Header Ads Widget

ಪಡುಬಿದ್ರಿ: ಟಿಪ್ಪರ್-ಪಿಕಪ್ ನಡುವೆ ಭೀಕರ ಅಪಘಾತ; ನವವಾಹಿತ ಪಾದಚಾರಿ ಯುವಕ ದಾರುಣ ಸಾವು!

ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ ನಡೆದ ಅಪಘಾತದಲ್ಲಿ ನವ ವಿವಾಹಿತನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಪಡುಬಿದ್ರಿ ಕಾಮತ್ ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದೆ.

ಮೃತನನ್ನು ಬಿಹಾರ ಮೂಲದ ಎರ್ಮಾಳಿನ ಪ್ರೈವುಡ್ ಫ್ಯಾಕ್ಟರಿ ಉದ್ಯೋಗಿ ರಾಜಕುಮಾರ ಶರ್ಮ(23) ಎಂದು ಗುರುತಿಸಲಾಗಿದೆ. ಇವರು ಇಬ್ಬರು ಸಹೋದ್ಯೋಗಿಗಳೊಂದಿಗೆ ಪಡುಬಿದ್ರಿ ಪೇಟೆ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಹೆದ್ದಾರಿಯಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರ ಪೈಕಿ ಓರ್ವನಿಗೆ ಡಿಕ್ಕಿ ಹೊಡೆದು ಪಕ್ಕದ ಕಟ್ಟಡದ ಗೋಡೆಗೆ ಡಿಕ್ಕಿಯಾಗಿ ನಿಂತಿದೆ. ಡಿಕ್ಕಿಯ ರಭಸಕ್ಕೆ ಕಟ್ಟಡದ ಗೋಡೆಯೂ ಕುಸಿದು ಬಿದ್ದಿದೆ.

ಅಪಘಾತದಿಂದ ರಾಜಕುಮಾರ ಶರ್ಮ ತಲೆಗೆ ಗಂಭೀರ ಹೊಡೆತ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿತ್ತು. ಆಸ್ಪತ್ರೆಗೆ ಕೊಂಡೊಯ್ಯುವಾಗ ಅವರು ಕೊನೆಯುಸಿರೆಳೆದಿದ್ದಾರೆ.

ಮೃತ ರಾಜಕುಮಾರ್ ಅವರಿಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಎರ್ಮಾಳಿನ ಪೀಠೋಪಕರಣ ತಯಾರಿ ಘಟಕದಲ್ಲಿ ಬಡಗಿಯಾಗಿ ದುಡಿಯುತ್ತಿದ್ದರು.

ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು