ಅಲ್ಪಸಂಖ್ಯಾತರ ವೋಟ್ ಬ್ಯಾಂಕಿಗಾಗಿ ಭಯೋತ್ಪಾದಕರಿಗೂ ಬೆಂಗಾವಲಾಗಿ ನಿಲ್ಲುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಗೆ ದೇಶ ರಕ್ಷಣೆಯ ವಿಚಾರದಲ್ಲಿ ಬಿಜೆಪಿ ಪಕ್ಷದ ಮುಖಂಡರನ್ನು ಟೀಕಿಸುವ ನೈತಿಕತೆಯೇ ಇಲ್ಲ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿರುವ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇ ಸತ್ಯಾಸತ್ಯತೆ ತಿಳಿಯಲಿದೆ.
ಕಾಂಗ್ರೆಸ್ ಪಕ್ಷದ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾಗಿ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ವಿಫಲರಾಗಿರುವ ರಮೇಶ್ ಕಾಂಚನ್ ಅವರು ಗೃಹ ಲಕ್ಷ್ಮೀ ಯೋಜನೆಯ ಹಣ ಪಾವತಿ ಬಗ್ಗೆ ರಾಜ್ಯದ ಜನತೆಗೆ ಸದನದಲ್ಲಿ ತಪ್ಪು ಮಾಹಿತಿ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ದಿವ್ಯ ಮೌನ ವಹಿಸಿ, ಇದೀಗ ಬಿಜೆಪಿ ನಾಯಕರನ್ನು ಟೀಕಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ.
ರಮೇಶ್ ಕಾಂಚನ್ ಮಾಲೀಕತ್ವದ ಮಣಿಪಾಲದ ಮಸಾಜ್ ಸೆಂಟರ್ ನ ಚಟುವಟಿಕೆಗಳ ಬಗ್ಗೆಯೂ ಹಲವಾರು ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿರುವುದು ವಾಸ್ತವ. ಜಿಲ್ಲೆಯ ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೇಂದ್ರಗಳಾಗಿದ್ದು ಕಾಂಗ್ರೆಸ್ ಪಕ್ಷದ ಕಲೆಕ್ಷನ್ ಸೆಂಟರ್ ಗಳಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದ್ದಾರೆ ಎಂಬಂತಹ ವಿಚಾರಗಳನ್ನು ಸಾರ್ವಜನಿಕರು ಮಾತನಾಡುವ ಪರಿಸ್ಥಿತಿ ಉಡುಪಿಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಸೃಷ್ಟಿಯಾಗಿದೆ.
ದೇಶ ಭಕ್ತರನ್ನೊಳಗೊಂಡಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಗೆ ದೇಶ ಭಕ್ತಿ, ದೇಶದ ಭದ್ರತೆಯ ಬಗ್ಗೆ ಪೊಳ್ಳು ಉಪದೇಶ ಮಾಡುವ ಅರ್ಹತೆ ರಮೇಶ್ ಕಾಂಚನ್ ಅವರಿಗಿಲ್ಲ. ರಮೇಶ್ ಕಾಂಚನ್ ರಂತಹ ಕಾಂಗ್ರೆಸ್ ಮುಖಂಡರ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಉಡುಪಿಯ ಜನತೆ ರೋಸಿ ಹೋಗಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. ಇತ್ತೀಚೆಗೆ ಉಡುಪಿಯಲ್ಲಿ ವೋಟ್ ಚೋರಿ ಪ್ರಹಸನದ ಬಗ್ಗೆ ಬೃಹತ್ ಮಾನವ ಸರಪಳಿ ನಿರ್ಮಿಸಲು ವಿಫಲ ಯತ್ನ ನಡೆಸಿ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿ ಪಕ್ಷದ ಮುಖಂಡರಿಂದಲೇ ಬೈಗುಳ ತಿಂದಿರುವ ರಮೇಶ್ ಕಾಂಚನ್ ಇದೀಗ ಕೇವಲ ಪ್ರಚಾರದ ತೆವಲಿಗೆ ಇಂತಹ ಕ್ಷುಲ್ಲಕ ಹೇಳಿಕೆ ನೀಡುತ್ತಿರುವುದು ಅನುಕಂಪ ಮೂಡಿಸುತ್ತಿದೆ ಎಂದು ಅಭಿರಾಜ್ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 ಕಾಮೆಂಟ್‌ಗಳು