ್ಸೆಯಲ್ಲಿ ಉನ್ನತ ತರಬೇತಿ ಪಡೆದುಕೊಂಡಿದ್ದಾರೆ. ಈ ಅಂತಾರಾಷ್ಟ್ರೀಯ ಅನುಭವದಿಂದ ಅವರು ಮಾಹೆ ಮತ್ತು ಇತರ ಸಂಸ್ಥೆಗಳಲ್ಲಿ ಆರ್ಥೋಪೆಡಿಕ್ ಆರೈಕೆ ಮತ್ತು ಶಸ್ತ್ರಚಿಕಿತ್ಸಾ ತರಬೇತಿಯ ಗುಣಮಟ್ಟವನ್ನು ಎತ್ತರಕ್ಕೆ ಏರಿಸಿದ್ದಾರೆ.

ಈ ಗೌರವ ಡಾಕ್ಟರೇಟ್ ಡಾ.‌ರಾವ್ ಅವರ ದೂರಗಾಮಿ ಆರೋಗ್ಯ ಸೇವೆಗಳ ನಾಯಕತ್ವ ಮತ್ತು ನೀತಿಯ ದೂರವ್ಯಾಪಿ ಪರಿಣಾಮವನ್ನು ಗುರುತಿಸುತ್ತದೆ. ಶೈಕ್ಷಣಿಕ ಶ್ರೇಷ್ಠತೆ ಮತ್ತು ದಕ್ಷ, ರೋಗಿ-ಕೇಂದ್ರಿತ ಆರೋಗ್ಯ ಸೇವಾ ವಿತರಣೆಯನ್ನು ಸಮತೋಲನಗೊಳಿಸುವ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಅವರ ಕೊಡುಗೆಯನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಲಂಡನ್ ರಾಯಲ್ ಕಾಲೇಜ್ ಇಂತಹ ಗೌರವಗಳನ್ನು ಕೇವಲ ಆರೋಗ್ಯ ಕ್ಷೇತ್ರದಲ್ಲಿ ಶಾಶ್ವತ ಮತ್ತು ಪರಿವರ್ತನಾತ್ಮಕ ಪರಿಣಾಮ ಉಂಟುಮಾಡಿದ ವ್ಯಕ್ತಿಗಳಿಗೆ ಮಾತ್ರ ನೀಡುತ್ತದೆ.

ಈ ಸಾಧನೆಗಾಗಿ ಡಾ. ರಾವ್ ಅವರನ್ನು ಅಭಿನಂಧಿಸಿದ ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿಎಸ್‌ಎಂ (ನಿವೃತ್ತ) ಅವರು ಮಾತನಾಡಿ, ಈ ಗೌರವಕ್ಕೆ ಡಾ. ಶರತ್ ರಾವ್ ಅವರು ಅತಿ ಹೆಚ್ಚು ಅರ್ಹರಾಗಿದ್ದಾರೆ ‌. ಅವರು ಶೈಕ್ಷಣಿಕ ಸಮಗ್ರತೆ, ವೈದ್ಯಕೀಯ ಶ್ರೇಷ್ಠತೆ ಮತ್ತು ದೂರದೃಷ್ಟಿಯ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಅವರ ಕೆಲಸ ಮಾಹೆಯಲ್ಲಿ ಮಾತ್ರವಲ್ಲದೆ ವಿಶಾಲ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಅಜರಾಮರ ಗುರುತು ಸೃಷ್ಟಿ ಸಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರ ಈ ಸಾಧನೆಗಳನ್ನು ಗುರುತಿಸಿರುವುದು ನಮಗೆ ಹೆಮ್ಮೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ MAHE ನ ಪ್ರೋ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್ ಅವರು 

ಡಾ. ಶರತ್ ರಾವ್ ಅವರು ಉದ್ದೇಶಪೂರ್ಣ ನಾಯಕತ್ವದ ಪ್ರತಿನಿಧಿಯಾಗಿ ಶಸ್ತ್ರಚಿಕಿತ್ಸಾ ಕೋಣೆ, ತರಗತಿ ಕೋಣೆ ಮತ್ತು ಆಡಳಿತ ನಿರ್ವಹಣಾ ಹುದ್ದೆಗಳಲ್ಲಿ ಗುರುತಿಸಲ್ಪಡುತ್ತಾರೆ. ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ನೀಡಿದ ಈ ಗೌರವ ಒಂದು ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಅದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಮೇಲೆ ಅವರ ಶಾಶ್ವತ ಪರಿಣಾಮದ ಪ್ರತಿಫಲ ಆಗಿದೆ.

ಡಾ. ರಾವ್ ಅವರಿಗೆ ದೊರಕಿದ ಗೌರವ ಡಾಕ್ಟರೇಟ್ ಅವರು ಹೊಸತನ್ನು ನಿರಂತರವಾಗಿ ಕಲ್ಪಿಸುವ, ಮಾರ್ಗದರ್ಶಕ ನಾಯಕತ್ವ ವಹಿಸುವ, ಮತ್ತು ರೋಗಿಗಳಿಗೂ ವೈದ್ಯಕೀಯ ವೃತ್ತಿಪರರಿಗೂ ಸೇವೆ ಸಲ್ಲಿಸುವ ವ್ಯವಸ್ಥೆಗಳ ನಿರ್ಮಾಣದ ಬಗ್ಗೆ ಬದ್ಧತೆಯಿಂದ ಕೆಲಸ ಮಾಡುವ ವೃತ್ತಿಜೀವನದ ಇನ್ನೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದರು.


ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದು Institution of Eminence ಸ್ಥಾನಮಾನ ಪಡೆದ ಡೀಮ್‌ಡ್-ಟು-ಬಿ ಯೂನಿವರ್ಸಿಟಿ ಆಗಿದೆ. ಹೆಲ್ತ್ ಸೈನ್ಸ್, ಮ್ಯಾನೇಜ್ಮೆಂಟ್ ಲಾ, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್, ಹಾಗೂ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ 400 ಕ್ಕಿಂತ ಹೆಚ್ಚಿನ ವಿಶೇಷತೆಗಳನ್ನು ಮಾಹೆ ತನ್ನ ಅಂಗ ಸಂಸ್ಥೆಗಳ ಮೂಲಕ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಶೇದ್ ಪುರ ಹಾಗೂ ದುಬೈ ನ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಶ್ರೇಷ್ಠ ಶೈಕ್ಷಣಿಕ ದಾಖಲಾತಿ, ಆಧುನಿಕ ಮೂಲಸೌಕರ್ಯ, ಮತ್ತು ಪ್ರಮುಖ ಸಂಶೋಧನಾ ಕೊಡುಗೆಗಳೊಂದಿಗೆ ಮಾಹೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಮತ್ತು ಗೌರವ ಗಳಿಸಿದೆ. ಅಕ್ಟೋಬರ್ 2020ರಲ್ಲಿ ಭಾರತದ ಶಿಕ್ಷಣ ಸಚಿವಾಲಯ ಮಾಹೆ ಗೆ ಇನ್ಸ್ಟಿಟ್ಯೂಷನ್ ಆಫ್ ಎಮಿನೆನನ್ಸ್ ಸ್ಥಾನಮಾನ ನೀಡಿತು. ಪ್ರಸ್ತುತ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ರ‍್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್‌ಎಫ್) ನಲ್ಲಿ ಮಾಹೆ ನಾಲ್ಕನೇ ಸ್ಥಾನದಲ್ಲಿ ಇದೆ . ಬದಲಾವಣೆಯ ಶಿಕ್ಷಣ ಹಾಗೂ ಸಮೃದ್ಧ ಕ್ಯಾಂಪಸ್ ಜೀವನಕ್ಕಾಗಿ ವಿದ್ಯಾರ್ಥಿಗಳ ಅಗ್ರ ಆಯ್ಕೆ ಮಾಹೆ ಆಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳಿಗೂ ಶ್ರೇಷ್ಠ ಪ್ರತಿಭೆಗಳ ತಾಣವಾಗಿ ಮಾಹೆ ಗುರುತಿಸಲ್ಪಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು