Header Ads Widget

​ಪ್ರಧಾನ ಮಂತ್ರಿಗಳ ಜನ್ಮದಿನ: ಪ್ರಸಾದ್ ನೇತ್ರಾಲಯ ವತಿಯಿಂದ ಹುಟ್ಟೂರಲ್ಲಿ 5ನೇ ವರ್ಷದ ಉಚಿತ ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ


ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಗಳು 75ನೇ ಜನ್ಮದಿನ ಆಚರಿಸುತ್ತಿರುವ ಸಂಧರ್ಭದಲ್ಲಿ ಪ್ರಸಾದ್ ನೇತ್ರಾಲಯ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸೆ ಸತತ 5ನೇ ವರ್ಷದ ಶಿಬಿರ ಅವರ ಹುಟ್ಟೂರಾದ ಗುಜರಾತ್ ರಾಜ್ಯದ ವಡ್ ನಗರದಲ್ಲಿ ನಡೆಯಿತು. ವಡ್‌ ನಗರದ ಸರ್ವೊದಯ ಸೇವಾ ಟ್ರಸ್ಟ್, ಒನ್ ಸೈಟ್ ಎಸ್ಸಿಲಾರ್ ಲಕೋಟಿಕಾ ಫೌಂಡೇಶನ್, ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಈ ಶಿಬಿರ ಆಯೋಜಿಸ ಲಾಗಿತ್ತು.


ಪ್ರಧಾನಿಯವರ ಹಿರಿಯ ಸಹೋದರ ಶ್ರೀ ಸೋಮ್ ಭಾಯಿ ಮೋದಿಯವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿ ಡಾ.ಕೃಷ್ಣಪ್ರಸಾದ್ ಕೂಡ್ಲು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅವರು ಮಾತನಾಡುತ್ತಾ, ಜಗತ್ತು ಕಂಡಂತಹ ಅತೀ ವಿಶಿಷ್ಟ ನಾಯಕ ನಮ್ಮ ಪ್ರಧಾನಿ ಶ್ರೀ ನರೇದ್ರ ಮೋದಿಯವರು. 


 ಅವರು ನಮ್ಮ ಭಾರತ ದೇಶವನ್ನು ಆರ್ಥಿಕವಾಗಿ ಹಾಗೂ ತನ್ನ ವಿಶಿಷ್ಟ ಅಂತರರಾಷ್ಟ್ರೀಯ ಪ್ರಭಾವ ದಿಂದ ವಿಶ್ವದ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ. ಇಂತಹ ಜನಸೇವಕರನ್ನು ಪ್ರಧಾನಿಯಾಗಿ ಹೊಂದಿರುವುದು ನಮ್ಮೆಲ್ಲರ ಪುಣ್ಯ. ಅವರ ಜನ್ಮ ದಿನದಂದು ಕಳೆದ 5 ವರ್ಷಗಳಿಂದ ನಮ್ಮ ಆಸ್ಪತ್ರೆ ಹಾಗೂ ಟ್ರಸ್ಟ್ ವತಿಯಿಂದ ಇಲ್ಲಿಯ ಜನರಿಗೆ ನೇತ್ರ ಚಿಕಿತ್ಸೆಯಲ್ಲಿ ನಾವು ನೀಡುತ್ತಿರುವ ಅಳಿಲು ಸೇವೆ. ನಮಗೆ ಸಿಕ್ಕಿರುವ ಅವಕಾಶಕ್ಕಾಗಿ ಕತಜ್ಞರಾಗಿದ್ದೇವೆ.


ಪ್ರಧಾನಿಯವರ ಈ ಸಲದ 'ಸ್ವಸ್ಥ ನಾರೀ- ಸ್ವಸ್ಥ ಪರಿವಾರ' ಘೋಷಣೆಯಡಿಯಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ದೇಶಾದ್ಯಂತ ನಡೆಯುವ ಅಭಿಯಾನದಲ್ಲಿ ಮಹಿಳೆಯರ ಆರೋಗ್ಯ ಹಾಗೂ ಪೌಷ್ಟಿಕತೆಯ ಬಗ್ಗೆ ಕಾಳಜಿ ವಹಿಸಲು ಕರೆ ನೀಡಿದ್ದಾರೆ. ಅಂತೆಯೇ ಈ ಅವಧಿಯಲ್ಲಿ ಸರ್ವೊದಯ ಸೇವಾ ಟ್ರಸ್ಟ್ ಇವರಿಂದ ಸೂಚಿಸಲ್ಪಡುವ ಮಹಿಳೆಯರಿಗೆ ಸಂಪೂರ್ಣ ಉಚಿತ ನೇತ್ರ ಚಿಕಿತ್ಸೆ ನೀಡಲಾಗುವುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿಯವರ ಸಹೋದರ ಪುತ್ರ ಹಾಗೂ ಶ್ರೀ ಜಿತೇಂದ್ರ ಮೋದಿಯವರು ಮಾತನಾಡುತ್ತಾ, ಪ್ರಸಾದ್ ನೇತ್ರಾಲಯವು ಕಳೆದ 5 ವರ್ಷಗಳಿಂದ ಪ್ರಧಾನಿಯವರ ಜನ್ಮ ದಿನದಂದು ನಡೆಸುತ್ತಿರುವ ನೇತ್ರ ಆರೋಗ್ಯ ಶಿಬಿರ ಸೇವೆಯು, ಮಾದರಿ ಜನಸೇವೆಯಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉಡುಪಿಯಿಂದ ಬಹಳ ದೂರದ ಈ ಊರಿಗೆ ಬಂದು ಶಿಬಿರ ನಡೆಸುವುದು ಸಾಮಾನ್ಯ ಕೆಲಸವಲ್ಲ.


 ಅವರ ಈ ಶ್ರಮ ಅಭಿನಂದನಾರ್ಹವಾಗಿದೆ ಎಂದರು. ಅವರ ಈ ಸೇವೆಯು ಸರ್ವೋದಯ ಸೇವಾ ಟ್ರಸ್ಟ್ ನಡೆಸುವ ಜನಪರ ಕಾರ್ಯಗಳಿಗೆ ಅನುಗುಣವಾಗಿದೆ ಎಂದರು.​ ಈ ಸಂಧರ್ಭದಲ್ಲಿ ಇಲ್ಲಿನ ಜ್ಯೋತಿ ಹಾಸ್ಪಿಟಲ್ ಇವರ ಸಹಯೋಗದೊಂದಿಗೆ 'ನೇತ್ರ ದಾನ ಅರಿವು ಜಾಥಾ' ಹಾಗೂ ನೇತ್ರದಾನ ವಾಗ್ದಾನ ಕಾರ್ಯಕ್ರಮಗಳು ನಡೆಯಿತು. ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದರು.


ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 784 ಜನರ ತಪಾಸಣೆ ನಡೆಸಲಾಯಿತು, 574 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು 103 ಜನರನ್ನು ಉಚಿತ ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು.

ಕಾರ್ಯಕ್ರಮದಲ್ಲಿ ಉಂಜಾ ಶಾಸಕ ಶ್ರೀ ಕೀರ್ತಿಭಾಯಿ ಪಟೇಲ್, GMERS ಮೆಡಿಕಲ್ ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಹರ್ಷದ್ ಪಟೇಲ್, GMERS ಮೆಡಿಕಲ್ ಕಾಲೇಜಿನ ಡೀನ್ ಡಾ. ಸುನೀಲ್ ಓಜಾ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.​ ಪ್ರಧಾನಿಗಳ ಜನ್ಮದಿನಾಚರಣೆಯಂದು ವಡ್ ನಗರದಲ್ಲಿ ಈ ವರೆಗೆ ಪ್ರಸಾದ್ ನೇತ್ರಾಲಯ ಉಚಿತ ಶಿಬಿರಗಳ ವಿವರ​. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು