Header Ads Widget

ಕೊಡವೂರಿನಲ್ಲಿ ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರದ ಸಮಾರೋಪ

ಉಡುಪಿ : ನಾನು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷನಾಗಲು ಬಯಸಿದ್ದ ಉದ್ದೇಶ ಇಷ್ಟೇ, ಅಕಾಡೆಮಿ ಕೊಡುವ ಸೌಲಭ್ಯಗಳು ಕಲೆ, ಕಲಾವಿದರನ್ನು ಮುಟ್ಟಬೇಕು ಎನ್ನುವುದು. ಹೀಗಾಗಿ ಯಕ್ಷಗಾನಕ್ಕೆ ಸಂಬoಧಿಸಿದ ಕಾರ್ಯಕ್ರಮಗಳಿಗೆ ಸಹಕಾರ ಕೋರಿ ಬರುವ ಸಂಘಸoಸ್ಥೆಗಳನ್ನು ಬೆಂಬಲಿಸುವ ಕಾರ್ಯ ಮಾಡುತ್ತಿದ್ದೇನೆ. ಯಕ್ಷಗಾನ ಉಳಿಸುವುದು ಕೇವಲ ಅಕಾಡೆಮಿಯ ಕೆಲಸವಲ್ಲ, ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳು ಅಕಾಡೆಮಿ ಜೊತೆಗೆ ಕೈ ಜೋಡಿಸಬೇಕು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಸೋಮವಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಸುಮನಸಾ ಕೊಡವೂರು - ಉಡುಪಿ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಂಡ ಒಂದು ತಿಂಗಳ 'ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರ'ದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನ ಕಲೆಗೆ ಅದ್ಭುತ ಶಕ್ತಿಯಿದೆ. ಅದು ಅಬಾಲವೃದ್ಧರನ್ನು ಕುಣಿಸುವ ಶಕ್ತಿಯನ್ನು ಹೊಂದಿದೆ. ಯಕ್ಷಗಾನವನ್ನು ಕಲಿತವರು ಆರೋಗ್ಯ, ಜೀವನೋತ್ಸಾಹದಿಂದ ಬದುಕುತ್ತಾರೆ. ಬನ್ನಂಜೆ ಸಂಜೀವ ಸುವರ್ಣ ಅವರಂತಹ ಅದ್ಭುತ ಗುರು ನಮ್ಮಲ್ಲಿರುವುದು ನಮ್ಮ ಸೌಭಾಗ್ಯ, ಅವರಲ್ಲಿರುವ ಯಕ್ಷಗಾನ ಪಾಂಡಿತ್ಯವನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯ ನಡೆಯಬೇಕು ಎನ್ನುವ ಉದ್ದೇಶದಿಂದ ಅಕಾಡೆಮಿ ಅವರ ಬಗ್ಗೆ ದಾಖಲೀಕರಣ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಮಕ್ಕಳೊಂದಿಗೆ ಮಹಿಳೆಯರು ಯಕ್ಷಗಾನಕ್ಕೆ ಬರಬೇಕು. ಸಮಾಜ ಅದಕ್ಕೆ ಪ್ರೋತ್ಸಾಹ ನೀಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಬಲ್ಲವರ ಮಾತಿನಂತೆ, ಮಹಿಳೆ ಯಕ್ಷಗಾನವನ್ನು ಕಲಿತರೆ ತನ್ನ ಮಕ್ಕಳನ್ನು ಮಾತ್ರವಲ್ಲದೆ, ಇತರರನ್ನು ಈ ಕಲೆಯ ಕಡೆಗೆ ಸೆಳೆಯುವ ಶಕ್ತಿ ಆಕೆಗಿದೆ. ಆದ್ದರಿಂದಲೇ ಯಕ್ಷಗಾನ ಅಕಾಡೆಮಿ ಮಕ್ಕಳ ಯಕ್ಷಗಾನ ತಂಡ ಹಾಗೂ ಮಹಿಳಾ ಯಕ್ಷಗಾನ ತಂಡಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಡಾ.ತಲ್ಲೂರು ಹೇಳಿದರು.

ಭವಿಷ್ಯದಲ್ಲಿ ಮಕ್ಕಳು ತಮ್ಮ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ನೀವು ಬಯಸುವುದಾದರೆ ಬಾಲ್ಯದಲ್ಲಿಯೇ ಅವರಿಗೆ ಯಕ್ಷಗಾನವನ್ನು ಕಲಿಸಿ ಎಂದು ನಾನು ಹೋದಲೆಲ್ಲಾ ಹೇಳುತ್ತಿದ್ದೇನೆ. ಕಾರಣ ಇಷ್ಟೇ ಯಕ್ಷಗಾನ ಕಲಿತ ಮಕ್ಕಳು ದಾರಿ ತಪ್ಪಿ ಹೋಗಲಾರರು. ಯಕ್ಷಗಾನ ಅವರ ಶೈಕ್ಷಣಿಕ ಪ್ರಗತಿಗೂ ಕಾರಣವಾಗುತ್ತಿದೆ ಎಂಬುದು ನಾವು ಶಾಲೆಗಳಲ್ಲಿ ಆರಂಭಿಸಿರುವ ಯಕ್ಷ ಶಿಕ್ಷಣದಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಸುಮನಸಾ ಕೊಡವೂರು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಕೊಡವೂರು, ಗೌರವಾಧ್ಯಕ್ಷ ಎಂ.ಎಸ್.ಭಟ್ ಹಾಗೂ ಅವರ ತಂಡದ ಕಲಾಸೇವೆ ಅಭಿನಂದನೀಯ ಎಂದರು.

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಸುಮಸನಾ ಕೊಡವೂರು ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಪ್ರಸಿದ್ಧ ರಂಗಕರ್ಮಿಗಳನ್ನು ನಾಡಿಗೆ ಅರ್ಪಿಸಿದ ಖ್ಯಾತಿಹೊಂದಿದೆ. ತರಬೇತಿ ನಮ್ಮ ಕಲಿಕೆಯನ್ನು ಪರಿಪೂರ್ಣಗೊಳಿಸುತ್ತದೆ. ಈ ಮಣ್ಣಿನ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಲು ಯುವಕರ ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿಯ ಸಹಕಾರದಿಂದ ಸುಮನಸಾ ಕೊಡವೂರು ಸಂಸ್ಥೆ ಯಕ್ಷಗಾನದ ಹೆಜ್ಜೆ ತರಬೇತಿಯನ್ನು ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಉದ್ಯಮಿ ಗೋಪಾಲ ಸಿ. ಬಂಗೇರ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ ತರಬೇತುದಾರ ಮನೋಜ್ ಉಪಸ್ಥಿತರಿದ್ದರು.

ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ಗೌರವಾಧ್ಯಕ್ಷರಾದ ಎಂ.ಎಸ್. ಭಟ್ ವಂದಿಸಿದರು. ಕಾರ್ಯದರ್ಶಿ ಚಂದ್ರಕಾoತ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶಿಬಿರದ ಪ್ರಾತ್ಯಕ್ಷಿಕೆ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು