ಆಂಧ್ರಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಇಂದು ಶುಕ್ರವಾರ ಮುಜಾನೆ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ. ಈ ಬಸ್ಸಿನಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ ಎನ್ನಲಾಗಿದೆ.
ಕರ್ನೂಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರ ಚಿನ್ನತೇಕೂರು ಗ್ರಾಮದ ಬಳಿ ಈ ದುರಂತ ನಡೆದಿದ್ದು, ಖಾಸಗಿ ಟ್ರಾವೆಲ್ ಬಸ್ ಬೆಂಕಿಗೆ ಆಹುತಿಯಾಗಿ ಕನಿಷ್ಠ 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಹಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಕಾವೇರಿ ಟ್ರಾವೆಲ್ಸ್ ನಿರ್ವಹಿಸುತ್ತಿದ್ದ ನೋಂದಣಿ ಈ ಬಸ್ ಬೆಂಗಳೂರಿಗೆ ಹೋಗುತ್ತಿದ್ದು, ಇಂದು ನಸುಕಿನ ಜಾವ 3.30 ರ ಸುಮಾರಿಗೆ ಚಿನ್ನತೇಕೂರು ಗ್ರಾಮದ ಬಳಿ ದ್ವಿಚಕ್ರ ವಾಹನವೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಅಪಘಾತದ ಪರಿಣಾಮ ಬೈಕ್ ವಾಹನ ಕೆಳಗೆ ಸಿಲುಕಿದ್ದು, ಬೆಂಕಿ ಕೂಡಲೇ ಹತ್ತಿಕೊಂಡು, ಇಡೀ ಬಸ್ಸನ್ನೇ ವ್ಯಾಪಿಸಿ ಸುಟ್ಟು ಕರಕಲಾಗಿದೆ. ಬಸ್‌ನಲ್ಲಿ ಸುಮಾರು 42 ಮಂದಿ ಪ್ರಯಾಣಿಕರಿದ್ದು, ತುರ್ತು ನಿರ್ಗಮನ ಮತ್ತು ಕಿಟಕಿ ಗಾಜುಗಳನ್ನು ಒಡೆದು 12 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ, ಬೆಂಕಿಯು ವಾಹನವನ್ನು ಸುಟ್ಟು ಹಾಕಿದ್ದರಿಂದ ಹಲವು ಮಂದಿ ಒಳಗೆ ಸಿಲುಕಿಕೊಂಡಿದ್ದರು.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಕರ್ನೂಲ್ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತದ ನಂತರ ಬಸ್ ಚಾಲಕ ಸೇರಿ ಬಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ. ಅಪಘಾತದ ಪರಿಣಾಮ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಗಂಟೆಗಟ್ಟಲೆ ಸಿಲುಕಿ ಪರದಾಡಿದೆ. ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಂತಾಪ ಸೂಚಿಸಿದ್ದಾರೆ. “ಕರ್ನೂಲ್ ಜಿಲ್ಲೆಯ ಚಿನ್ನ ಟೆಕುರು ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ಬೆಂಕಿ ಅಪಘಾತದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಮತ್ತು ಪೀಡಿತ ಕುಟುಂಬಗಳಿಗೆ ಸರ್ಕಾರಿ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಾರೆ” ಎಂದು ನಾಯ್ಡು X ನಲ್ಲಿ ಬರೆದಿದ್ದಾರೆ.

0 ಕಾಮೆಂಟ್‌ಗಳು