ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ, ಬಿದ್ಕಲ್ ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಕಿಶೋರ ಯಕ್ಷಗಾನ ಸಂಭ್ರಮ ೧೯.೧೨.೨೦೨೫ರಂದು ಸಮಾಪನಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಎಚ್. ಶಂಕರ ಹೆಗ್ಡೆ ಮಾತನಾಡಿ ಇದು 'ಯಕ್ಷಶಿಕ್ಷಣ ಟ್ರಸ್ಟ್ ' ನಮ್ಮೂರಿನ ಮಕ್ಕಳಿಗೆ ಒದಗಿಸಿದ ಅತ್ಯುತ್ತಮ ಅವಕಾಶ. ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊoಡದ್ದನ್ನು ಕೇಳಿ ಬಹಳ ಸಂತೋಷವಾಯಿತು. ಊರಿನ ಜನ ಹಬ್ಬದಂತೆ ಆಚರಿಸಿದ್ದಾರೆ. ನಮ್ಮ ಕಲೆಯನ್ನು ಪ್ರೋತ್ಸಾಹಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿಯವರು ಯಕ್ಷಗಾನ ಕಲಾರಂಗದ ಸಾಮಾಜಿಕ, ಸಾಂಸ್ಕೃತಿಕ ಬಹುಮುಖಿ ಕಾರ್ಯಕ್ರಮ ನೋಡಿ ಅಭಿಮಾನವಾಗುತ್ತದೆ. ಇದೊಂದು ಅನನ್ಯ ಸಂಘಟನೆ ಎಂದು ಅಭಿಪ್ರಾಯ ಪಟ್ಟರು. ಇಂಜಿನೀಯರ್ ಪ್ರಶಾಂತ್ ಮಳವಳ್ಳಿ, ಪಂಚಾಯತ್ ಉಪಾಧ್ಯಕ್ಷ ಗಣೇಶ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಹಿರಿಯ ಕಾರ್ಯಕರ್ತ ಯು. ಎಸ್. ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಂದಾರ ಉಡುಪ, ವಿಘ್ನೇಶ, ತನಿಷಾ, ರಕ್ಷಿತಾ, ಅಕ್ಷತಾ, ಸಮೀಕ್ಷಾ ಯಕ್ಷಗಾನ ಕಲಿಕೆಯಿಂದ ತಮಗಾದ ಪ್ರಯೋಜನವನ್ನು ಸೊಗಸಾಗಿ ಹಂಚಿಕೊAಡರು. ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಯಪ್ರಕಾಶ ಶೆಟ್ಟಿ ಸ್ವಾಗತಿಸಿದರು. ನಾರಾಯಣ. ಎಂ. ಹೆಗಡೆ ವಂದಿಸಿದರು. ದಯಾನಂದ ಮಳವಳ್ಳಿ, ರಂಜಿತ್ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಕುಂದಾಪುರ ವಿಧಾನಸಭಾ ಕ್ಷೇತ್ರದ ೨೧ ಪ್ರೌಢಶಾಲೆಗಳ ಯಕ್ಷಶಿಕ್ಷಣದ ಕಲಿಕಾವೆಚ್ಚವನ್ನು ಸ್ವಂತ ಚೆಕ್ ನೀಡಿ ಬರಿಸಿದ್ದಲ್ಲದೆ ಮೂರು ಕಡೆಗಳಲ್ಲಿ ಪ್ರದರ್ಶನದ ಏರ್ಪಾಡು ಮಾಡುವಲ್ಲಿ ವಿಶೇಷ ಆಸ್ಥೆ ವಹಿಸಿ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿ, ಪ್ರಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್ ಕಟ್ಟೆ ಇಲ್ಲಿನ ವಿದ್ಯಾರ್ಥಿಗಳಿಂದ 'ದ್ರೌಪದಿ ಪ್ರತಾಪ' ಸುಂದರವಾಗಿ ಪ್ರಸ್ತುತಗೊಂಡಿತು.

0 ಕಾಮೆಂಟ್‌ಗಳು