ಉಡುಪಿ ಬಳಕೆದಾರರ ವೇದಿಕೆಯ ಹಿರಿಯ ವಿಶ್ವಸ್ಥ ಅಲೆವೂರು ಪದ್ಮನಾಭ ಕೊಡಂಚ(89) ದಿನಾಂಕ:31-08-2025ರ ತಡರಾತ್ರಿ ಕೊಳ್ಳೇಗಾಲದ ತಮ್ಮ ಪುತ್ರಿಯ ಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಸುಮಾರು 39 ವರ್ಷಗಳ ಸೇವೆ ಸಲ್ಲಿಸಿ, ಜನರಲ್ ಮೇನೇಜರ್ ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ಉಡುಪಿ ಬಳಕೆದಾರರ ವೇದಿಕೆಯಲ್ಲಿ ಸುಮಾರು 29 ವರ್ಷಗಳ ಕಾಲ ವಿಶ್ವಸ್ಥರಾಗಿ ಸೇವೆ ಸಲ್ಲಿಸಿ ಸಾವಿರಾರು ಮಂದಿ ಸಂತ್ರಸ್ತ ಗ್ರಾಹಕರಿಗೆ ಮಾರ್ಗದರ್ಶನ ನೀಡಿದ್ದರು. ಗ್ರಾಹಕರಿಗಾಗಿ ಅನೇಕ ಕಮ್ಮಟ-ಕಾರ್ಯಾಗಾರಗಳನ್ನು ನಡೆಸಿ, ಗ್ರಾಹಕ ಜಾಗೃತಿ ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ಬಳಕೆದಾರರ ವೇದಿಕೆ ಪತ್ರಿಕೆಯಲ್ಲಿ 10 ವರ್ಷಗಳಿಗೂ ಮಿಕ್ಕಿದ ಗ್ರಾಹಕ ಸಮಸ್ಯೆಗಳ ಪ್ರಶೋತ್ತರ ಅಂಕಣವು ಪ್ರಸಿದ್ದಿ ಪಡೆದಿತ್ತು.
ದೂರದರ್ಶನದಲ್ಲಿ ಗ್ರಾಹಕ ಸ್ನೇಹಿ ಸಂದರ್ಶನ ಪ್ರಸಾರಗೊಂಡಿತ್ತು. ಹಿರಿಯ ನಾಗರಿಕರ ವೇದಿಕೆ, ಅಂಚೆ ಸಲಹಾ ಸಮಿತಿ, ಪಾವನ ಪರಿಷತ್‌ನಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಕೊಡಂಚರು ಕಳೆದ ಫೆಬ್ರವರಿ ತಿಂಗಳಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ "ಸೇವಾಭೂಷಣ" ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಮೃತರಿಗೆ ಬಳಕೆದಾರರ ವೇದಿಕೆಯು ಶ್ರದ್ಧಾಂಜಲಿ ಸಲ್ಲಿಸಿದೆ.
~ಎನ್. ರಾಮ ಭಟ್, ವಿಶ್ವಸ್ಥರು, ಬಳಕೆದಾರರ ವೇದಿಕೆ ಉಡುಪಿ.
0 ಕಾಮೆಂಟ್‌ಗಳು