ಡಾ.ಶಿವರಾಮ ಕಾರಂತ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಅ.10ರಿಂದ 12ರ ವರೆಗೆ ಕಾರಂತ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅ.10ರಂದು ಬೆಳಗ್ಗೆ 10 ಗಂಟೆಯಿಂದ ಎಂಜಿಎಂ ಸಂಧ್ಯಾ ಕಾಲೇಜು ಸಹಯೋಗದಲ್ಲಿ ಯುವ ಬರಹಗಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಅ.11ರಂದು ಸಂಜೆ 4 ಗಂಟೆಗೆ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಕಾರಂತ ಜನ್ಮ ದಿನಾಚರಣೆ, ಸಾಹಿತ್ಯೋತ್ಸವ ಹಾಗೂ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಅವರಿಗೆ ಟ್ರಸ್ಟಿನ ಮೊದಲ ಡಾ. ಶಿವರಾಮ ಕಾರಂತ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸ ಎಸ್.ಕೃಷ್ಣಯ್ಯ, ಕಾರಂತ ಕೃತಿಗಳ ಬಗ್ಗೆ ಸಂಶೋಧನೆ ನಡೆಸಿದ್ದ ಡಾ.ರೇಖಾ ಬನ್ನಾಡಿ ಹಾಗೂ ಯಕ್ಷಗಾನ ಕಲಾವಿದ ಶೇಖ್ ಮಹಮ್ಮದ್ ಗೌಸ್ ಅವರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು.
ಕನ್ನಡದ ಹಿರಿಯ ವಿಮರ್ಶಕ ಡಾ.ಎಸ್.ಆರ್. ವಿಜಯಶಂಕರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಿರ್ದಿಗಂತ ಪ್ರಸ್ತುತಿಯಲ್ಲಿ ಡಾ. ಅಮಿತ್ ರೆಡ್ಡಿ ನಿರ್ದೇಶನದಲ್ಲಿ ಡಾ. ಕಾರಂತರ `ಮೈಮನಗಳ ಸುಳಿಯಲ್ಲಿ' ಕಾದಂಬರಿ ಆಧರಿತ ನಾಟಕ ಪ್ರದರ್ಶನ ನಡೆಯಲಿದೆ.
ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು. ಅ.12ರಂದು ಅಪರಾಹ್ನ 4 ಗಂಟೆಗೆ ಕಾರ್ಕಳ ರಂಗಾಯಣದಲ್ಲಿ ಟ್ರಸ್ಟ್ ಸಹಯೋಗದೊಂದಿಗೆ ಉಪನ್ಯಾಸ ಮತ್ತು ಕಾರಂತ ರಂಗ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎಕ್ಕಾರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ, ಕಾರ್ಕಳ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್, ಟ್ರಸ್ಟ್ ಸದಸ್ಯರಾದ ಸತೀಶ್ ಕೊಡವೂರು ಮತ್ತು ಜೆ.ಎಂ.ಶರೀಫ್ ಹೂಡೆ ಇದ್ದರು.
0 ಕಾಮೆಂಟ್‌ಗಳು