ಬ್ರಾಹ್ಮೀ ಸಭಾ ಭವನದಲ್ಲಿ ನಡೆದ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಧ್ಯಾತ್ಮ ಹಾಗೂ ಕಾರ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮೂರು ಜನ ವಿಪ್ರೋ ತ್ತಮರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿಯ ಮಾಜಿ ಶಾಸಕರಾದ ರಘುಪತಿ ಭಟ್, ರೋಬೋಸಾಫ್ಟ್ ಸಂಸ್ಥೆಯ ಹಣಕಾಸು ವಿಭಾಗದ ಎಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಕೃಷ್ಣರಾಜ ರಾವ್, ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ. ಹಾಗೂ ಮಾಜಿ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರು ಉಪಸ್ಥಿತರಿದ್ದರು.
ಶ್ರೀ ಕುದುಕುಳ್ಳಿ ಈಶ್ವರ ದೇವಸ್ಥಾನದ ಅರ್ಚಕ ಮತ್ತು ಪರಿಸರದ ಹಲವು ದೇವಳಗಳ ಬ್ರಹ್ಮಕಲಶದ ಸಂದರ್ಭದಲ್ಲಿ ಅತ್ಯಗತ್ಯವಾದ ಅಷ್ಟಬಂಧ ಒದಗಿಸುವ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿರುವ ವಿಪೋತ್ತಮ ಶ್ರೀ ಸಗ್ರಿ ಅನಂತ ಭಟ್, ಹಲವಾರು ವರ್ಷಗಳಿಂದ ಕಕ್ಕುಂಜೆಯ ಶಿವಳ್ಳಿ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಅರ್ಚಕರಾಗಿದ್ದುಕೊಂಡು ದೇವಳದ ಸರ್ವತೋಮುಖ ಅಭಿವೃದ್ಧಿಗೆ ತನ್ನನ್ನು ಅರ್ಪಿಸಿಕೊಂಡ ಶ್ರೀ ವಿಷ್ಣುಮೂರ್ತಿ ಶಾಸ್ತ್ರಿ ಕಕ್ಕುಂಜೆ, ಮತ್ತು ಪರಿಷತ್ತಿನ ಕಾರ್ಯಕ್ರಮಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ತನ್ನ ಸೇವೆಯನ್ನು ನಿರಂತರ ನೀಡುತ್ತಾ ಬಂದಿರುವ ಹಿರಿಯ ಛಾಯಾಚಿತ್ರಗ್ರಾಹಕರಾದ ರಂಗನಾಥ ಸರಳಾಯ ಇವರಿಗೆ ಪರಿಷತ್ತಿನ ವತಿಯಿಂದ ಗೌರವಾರ್ಪಣೆ ನೀಡಲಾಯಿತು. ಸನ್ಮಾನಿತರ ಪರವಾಗಿ ಋತ್ವಿಜರಾದ ಅನಂತ ಸಗ್ರಿಯವರು ಮಾತನಾಡುತ್ತಾ ದೇವತಾ ಆರಾಧನೆ ಮನುಷ್ಯನನ್ನು ಸಾತ್ವಿಕನನ್ನಾಗಿಸಿ ಜೀವನದಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಸಹಕರಿಸುತ್ತದೆ ಮತ್ತು ಮಾನಸಿಕವಾಗಿ ಸದೃಢನನ್ನಾಗಿಸುತ್ತದೆ ಎಂದು ಹೇಳಿ ಪರಿಷತ್ತಿನ ನಿರಂತರ ಕಾರ್ಯಕ್ರಮಗಳಿಗೆ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಶಕ್ತರಿಗೆ ವೈದ್ಯಕೀಯ ಸಹಾಯಧನ ಹಸ್ತಾಂತರಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ. ಅವರು ಯುವಬ್ರಾಹ್ಮಣ ಪರಿಷತ್ತು ನಡೆದು ಬಂದ ದಾರಿಯ ಬಗ್ಗೆ ಸವಿವರವಾಗಿ ಸಭೆಗೆ ತಿಳಿಸಿದರು. ಕುಮಾರಿ ಶ್ರದ್ಧಾ ಪ್ರಾರ್ಥಿಸಿದರು. ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಅತಿಥಿಗಳಿಗೆ ಶಾಲು ಹೊದಿಸಿ ಹೂವು ನೀಡಿ ಗೌರವಿಸಿದರು. ಸನ್ಮಾನಿತರನ್ನು ವಿಷ್ಣುಪ್ರಸಾದ್ ಪಾಡಿಗಾರು ಪರಿಚಯಿಸಿದರು. ರಾಧಿಕಾ ಚಂದ್ರಕಾಂತ್,ಸುನೀತಾ ಚೈತನ್ಯ, ಜ್ಯೋತಿಲಕ್ಷ್ಮಿ ಸಹಕರಿಸಿದರು. ವಂದನಾರ್ಪಣೆಯನ್ನು ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಮಾಡಿದರು. ವಿವೇಕಾನಂದ ಪಾಂಗಣ್ಣಾಯ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೊನೆಯಲ್ಲಿ ಪರಿಷತ್ತಿನ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
0 ಕಾಮೆಂಟ್‌ಗಳು