Header Ads Widget

ವಿಶ್ವಗುರು ಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ

ಉಡುಪಿ: ಆಚಾರ್ಯತ್ರಯರಲ್ಲಿ ಓರ್ವರಾದ ದ್ವೈತ ಮತ ಪ್ರತಿಪಾದಕ ಆಚಾರ್ಯ ಮಧ್ವರ ಅಂಚೆಚೀಟಿ ಮಣಿಪಾಲ ಮಾಹೆ ಸಹಯೋಗದೊಂದಿಗೆ ಹೊರತರಲಾಗುತ್ತಿದ್ದು, ಆ.30ರಂದು ಅಪರಾಹ್ನ 4 ಗಂಟೆಗೆ ಅನಾವರಣಗೊಳ್ಳಲಿದೆ.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹಾಗೂ ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಉಪಸ್ಥಿತರಿರುವರು.

ಉಡುಪಿ ಕೃಷ್ಣಮಠದ ಭಕ್ತರು ಸೇರಿದಂತೆ ಸಮಸ್ತ ಮಾಧ್ವ ಮತಾನುಯಾಯಿಗಳ ಬಹುದಿನದ ಆಶಯ ಈ ಮೂಲಕ ಈಡೇರಿದೆ. ಮಹಾನ್ ದಾರ್ಶನಿಕ ಆಚಾರ್ಯ ಮಧ್ವರ ಜ್ಞಾನಮುದ್ರೆಯ ಭಂಗಿಯ ಅಂಚೆಚೀಟಿ ಹೊರತರುವ ಮೂಲಕ ಅವರ ತತ್ವಗಳಿಗೆ ಸರಕಾರದ ಮನ್ನಣೆ ಲಭಿಸಿದಂತಾಗಿದೆ. ಅದಕ್ಕಾಗಿ ಶ್ರಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೊದಲಾದವರ ಸಹಕಾರ ಗಮನೀಯ ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.


64ನೇ ಜನ್ಮನಕ್ಷತ್ರೋತ್ಸವ-

ಇದೇ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮ ನಕ್ಷತ್ರ ಮಹೋತ್ಸವ ನಡೆಯಲಿದ್ದು, ಆ.30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು. 

ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ, ವಿವಿಧ ಹೋಮಗಳು ನಡೆಯಲಿದೆ.

ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಾಗರದಾಚೆಯೂ ನಡೆಸಿದ ಶ್ರೀಕೃಷ್ಣ ತತ್ವ ಪ್ರಸಾರ, ಕೃಷ್ಣ ಮಂದಿರ ಸ್ಥಾಪನೆ ಸೇರಿದಂತೆ ಶ್ರೀಗಳ ಸಿದ್ಧಿ ಸಾಧನೆ ಕುರಿತು ಎಲ್ಲೂರು ಸುಬ್ರಹ್ಮಣ್ಯ ರಾವ್ ಮತ್ತು ಓಂಪ್ರಕಾಶ ಭಟ್ ಸಂಪಾದಿತ `ವಿಶ್ವಮಾನ್ಯ ಯತಿಯ ಯಶೋಗಾಥೆ' ಪುಸ್ತಕ ಅನಾವರಣಗೊಳ್ಳಲಿದೆ.


ಗೌರವ ಡಾಕ್ಟರೇಟ್-

ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನಡೆಸಿರುವ ಶ್ರೀಕೃಷ್ಣ ತತ್ವ ಪ್ರಸಾರ ಹಾಗೂ ಅನಿವಾಸಿ ಭಾರತೀಯರು ಮಾತ್ರವಲ್ಲದೇ ವಿದೇಶಿಯರಲ್ಲಿ ಹಿಂದೂ ಸಂಸ್ಕೃತಿ ಹಾಗೂ ದೈವಿಕ ಪ್ರಜ್ಞೆ ಮೂಡಿಸಿ ಅವರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಆಫ್ರಿಕಾದ ಮೈಲ್ಸ್ ಲೀಡರ್ ಶಿಪ್ ಯೂನಿವರ್ಸಿಟಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.


ವಿಶ್ವರೂಪ ಅಲಂಕಾರ ಕವಚ-

ಶ್ರೀಗಳ 64ನೇ ಜನ್ಮನಕ್ಷತ್ರ ಮಹೋತ್ಸವ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಕಾಣಿಕೆಯಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿಶ್ವರೂಪ ದರ್ಶನ ಕವಚ ಸಮರ್ಪಣೆ ನಡೆಯಲಿದೆ. 

ಅದನ್ನು ಆ.29ರ ಸಂಜೆ 5 ಗಂಟೆಗೆ ವೈಭವದ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ತರಲಾಗುವುದು. 

ಆ.30ರಂದು ಶ್ರೀಕೃಷ್ಣನಿಗೆ ತೊಡಿಸಲಾಗುವುದು.


ಗುರುವಂದನೆ-

ಇದೇ ಸಂದರ್ಭದಲ್ಲಿ ಶ್ರೀಗಳಿಗೆ ಭಕ್ತರಿಂದ ಗುರುವಂದನೆ ನಡೆಯಲಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಆಫ್ರಿಕನ್ ವಿ.ವಿ. ಉಪಕುಲಪತಿ ಡಾ. ಕೆ. ರವಿ ಆಚಾರ್ಯ, ಬೆಂಗಳೂರು ತಥಾಗತ್ ಹಾರ್ಟ್ ಆಸ್ಪತ್ರೆಯ ಡಾ.ಮಹಾಂತೇಶ ಚರಂತಿಮಠ, ಮಾಹೆ ಉಪಕುಲಪತಿ ಡಾ. ಎಂ.ಡಿ. ವೆಂಕಟೇಶ್, ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಶತಾವಧಾನಿ ಡಾ.ರಾಮನಾಥ ಆಚಾರ್ಯ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿರುವರು. ನವದೆಹಲಿ ಕೇಂದ್ರೀಯ ಸಂಸ್ಕೃತ ವಿ.ವಿ. ಕುಲಪತಿ ಡಾ. ಶ್ರಿನಿವಾಸ ವರಖೇಡಿ ಶುಭಾಶಂಸನೆಗೈಯುವರು. 

ಬೆಳಗಾವಿ ವಿದ್ವಾನ್ ಗುರುರಾಜಾಚಾರ್ ಜೋಶಿ ಅವರನ್ನು ಗೌರವಿಸಲಾಗುವುದು. 

ಬಳಿಕ ಸಗ್ರಿ ಹವ್ಯಾಸಿ ಯಕ್ಷ ಕಲಾವಿದರಿಂದ `ಅರ್ತ ತ್ರಾಣ ಪರಾಯಣಮ್' ತೆಂಕುತಿಟ್ಟು ಯಕ್ಷಗಾನ ನಡೆಯಲಿದೆ.


ಈಶ- ಜೀವ ಭಾವ ಬೋಧಿಸಿದ ಮಧ್ವರು-

ಆಚಾರ್ಯ ಮಧ್ವಪ್ರಣೀತ ದ್ವೈತ ತತ್ವ ಮಾನವ ಜನ ಜೀವನಕ್ಕೆ ಹೊಂದಿಕೊಳ್ಳುವಂಥದು. ದೇವರಲ್ಲಿ ಭಕ್ತಿ ಮತ್ತು ಜನತೆಯ ಸೇವೆ ನಮ್ಮ ಜೀವನದ ಗುರಿಯಾಗಬೇಕು. ಗಳಿಸಿದ ಸಂಪತ್ತಿನ ಒಂದಂಶವನ್ನು ಜನಸೇವೆಗೆ ಮೀಸಲಿಡಬೇಕು. 

ಜೀವ ಜೀವರಲ್ಲಿ ಭೇದವಿದೆ. ಪ್ರತ್ಯೇಕ ಐಡೆಂಟಿಟಿ ಇದೆ ಎಂದು ಪ್ರತಿಪಾದಿಸಿದವರು ಆಚಾರ್ಯ ಮಧ್ವರು ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.

ಆಚಾರ್ಯ ಮಧ್ವರು ತಿಳಿಸಿದ ತರತಮ ಭೇದವನ್ನು ತಪ್ಪಾಗಿ ಗ್ರಹಿಸಲಾಗಿದೆ. ಭಾರತೀಯ ಅಂಚೆ ಇಲಾಖೆ ಅಂಚೆಚೀಟಿ ಹೊರತರುವ ಮೂಲಕ ಲೋಕಗುರು ಶ್ರೀ ಮಧ್ವಾಚಾರ್ಯರಿಗೆ ಗೌರವ ನೀಡಿದೆ. 

ಅದು ನಮ್ಮ ಚತುರ್ಥ ಪರ್ಯಾಯ ಹಾಗೂ ಶ್ರೀಕೃಷ್ಣ ಮಂಡಲೋತ್ಸವ ಸಂದರ್ಭದಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ ಎಂದರು.

ಜನ್ಮ ನಕ್ಷತ್ರ ಆಚರಣೆ ಮೂಲಕ ಇನ್ನಷ್ಟು ದೈವಭಕ್ತಿ ಹಾಗೂ ಹೆತ್ತವರು ಮತ್ತು ಹಿರಿಯರಲ್ಲಿ ಭಕ್ತಿ ತೋರ್ಪಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಹರಿ ಗುರುಗಳ ಸೇವೆಯನ್ನು ವಿಶ್ವರೂಪ ದರ್ಶನ ಅಲಂಕಾರ ಕವಚ ಹಾಗೂ ಅಂಚೆಚೀಟಿ ಬಿಡುಗಡೆ ಮೂಲಕ ನಡೆಸಲಾಗುತ್ತದೆ. 

ನಾವು ಪರ್ಯಾಯ ಪೂರ್ವದಲ್ಲಿ ಸಂಕಲ್ಪಿಸಿದ್ದ ಎಲ್ಲ ಕಾರ್ಯಗಳು ಈಡೇರಿದಂತಾಗಿದೆ. ಕಲ್ಸಂಕದಲ್ಲಿ ಗೋಪುರ ನಿರ್ಮಾಣ ಹಾಗೂ ರಸ್ತೆ ಅಗಲಗೊಳಿಸುವ ಕಾರ್ಯ ತಾಂತ್ರಿಕ ಕಾರಣಗಳಿಂದ ತೊಡಕಾಗಿದೆ. 

ಕೃಷ್ಣಮಠದಲ್ಲಿ ಸುಮಾರು 6-7 ಕೋ. ರೂ. ವೆಚ್ಚದ ಕಾಮಗಾರಿ ನಡೆದಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು