ಉಡುಪಿ: ಹೊಂಡ ಗುಂಡಿಗಳಿ೦ದ ತುಂಬಿ, ಏರು ತಗ್ಗುಗಳಿಂದ ಅಪಘಾತ ವಲಯವಾಗಿ ಏರ್ಪಟ್ಟ ಪರ್ಕಳ ಕೆಳಪೇಟೆಯ ರಾಷ್ಟ್ರೀಯ ಹೆದ್ದಾರಿಯ ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಭೇಟಿ ಮಾಡಿ ಸ್ಥಳ ಪರಿಶೀಲಿಸಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಜನಪ್ರತಿನಿಧಿಗಳ ತಂಡ ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ಸವಿವರವಾಗಿ ವಿವರಿಸಿದರು. ರಸ್ತೆಯ ಸುವ್ಯವಸ್ಥೆಗಾಗಿ ಎಲ್ಲಾ ಸಾಮಗ್ರಿಗಳನ್ನು ಶೇಖರಿಸಿಕೊಂಡು ಸೆಪ್ಟೆಂಬರ್ 15ರಿಂದ ರಸ್ತೆಯನ್ನು ಸಮರ್ಪಕಗೊಳಿಸುವ ಕೆಲಸ ಕಾರ್ಯಗಳು ಆರಂಭವಾಗಲಿದೆ ಎಂದು ಸಂಸದ ಕೋಟ ತಿಳಿಸಿದರು.
ಪರ್ಕಳ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಪರ್ಕಳದಿಂದ ಉಡುಪಿಗೆ ಬರುವ ವಾಹನಗಳಿಗೆ ಅದೇ ರಸ್ತೆಯ ಒಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹಾಗೂ ಉಡುಪಿಯಿಂದ ಪರ್ಕಳಕ್ಕೆ ಸೇರುವ ರಸ್ತೆಗೆ ಬದಲಿ ರಸ್ತೆಯ ಅವಕಾಶವನ್ನು ಮಾಡಿಕೊಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್ ಕಾಮಗಾರಿ ನಡೆಯುವಾಗ ಬದಲಿ ಸಂಚಾರದ ವ್ಯವಸ್ಥೆಯ ಬಗ್ಗೆ ಸುದೀರ್ಘ ಮಾಹಿತಿ ಒದಗಿಸಿದರು. ಸಂಸದರ ಪ್ರಯತ್ನದಿಂದಾಗಿ ಸದರಿ ಕಾಮಗಾರಿಗೆ ಕೇಂದ್ರ ಸಚಿವಾಲಯದ ಸೂಚನೆ ಮೇರೆಗೆ ಹಣ ಬಿಡುಗಡೆಗೆ ಒಪ್ಪಿರುವುದಾಗಿ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ ಎಂದು ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್ ನಾಯಕ್ ತಿಳಿಸಿದರು.
ಸಂಸದರೊ೦ದಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹಾಗೂ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಹಾಗೂ ಸ್ಥಳೀಯ ನಗರಸಭಾ ಸದಸ್ಯೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು