ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ಬೆಳಗ್ಗೆ 20 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಬಸ್ ಅಗ್ನಿದುರಂತದ ತನಿಖೆಯು ಹೊಸ ತಿರುವನ್ನು ಪಡೆದುಕೊಂಡಿದೆ. ಅವಘಡ ಸಂಭವಿಸಿದಾಗ ಬಸ್‌ನ ಒಳಗಡೆಯಿರಿಸಲಾಗಿದ್ದ 400 ಸ್ಮಾರ್ಟ್‌ಫೋನ್‌ಗಳ ಸರಕು ಒಮ್ಮೆಗೆ ಸ್ಪೋಟಗೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿಗಳು ಒಮ್ಮೆಗೇ ಸ್ಫೋಟಿಸಿದ್ದರಿಂದ, ಬಸ್ಸನ್ನು ಅವರಿಸಿದ್ದ ಬೆಂಕಿಯ ಜ್ವಾಲೆ ಇನ್ನಷ್ಟು ತೀವ್ರಗೊಂಡಿತೆಂದು ವಿಧಿವಿಧಾನ ತಜ್ಞರು ತಿಳಿಸಿದ್ದಾರೆ.
ಈ ಮೊಬೈಲ್ ಫೋನ್‌ಗಳ ಸರಕನ್ನು ಬೆಂಗಳೂರಿನ ಬೃಹತ್ ಇ-ಕಾಮರ್ಸ್ ಉದ್ಯಮಸಂಸ್ಥೆಯೊಂದು ಅದರ ಗ್ರಾಹಕರಿಗೆ ವಿತರಿಸಲು ತರಿಸಿಕೊಂಡಿತ್ತೆಂದು ತಿಳಿದುಬಂದಿದೆ.
ಬಸ್ ಢಿಕ್ಕಿಹೊಡೆದ ಬೈಕ್ ಇಂಧನ ಟ್ಯಾಂಕ್ ಸ್ಪೋಟಿಸಿದ್ದರಿಂದ ಬಸ್‌ಗೆ ಬೆಂಕಿಹತ್ತಿಕೊಂಡಿದ್ದಾಗಿ ಪ್ರಾಥಮಿಕ ವರದಿಗಳು ತಿಳಿಸಿದ್ದವು. ಆದರೆ ಲಿಥಿಯಮ್ ಇಯೊನ್ ಬ್ಯಾಟರಿಗಳನ್ನು ಒಳಗೊಂಡ 400 ಮೊಬೈಲ್‌ಫೋನ್‌ಗಳ ಸರಕು ಇದ್ದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ಖಾಸಗಿ ದೀರ್ಘ ಸಂಚಾರದ ಬಸ್‌ಗಳಲ್ಲಿ ಗಂಭೀರ ಸುರಕ್ಷತಾ ಲೋಪವಿರುವುದನ್ನು ಹೈದರಾಬಾದ್- ಬೆಂಗಳೂರು ಕಾವೇರಿ ಟ್ರಾವೆಲ್ಸ್ ಬಸ್ ದುರಂತ ಬಯಲುಗೊಳಿಸಿದೆಯೆಂದು ವರದಿಗಳು ತಿಳಿಸಿವೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್‌ಗೆ ಬೈಕ್ ಢಿಕ್ಕಿ ಹೊಡೆದ ಬಳಿಕ ಇಡೀ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದರಿಂದ ಕನಿಷ್ಠ 20 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.
ತುರ್ತು ನಿರ್ಗಮನ ದ್ವಾರದ ವೈಫಲ್ಯ?
ಬಸ್‌ನಲ್ಲಿ ತುರ್ತು ನಿರ್ಗಮನ ದ್ವಾರಗಳು ಕಾರ್ಯನಿರ್ವಹಿಸದಿರುವುದು ಬಸ್ ದುರಂತದ ಭೀಕರತೆಗೆ ಇನ್ನೊಂದು ಕಾರಣವಾಗಿರಬಹುದು. ಆರಾಮದಾಯಕ ಅಥವಾ ವಿಲಾಸಿ ಸೌಲಭ್ಯಗಳಿಗಾಗಿ ಬಸ್‌ನ ವಿದ್ಯುತ್ ವ್ಯವಸ್ಥೆಯಲ್ಲಿ ಅನಧಿಕೃತವಾಗಿ ಬದಲಾವಣೆಗಳನ್ನು ಮಾಡುವುದು ಕೂಡಾ ವಾಹನದಲ್ಲಿ ಅಗ್ನಿದುರಂತಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬಸ್ ಸೇರಿದಂತೆ ವಿವಿಧ ವಾಹನಗಳಲ್ಲಿನ ಹವಾನಿಯಂತ್ರಣ ವ್ಯವಸ್ಥೆಯನ್ನು ನಿಯಮಿತವಾಗಿ ಸರ್ವಿಸಿಂಗ್ ಮಾಡುವ ಅಗತ್ಯವನ್ನು ಕೂಡಾ ತೆಲಂಗಾಣದ ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ವಾಹನಗಳಲ್ಲಿ ಅಧಿಕ ಒತ್ತಡದೊಂದಿಗೆ ಕಾರ್ಯಾಚರಿಸುವ ಹವಾನಿಯಂತ್ರಣ ವ್ಯವಸ್ಥೆಯನ್ನು ನಿಯಮಿತವಾಗಿ ಸರ್ವಿಸಿಂಗ್ ಮಾಡದೆ ಇದ್ದಲ್ಲಿ, ಭಾರೀ ಅಪಾಯಕ್ಕೆ ಕಾರಣವಾಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

0 ಕಾಮೆಂಟ್‌ಗಳು