ಕನ್ನಡ ನಾಡಿನ ಮರುಹುಟ್ಟಿನ ದಿನವಾದ ನ. 1ರಂದು ನಾವೆಲ್ಲರೂ ಯಾವುದೇ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ.
ಜಗತ್ತಿನ ಶ್ರೇಷ್ಠ ಭಾಷೆಯಲ್ಲಿ ಒಂದು ನಮ್ಮ ಕನ್ನಡ: -
ಸುಮಾರು ಎರಡೂವರೆ ಸಹಸ್ರಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ಇದು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಆದರೆ ಬೇಸರದ ವಿಷಯವೆಂದರೆ ಈಗಿನ ಪೋಷಕರು ಹಾಗೂ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಅಷ್ಟೊಂದು ಕಾಳಜಿ ಇರುವಂತೆ ಕಾಣಿಸುತ್ತಿಲ್ಲ. ಶಾಲೆಯಲ್ಲಿ ಬಿಡಿ…. ಮನೆಗಳಲ್ಲೂ ಕೂಡ ಮಕ್ಕಳಲ್ಲಿ ಕನ್ನಡ ಮಾತನಾಡದಂತೆ ತಾಕೀತು ಮಾಡುವುದು ಆಶ್ಚರ್ಯಕರ. ಆಧುನಿಕತೆಯ ಹೆಸರಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದು ಎಷ್ಟು ಸರಿ? ಇಂಗ್ಲಿಷ್ ಬೇಕು, ಆದರೆ ನಮ್ಮ ಮಾತೃಭಾಷೆ ಕನ್ನಡ ನಿರಂತರವಾಗಿರಬೇಕು.
ಕನ್ನಡವನ್ನು ಪ್ರೀತಿಸಿ - ಕನ್ನಡವನ್ನು ಬಳಸಿ :-
ಕನ್ನಡ ಭಾಷೆ ಬೆಳೆಯುತ್ತದೆ.ಪರ ಭಾಷೆ ಮೇಲೆ ಅಭಿಮಾನ ಇರಲಿ ಮೋಹ ಬೇಡ. ಕನ್ನಡ ನನ್ನ ಉಸಿರು ಎಂದು ಕೇವಲ ಬಾಯಿಮಾತಿಗೆ ಸೀಮಿತವಾಗದಿರಲಿ ಬದಲಾಗಿ ನಿಜವಾಗಿಯೂ ಕನ್ನಡ ಪ್ರತಿಯೊಬ್ಬರ ಉಸಿರಲ್ಲಿ ಬೆರೆತು ಹೋಗಲಿ. ಇಂದು ನಮ್ಮವರೇ ನಮ್ಮ ಭಾಷೆ ಮಾತನಾಡಲೂ ಹಿಂದೇಟು ಹಾಕುವ ಪರಿಸ್ಥಿತಿಯಲ್ಲಿ ಪರ ಭಾಷೆಯವರು ನಮ್ಮ ಭಾಷೆಯನ್ನು ಪ್ರೀತಿಸಿ, ಗೌರವಿಸಿ ನಮ್ಮ ಭಾಷೆಯನ್ನು ಕಲಿಯುತ್ತಿರುವುದು ಅದ್ಭುತ. "ವಿಶ್ವ ಲಿಪಿಗಳ ರಾಣಿ"ಎಂದು ಬಿರುದು ಪಡೆದು ಕೊಂಡಿರುವ ನಮ್ಮ ಭಾಷೆಯನ್ನು ಪ್ರೀತಿಸಿ, ಗೌರವಿಸೋಣ.
ಕನ್ನಡ'ವೆಂಬುದೇ ಒಂದು ರೀತಿಯ ಸಂತಸದ ಭಾವನೆ.: -
ಆಲಿಸಲು ಮಧುರ, ನುಡಿಯಲು ಸುಮಧುರ ಅದುವೇ ನಮ್ಮ ಹೆಮ್ಮೆಯ ಭಾಷೆ ಕನ್ನಡ. ಆದರೆ ಕಾಲ ಚಲಿಸುತ್ತಿದಂತೆ ಕನ್ನಡವು ಮಾಸುತ್ತಲೇ ಬರುತ್ತಿದೆ. ಈಗಿನ ಡಿಜಿಟಲ್ ಎ ಐ ಯುಗದಲ್ಲಿ ಕನ್ನಡ ಜೀವಂತವಾಗಿಯೇ ಉಳಿದಿದೆಯೆಂದರೆ ಅದಕ್ಕೆ ಪ್ರಮುಖ ಕಾರಣ ಹಳ್ಳಿಗಳು. ಪಟ್ಟಣಗಳಲ್ಲೇನೋ ಅಭಿವೃದ್ಧಿಯಾಗುತ್ತಲೇ ಇದೆ. ಆದರೆ ಭಾಷೆಯ ವಿಚಾರ ಬಂದಾಗ ನಮ್ಮ ನಾಡಿನ ಭಾಷೆಗಿಂತ ಆಂಗ್ಲ ಭಾಷೆಯ ದರ್ಬಾರೇ ಹೆಚ್ಚಿದೆ.
ರಾಜ್ಯೋತ್ಸವ ಒಂದು ದಿನ ಹಬ್ಬವಲ್ಲ :-
ಹಚ್ಚಹಸುರಿನ ಸುಂದರ ಬೆಟ್ಟಗಳು,ಪವಿತ್ರ ನದಿಗಳು, ಪ್ರೇಕ್ಷಣೀಯ ದೇವಾಲಯಗಳು,ಸಾಧು ಸಂತರು,ಹಲವಾರು ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಆಂಗ್ಲಭಾಷೆಯ ನಾಡಾಗಲು ಹೆಚ್ಚು ಸಮಯ ಬೇಡವೇನೋ!. ಕನ್ನಡವನ್ನು ಮಾತನಾಡಿದರೆ ಎಲ್ಲಿ ನಮ್ಮನ್ನು ಗೇಲಿ ಮಾಡುತ್ತಾರೋ ಎಂದು ಒತ್ತಡಪೂರ್ವಕವಾಗಿ ಇಂಗ್ಲಿಷ್ ನುಡಿಯುವ ಜನಗಳು ಒಂದೆಡೆಯಾದರೆ, ಇಂಗ್ಲಿಷಿನಲ್ಲಿಯೇ ದಿನಗಳನ್ನು ಸಾಗಿಸುತ್ತಿರುವ ಐಟಿ ಬಿಟಿ ಕಂಪನಿಗಳು, ಪ್ರತಿಷ್ಠಿತ ಶಾಲಾ, ಕಾಲೇಜುಗಳು ಒಂದೆಡೆ.
ಒಟ್ಟಿನಲ್ಲಿ ನಮ್ಮ ಭಾಷೆ,ನಾಡಿನ ಬಗ್ಗೆ ಪ್ರೀತಿ, ಕಾಳಜಿಯಿರುವ ಮನಸುಗಳಿಂದ ಮಾತ್ರ ನಮ್ಮ ಕರುನಾಡಿನ ಕನ್ನಡದ ರಕ್ಷಣೆ
ಸಾಧ್ಯವಾದೀತು. ಈ ರಾಜ್ಯೋತ್ಸವ ಒಂದು ದಿನ ಭರ್ಜರಿಯಾಗಿ ಆಚರಿಸಿ ಕನ್ನಡವನ್ನು ಮರೆತರೆ ನಾವು ಕನ್ನಡ ಮಾತೆಗೆ ದ್ರೋಹ ಬಗೆದಂತೆ ಹೀಗಾಗಿ ರಾಜ್ಯೋತ್ಸವ ಪ್ರತಿದಿನವೂ ನಮ್ಮ ಮನೆ ಮನೆಗಳಲ್ಲಿ ಆಚರಿಸುವಂತಾಗಬೇಕು. ಮುಖ್ಯವಾಗಿ ಸರ್ಕಾರದ ಮಟ್ಟದಲ್ಲಿ ಎಲ್ಲಾ ಪತ್ರ ವ್ಯವಹಾರ ಅದೇ ರೀತಿ ಕಾನೂನಿನಲ್ಲಿ ಕೂಡ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕು ನಮ್ಮ ಪಕ್ಕದ ರಾಜ್ಯದ ಜನರ ಭಾಷಾ ಪ್ರೇಮ ನೋಡಿದಾಗ ನಾವು ತುಂಬಾ ದೂರ ಇದ್ದೇವೆ ಎಂದು ಅನಿಸುತ್ತದೆ. ನಾವೆಲ್ಲರೂ ಕೂಡ ನಮ್ಮ ಭಾಷೆ ಸಂಸ್ಕೃತಿ ನಾಡು ನುಡಿಗಾಗಿ ಒಂದಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡೋಣ"
✍🏼ಲೇಖನ: - ರಾಘವೇಂದ್ರ ಪ್ರಭು ಕವಾ೯ಲು
ಲೇಖಕ

0 ಕಾಮೆಂಟ್‌ಗಳು