Header Ads Widget

ಪ್ರತಿ ದಿನವೂ ಶಿಕ್ಷಕರ ದಿನವಾಗಲಿ ~ರಾಘವೇಂದ್ರ ಪ್ರಭು ಕವಾ೯ಲು

ವಷ೯ಕ್ಕೆ ಒಂದು ಬಾರಿ ಶಿಕ್ಷಕರನ್ನು ನೆನೆದರೆ ಸಾಲದು ಪ್ರತಿ ದಿನವೂ ಅವರನ್ನು ನೆನಪು ಮಾಡಿ ಕೊಳ್ಳೋಣ

ಕೇವಲ ಸೆಪ್ಟೆಂಬರ್ 5 ರಂದು ಒಂದು ದಿನ ಶಿಕ್ಷಕರ ಕರೆದು ಗೌರವಿಸಿದರೆ ಸಾಲದು ಅವರ ನೆನಪು ಪ್ರತಿದಿನವೂ ನಮಗಾಗಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಕೂಡ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ಮಾಡಬೇಕಾಗಿದೆ.


ವ್ಯಕ್ತಿತ್ವ ನಿರ್ಮಾಣದ ಸಹಕಾರ ಮೂರ್ತಿ :-

ಮಕ್ಕಳ ವ್ಯಕ್ತಿತ್ವ ನಿರೂಪಿಸುವಲ್ಲಿ ತಂದೆ ತಾಯಿಗಳಿಂದಲೂ ಸಾಧ್ಯವಾಗದ ಕೆಲ ಅಂಶಗಳು ಶಿಕ್ಷಕರಿಂದ ಸಾಧ್ಯವಾಗುತ್ತವೆ. ಆದ್ದರಿಂದ ಶಿಕ್ಷಕರು ಒಗ್ಗೂಡಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಸಂಸ್ಕೃತಿ ಸಂಪನ್ನ ಮತ್ತು ಪ್ರಬಲ ರಾಷ್ಟ್ರ ಕಟ್ಟುವಲ್ಲಿ ಸಂಶಯವಿಲ್ಲ.

ಶಿಲ್ಪಿಯೊಬ್ಬ ಕಲ್ಲನ್ನು ಕೆತ್ತಿ ಸುಂದರವಾದ ಮೂರ್ತಿ ತಯಾರು ಮಾಡುವುದಕ್ಕಿಂತ ಕಷ್ಟ ಸಾಧ್ಯವಾದ ಕೆಲಸ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುವುದು.

ಹೊಸ ರಕ್ತ ಹರಿಯುತ್ತಿರುವ ವಿದ್ಯಾರ್ಥಿ ಸಮೂಹವನ್ನು ಆಟ ಪಾಠಗಳ ಮೂಲಕ ಹತೋಟಿಯಲ್ಲಿಟ್ಟುಕೊಂಡು ಚಂಚಲ ಚಿತ್ತದ ವಿದ್ಯಾರ್ಥಿಯ ಬುದ್ಧಿಯನ್ನು ತಿದ್ದಿ ಅವನನ್ನು ಸತ್ಪ್ರಜೆಯಾಗಿಸುವುದು ಪ್ರಯಾಸದ ಕೆಲಸ. ಇಂಥ ಮಹಾ ಕಾರ್ಯವನ್ನು ಶಿಕ್ಷಕರು ಮಾತ್ರ ನಿರಂತರವಾಗಿ ಮಾಡಬಲ್ಲರು.

ಶಿಕ್ಷಣದ ಸಾರ ಸರ್ವಸ್ವ-

ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಸಂಪೂರ್ಣ ಶಕ್ತಿಯನ್ನು ಹೊರಗೆಳೆಯುವುದೇ ಶಿಕ್ಷಣದ ಸಾರ ಸರ್ವಸ್ವ’ ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಬೇಕಾದದ್ದು ಶಿಕ್ಷಕರ ಪರಮ ಕರ್ತವ್ಯ. ಪ್ರತಿಭಾ ಶೋಧದಿಂದ ಮಾತ್ರ ಆರೋಗ್ಯ ಪೂರ್ಣ ಸಮಾಜಕ್ಕೆ ಅಗತ್ಯವಿರುವ ಎಲ್ಲ ತರಹದ ವ್ಯಕ್ತಿಗಳನ್ನು ಶಿಕ್ಷಕ ಸಮಾಜಕ್ಕೆ ನೀಡಬಲ್ಲರು.


ಗ್ರಾಮಕ್ಕೊಂದು ಶಾಲೆ ಬೇಕು :-

’ಶಾಲೆಯೊಂದು ದೇವಾಲಯ ,ಅದರ ಪರಿಸರವು ಶಿಸ್ತಿನಿಂದ ಸ್ವಚ್ಛತೆಯಿಂದ ಕಂಗೊಳಿಸುತ್ತಿರಬೇಕು. ಎಂಬ ಅರಿವನ್ನು ಶಿಕ್ಷಕರು ಮಾತ್ರ ಚೆನ್ನಾಗಿ ಮೂಡಿಸಬಲ್ಲರು. ಕವಿ ರವೀಂದ್ರನಾಥ್ ಠಾಗೋರ್ ಹೇಳಿರುವಂತೆ,’ ಒಂದು ಪ್ರಜ್ವಲಿಸುವ ದೀಪ ಮಾತ್ರ ಇನ್ನೊಂದು ದೀಪವನ್ನು ಬೆಳಗಿಸಬಲ್ಲುದು’ ಎಂಬ ನುಡಿಮುತ್ತಿನಂತೆ ಶಿಕ್ಷಕ ಸದಾ ಪುಸ್ತಕ ಪ್ರೇಮಿಯಾಗಿ ಹೊರಗಿನ ಜಗತ್ತಿನ ಆಗು ಹೋಗುಗಳಿಗೆ ಮತ್ತು ಬದಲಾವಣೆಗಳ ಬಗ್ಗೆ ಗಮನ ಹರಿಸಿದಾಗ ಮಾತ್ರ ಸಾಧ್ಯ.

ಶಿಕ್ಷಕರು ಓದುವ ಹವ್ಯಾಸ ನಿರಂತರವಾಗಿ ಮಾಡಬೇಕು.

ಸರ್ವ ಗುಣ ಸಂಪನ್ನ-

ಶಿಕ್ಷಕರು ಪಾಠ ಪ್ರವಚನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ಸೋಮಾರಿಗಳಾಗುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ಸಮೀಕ್ಷೆ ತಿಳಿಸಿದೆ. ಇದು ಶಿಕ್ಷಕ ಸಮುದಾಯ ತಲೆ ತಗ್ಗಿಸುವ ವಿಷಯ. ಅವರು ಸೋಮಾರಿಗಳಾಗದೆ, ಕ್ರಿಯಾಶೀಲರಾಗಬೇಕಿದೆ. ವಿಷಯ ಲಂಪಟತೆಯನ್ನು ಬಿಟ್ಟು ವಿದ್ಯಾದಾನಕ್ಕೆ ತಮ್ಮನ್ನು ಅರ್ಪಿಸಿಕೊಳ್ಳಬೇಕಿದೆ.

ಶಿಕ್ಷಕನು ತಾನು ಮೊದಲು ಸರ್ವ ಗುಣ ಸಂಪನ್ನನಾದರೆ ಮಾತ್ರ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ದುಷ್ಟರ ಸಹವಾಸಕ್ಕೆ ಬೀಳದಂತೆ ಮನೋವಿಕಾರಗಳಲ್ಲಿ ಬಳಲದಂತೆ ಕಾಪಾಡಬಹುದು. ಈ ಮಾತು ಸ್ವಲ್ಪ ಖಾರವಾಗಿ ಇದ್ದರೂ ಕೂಡ ವಾಸ್ತವ ಆದರೆ ಹೆಚ್ಚಿನ ಶಿಕ್ಷಕರು ಈ ನಿಟ್ಟಿನಲ್ಲಿ ಉತ್ತಮ ರೀತಿಯ ಅಧ್ಯಯನಶೀಲ ರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವುದು ಅತ್ಯಂತ ಅಭಿನಂದನೀಯ.

ಜೀವ ಪರ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಜೀವ ತತ್ವಗಳನ್ನು ಜೀವನ ಸಂದೇಶಗಳನ್ನು ಮೈಗೂಡಿಸಿಕೊಳ್ಳಲು ಕಲಿಸುವ ಕಲಾವಿದ ನಮ್ಮ ಶಿಕ್ಷಕರು.ಬದುಕಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸುಲಭವಾಗಿ ಬಿಡಿಸಿ, ಸುಂದರವಾದ ಜೀವನವನ್ನು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವ ಶಕ್ತಿ ಶಿಕ್ಷಕನಿಗಿದೆ.


ಸಮಾಜಕ್ಕೆ ನಿಜವಾದ ದಾರಿದೀಪ ನಮ್ಮ ಶಿಕ್ಷಕರು :-

ಜೀವನದ ಪರಮೋಚ್ಛ ಗುರಿ

ಬರೀ ಶ್ವಾಸವಿರುವ ಮಕ್ಕಳಿಗೆ ಆತ್ಮ ವಿಶ್ವಾಸವನ್ನು ಮೂಡಿಸಿ ಗೆಲುವಿನ ಶಿಖರದ ತುತ್ತ ತುದಿ ಮುಟ್ಟುವಂತೆ ಪ್ರೇರೇಪಿಸುವ ವಿಶಿಷ್ಟ ಚಾಣಾಕ್ಷತನ ಅವರಲ್ಲಿದೆ. ಜಗತ್ತಿನ ಜನರೆಲ್ಲ ಇಷ್ಟ ಪಡುವ ಮಾತಿನ ಸಿಹಿಯನ್ನು ಕರಗತ ಮಾಡಿಸುವ, ಕೃತಿಯ ಮಹತ್ವವನ್ನು ತಿಳಿಸುವ ಸಾಟಿಯಿಲ್ಲದ ಗುಣವಂತ. ಬದುಕಿನ ನಿಗೂಢತೆಯ ಪ್ರಶ್ನೆಗಳಿಗೆ ಉತ್ತರಗಳಿವೆ ಹುಡುಕಲು ಯತ್ನಿಸಿದರೆ ಖಂಡಿತ ಸಿಗುತ್ತವೆ ಎನ್ನುವ ಮನೋಬಲವನ್ನು ತುಂಬುವ ಮಹಾನ್ ತತ್ವಜ್ಞಾನಿ.

ಮರೆತಿರುವ ಮೌಲ್ಯಗಳನ್ನು ಮರು ಸ್ಥಾಪಿಸಲು ಸದಾ ಹೋರಾಡುವ ಹೋರಾಟಗಾರ. ಅಸ್ತಿತ್ವದ ಮೂಲ ಉದ್ದೇಶಗಳ ಜೊತೆಗೆ ವಿಭಿನ್ನ ಪಾಠಗಳನ್ನು ಕಲಿತು ಮಹೋನ್ನತ ಬದುಕನ್ನು ನಡೆಸುವುದು ಜೀವನದ ಪರಮೋಚ್ಛ ಗುರಿ. 


ಗಾಂಧೀಜಿಯವರ ನುಡಿ ಮುತ್ತು ನಮ್ಮ ಶಿಕ್ಷಕರ ಬಗ್ಗೆ ;-

"ನೀವು ಇಲ್ಲಿ ಕೇವಲ ಬದುಕು ಸಾಗಿಸಲು ಬಂದಿಲ್ಲ. ಇಡೀ ಜಗತ್ತು ಇನ್ನಷ್ಟು ಧಾರಾಳವಾಗಿ, ಮಹಾನ್ ದೂರದರ್ಶಿತ್ವದಿಂದ ಭರವಸೆ ಮತ್ತು ಸಾಧನೆಗಳ ಉತ್ಸುಕತೆಯಿಂದ ಬದುಕಲು ಸಾಧ್ಯವಾಗಿಸಲು ಬಂದಿದ್ದೀರಿ.

’ಎಷ್ಟೇ ಅಮುಖ್ಯವಾದ ವಿಷಯವಿರಲಿ, ಅದನ್ನು ನೀವು ಮಖ್ಯವಾದುದು ಎಂದು ಭಾವಿಸುವ ವಿಷಯಕ್ಕೆ ಕೊಡುವಷ್ಟೇ ಕಾಳಜಿ ಮತ್ತು ಪ್ರಾಮುಖ್ಯತೆ ನೀಡಿ. ಏಕೆಂದರೆ ನೀವು ಇಂಥ ಸಣ್ಣ ವಿಷಯಗಳಿಂದಲೇ ನಿರ್ಣಯಿಸಲ್ಪಡುತ್ತೀರಿ’ ಎನ್ನುವ ನುಡಿಮುತ್ತನ್ನು ಬಾಳಲ್ಲಿ ತಾನು ರೂಢಿಸಿಕೊಂಡು ವಿದ್ಯಾರ್ಥಿಗಳ ಬದುಕಿಗೆ ರವಾನಿಸಿ, ಅವರ ಬದುಕನ್ನು ರೂಪಿಸಿ ನಮ್ಮ ಸಮಾಜದ ದೊಡ್ಡ ಆಸ್ತಿಯನ್ನಾಗಿ ಮಾಡುವ ಮಹಾ ಕೈಂಕಯ೯ ನಮ್ಮ ಶಿಕ್ಷಕರಿಂದ ನಡೆಯುತ್ತಿದೆ.

ನಮ್ಮಲ್ಲಿ ಬಹುತೇಕ ಮಕ್ಕಳ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಶ್ರೇಷ್ಠ ವಿದ್ಯಾವಂತರನ್ನಾಗಿಸುವ ಹೊಣೆಯನ್ನು ಶಿಕ್ಷಕರಿಗೇ ಹೊರೆಸಿದ್ದಾರೆ. ಇದನ್ನು ಮನಗಂಡು ಶಿಕ್ಷಕರು ಕಾರ್ಯ ನಿರ್ವಹಿಸಬೇಕು.


ಶಿಕ್ಷಣಕ್ಕಿಂತ ಶಿಕ್ಷಕನಿಗೆ ಹೆಚ್ಚಿಗೆ ಮಹತ್ವವಿದೆ:-

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ಕುಂಭಕರ್ಣ ನಿದ್ರೆಯಿದೆ. ಆ ನಿದ್ರೆಯಿಂದ ಎದ್ದಾಗ ಪವಾಡಗಳು ಸಂಭವಿಸುತ್ತವೆ ಎನ್ನುವುದು ಫ್ರೆಡ್ರಿಕ್ ಫಾಸ್ಟ್ ನ ಮಾತು. ಎಷ್ಟೊಂದು ಸತ್ಯವಾದ ಮಾತಲ್ಲವೇ? ಕುಂಭಕರ್ಣ ನಿದ್ರೆಯಿಂದ ಎಬ್ಬಿಸುವ ಕಾರ್ಯ ಶಿಕ್ಷಕನದು. ಒಟ್ಟಿನಲ್ಲಿ ಜೀವನದ ಅತ್ಯುತ್ತಮ ತರಬೇತುದಾರ ಶಿಕ್ಷಕ.

ರಾಷ್ಟ್ರವಿರುವುದು ಸರ್ಕಾರ ಆಳುವವರ ಕೈಯಲ್ಲೂ ಅಲ್ಲ. ಗಡಿ ಕಾಯುವ, ನಮ್ಮನ್ನು ಹೊರಗಿನ ಶತ್ರುಗಳಿಂದ ರಕ್ಷಿಸುವ ಸೈನಿಕರ ಕೈಯಲ್ಲೂ ಅಲ್ಲ. ಅದು ಶಿಕ್ಷಕರ ಕೈಯಲ್ಲಿದೆ. ಖ್ಯಾತ ತತ್ವಜ್ಞಾನಿ ಸಂಶೋಧಕ ಸಿ ಪಿ ಅಯ್ಯರ್‌ವರು ಹೇಳಿರುವಂತೆ’ ಶಿಕ್ಷಣಕ್ಕಿಂತ ಶಿಕ್ಷಕನಿಗೆ ಹೆಚ್ಚಿಗೆ ಮಹತ್ವವಿದೆ, ಹೊಣೆಗಾರಿಕೆಯಿದೆ.’

ಸಂದಿಗ್ಧ ಸ್ಥಿತಿಯಲ್ಲಿ ಬದುಕನ್ನು ನಿಭಾಯಿಸುವುದು ಹೇಗೆ? ಎಂದು ಹೇಳುವ ಮಹತ್ವದ ಹೊಣೆಯೂ ಶಿಕ್ಷಕನ ಕರ್ತವ್ಯದ ಭಾಗವಾಗಿದೆ. ’ನೀವು ಇಲ್ಲಿ ಕೇವಲ ಬದುಕು ಸಾಗಿಸಲು ಬಂದಿಲ್ಲ. ಇಡೀ ಜಗತ್ತು ಇನ್ನಷ್ಟು ಧಾರಾಳವಾಗಿ, ಮಹಾನ್ ದೂರದರ್ಶಿತ್ವದಿಂದ ಭರವಸೆ ಮತ್ತು ಸಾಧನೆಗಳ ಉತ್ಸುಕತೆಯಿಂದ ಬದುಕಲು ಸಾಧ್ಯವಾಗಿಸಲು ಬಂದಿದ್ದೀರಿ. ನೀವು ಜಗತ್ತನ್ನು ಸಮೃದ್ಧಗೊಳಿಸಲು ಇಲ್ಲಿ ಬಂದಿದ್ದೀರಿ. ಈ ಕೆಲಸವನ್ನು ಮರೆತಲ್ಲಿ ನೀವು ನಷ್ಟಕ್ಕೀಡಾಗುತ್ತೀರಿ’ ಎಂಬ ವುಡ್ರೋ ವಿಲ್ಸನ್ ಮಾತುಗಳು ಶಿಕ್ಷಕರ ಬದುಕಿಗೆ ಹೆಚ್ಚು ಸಮಂಜಸವೆನಿಸುತ್ತವೆ ಅಲ್ಲವೇ?

ವಿದ್ಯಾಥಿಗಳಲ್ಲಿ ರಾಷ್ಟ್ರ ಪ್ರೇಮದ ಬೀಜವನ್ನು ಬಿತ್ತಿ ಪ್ರಬಲ ರಾಷ್ಟ್ರ ಪ್ರಜ್ಞೆ ಜಾಗೃತಗೊಳಿಸಿ ಉತ್ತಮ ದೇಶ ಭಕ್ತರನ್ನು ಬೆಳೆಸುವವರು ಶಿಕ್ಷಕರು. 


ನನ್ನ ಜೀವನದ ಮಾರ್ಗದರ್ಶಿ ನನ್ನ ಶಿಕ್ಷಕರು:-

ನನ್ನ ಜೀವನದಲ್ಲಿ ಇಂದು ನಾನು ಈ ಹಂತದಲ್ಲಿ ಇರಬೇಕಾದರೆ ಇದಕ್ಕೆ ಮೂಲ ಕಾರಣ ನನ್ನ ಶಿಕ್ಷಕರು ಅವರು ಮಾಡಿದ ಪುಸ್ತಕದ ಪಾಠಕ್ಕಿಂತಲೂ ಬದುಕಿನ ಪಾಠ ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರಿಗೆ ಮತ್ತೊಮ್ಮೆ ಶಿಕ್ಷಕ ದಿನಾಚರಣೆಯ ಶುಭ ಹಾರೈಕೆಯನ್ನು ಸಲ್ಲಿಸುತ್ತೇವೆ.

ಒಟ್ಟಾಗಿ ಪ್ರತಿ ದಿನವೂ ಶಿಕ್ಷಕರನ್ನು ಸ್ಮರಿಸುವ ದಿನವಾಗಲಿ.

ಸರ್ಕಾರ ಜನ ಮೆಚ್ಚುಗೆ ಶಿಕ್ಷಕ ಪ್ರಶಸ್ತಿ ನೀಡುವುದಕ್ಕಿಂತ ವಿದ್ಯಾರ್ಥಿಗಳು ಮೆಚ್ಚಿದ ಶಿಕ್ಷಕ ಪ್ರಶಸ್ತಿ ನೀಡಬೇಕಾಗಿದೆ.

✍🏼 ರಾಘವೇಂದ್ರ ಪ್ರಭು ಕವಾ೯ಲು

ಲೇಖಕರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು