Header Ads Widget

ಶ್ರೀ ಶೀರೂರು ಪರ್ಯಾಯ 2026-28 ಏಳು ವಲಯಗಳ ಸಭೆ

ಶ್ರೀ ಶೀರೂರು ಮಠದ ಪರ್ಯಾಯದ ಕುರಿತಂತೆ ವಲಯವಾರುಗಳ ಪ್ರಮುಖರ ಸಂಘಟನಾತ್ಮಕ ಸಭೆಯನ್ನು ಶೀರೂರು ಮಠದಲ್ಲಿ ಕರೆಯಲಾಯಿತು. ಪರ್ಯಾಯ ಮಹೋತ್ಸವದ ಆಚರಣೆಯ ಪ್ರಯುಕ್ತ ಆಹ್ವಾನ ಪತ್ರಿಕೆಯನ್ನು ಮನೆ, ಮನೆಗೆ ತಲುಪಿಸುವ ಹಾಗೂ ಮಠದೊಂದಿಗೆ ನಿರಂತರ ಸಂಪರ್ಕದೊಂದಿಗೆ ಇರುವ ಸಲುವಾಗಿ ಉಡುಪಿ, ಹಿರಿಯಡ್ಕ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕುಂದಾಪುರ ಮತ್ತು ಬೈಂದೂರು ಎಂಬುದಾಗಿ ಎಂಟು ವಲಯಗಳನ್ನಾಗಿ ವಿಂಗಡಿಸಿ ಉಡುಪಿ ಹೊರತು ಪಡಿಸಿ ಉಳಿದ ಏಳು ವಲಯಗಳ ಪ್ರಮುಖರ ಸಭೆಯು ನಡೆಯಿತು. 

ಪ್ರತೀ ವಲಯಗಳಿಗೆ ಒಬ್ಬರು ಪ್ರಧಾನ ಸಂಚಾಲಕರು, ಒಬ್ಬರು ಮಹಿಳಾ ಸಂಚಾಲಕರು, ಹಾಗೂ ನಾಲ್ಕೈದು ಜನ ಸಂಚಾಲಕರನ್ನಾಗಿ ಆಯ್ಕೆ ಮಾಡಿ ಅವರಿಗೆ ಶ್ರೀ ಮಠದ ದಿವಾನರಿಂದ ಜವಾಬ್ದಾರಿ ಪತ್ರವನ್ನು ಹಸ್ತಾಂತರ ಮಾಡಲಾಯಿತು. ಪರ್ಯಾಯ ಸ್ವಾಗತ ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯಕ್ ಅವರು ವಲಯದ ಸದಸ್ಯರ ಜವಾಬ್ದಾರಿಗಳನ್ನು ಪ್ರಸ್ತಾವನೆಯಲ್ಲಿ ವಿವರಿಸುತ್ತ, ಮುಂದೆ ಎಲ್ಲ ವಲಯಗಳ ಪ್ರತಿ ಪಂಚಾಯತ್ ಮಟ್ಟದಲ್ಲಿ ಪ್ರಮುಖರ ಸಭೆ ಕರೆದು, ಮೂರನೇ ಹಂತದಲ್ಲಿ ಗ್ರಾಮ ಮಟ್ಟದಲ್ಲಿ ಸಭೆ ಕರೆದು ಪ್ರತಿ ವಾರ್ಡ್ ಗಳ ಸಮಿತಿ ರಚನೆ ಮಾಡಿ ಆ ವಾರ್ಡ್ ಸಮಿತಿಯ ಸದಸ್ಯರು ಉಡುಪಿ ಜಿಲ್ಲೆಯ ಎಲ್ಲ ಮನೆಗಳಿಗೆ ಶ್ರೀಮಠದ ಪರ್ಯಾಯ ಮಹೋತ್ಸವದ ಆಹ್ವಾನ ಪತ್ರಿಕೆ, ವಂತಿಗೆ ರೂಪದಲ್ಲಿ ಅಥವಾ ಕೃಷ್ಣ ದೇವರಿಗೆ ಅರ್ಪಣೆ ಮಾಡುವ ಭಕ್ತರಿಗೆ ಹದಿನಾಲ್ಕು ತೆಂಗಿನ ಕಾಯಿಯ ಸೇವೆಯ ಮನವಿ ಪತ್ರ, ಹಾಗೂ ಹೊರೆಕಾಣಿಕೆಯ ವಿಚಾರವನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ನಿರ್ವಹಿಸಬೇಕೆಂದು ಹೇಳಿದರು. ಶ್ರೀ ಮಠದ ದಿನಾನರಾದ ಡಾ ಉದಯ ಕುಮಾರ್ ಸರಳತ್ತಾಯರು ಮಾತನಾಡಿ ಕೃಷ್ಣ ದೇವರಿಗೆ 14 ತೆಂಗಿನ ಕಾಯಿ ಸೇವೆಯ ಮಹತ್ವದ ಬಗ್ಗೆ ವಿವರಿಸಿದರು. ಹಾಗೂ ಈ ಪರ್ಯಾಯ ಶೀರೂರು ಮಠದ್ದಲ್ಲ, ಕೃಷ್ಣ ಭಕ್ತರ ಪರ್ಯಾಯ ಹಾಗಾಗಿ ಎಲ್ಲರ ಭಕ್ತರೂ ಇದರಲ್ಲಿ ಸಂಪೂರ್ಣವಾಗಿ ಇಷ್ಟ ಪಟ್ಟು ತೊಡಗಿಸಿಕೊಳ್ಳಬೇಕಾಗಿ ಮನವಿ ಮಾಡಿದರು. ಸ್ವಾಗತ ಸಮಿತಿಯ ಸಂಚಾಲಕರುಗಳಾದ ಸುಪ್ರಸಾದ್ ಶೆಟ್ಟಿ, ರಮೇಶ್ ಕಾಂಚನ್, ಶ್ರೀಧರ್ ಭಟ್, ಕೋಶಾಧಿಕಾರಿಗಳಾದ ಜಯಪ್ರಕಾಶ್ ಕೆದ್ಲಾಯ, ನಗರಸಭಾ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಮಟ್ಟಾರ್ ರತ್ನಾಕರ ಹೆಗ್ಡೆ ಯವರು ಏಳು ವಲಯಗಳ ಜವಾಬ್ದಾರಿ ವ್ಯಕ್ತಿಗಳನ್ನು ಘೋಷಣೆ ಮಾಡಿದರು. ಪರ್ಯಾಯ ಕಾರ್ಯಕ್ರಮಗಳಿಗೆ ಹಾಗೂ ಪರ್ಯಾಯೋತ್ಸವ ಆದ ಬಳಿಕವೂ ಮಠದೊಂದಿಗೆ ತಾವೆಲ್ಲರೂ ನಿಕಟವಾದ ಸಂಬಂಧದೊಂದಿಗೆ ಇರಬೇಕೆಂದು ಹೇಳಿದರು. ಉಡುಪಿ ವಲಯದ ಜವಾಬ್ದಾರಿಗಳನ್ನು ಮತ್ತೊಮ್ಮೆ ವಿಶೇಷ ಸಭೆ ಕರೆದು ಘೋಷಿಸುವುದಾಗಿ ಹೇಳಿದರು. ದಿವಾನರಾದ ಶ್ರೀ ಉದಯಕುಮಾರ್ ಸರಳತ್ತಾಯರವರು ಜವಾಬ್ದಾರಿ ಪತ್ರ ಹಸ್ತಾಂತರಿಸಿದರು. ಶೋಭಾ ಉಪಾಧ್ಯಾಯ ಪ್ರಾರ್ಥನೆ ಮಾಡಿದರೆ ಜೊತೆ ಕಾರ್ಯದರ್ಶಿಗಳಾದ ಸಂದೀಪ್ ಮಂಜ ಧನ್ಯವಾದ ಸಮರ್ಪಿಸಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಮೋಹನ್ ಭಟ್, ಜೊತೆ ಕಾರ್ಯದರ್ಶಿಗಳಾದ ವಿಷ್ಣು ಪ್ರಸಾದ್ ಪಾಡಿಗಾರ್,ಪ್ರಥ್ವಿರಾಜ್ ಬಿಲ್ಲಾಡಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು