Header Ads Widget

ಗಣಿತ ಬೋಧನೆಯಲ್ಲಿ ಕಲಿಕೋಪಕರಣಗಳ ಬಳಕೆಯ ಬಗೆಗಿನ ಒಂದು ದಿನದ ಕಾರ್ಯಾಗಾರ

ಕಲಿಕೆ ಒಂದು ನಿರಂತರ ಪ್ರಕ್ರಿಯೆ. ಯಾವನೇ ಒಬ್ಬ ವ್ಯಕ್ತಿ ತನ್ನ ಕಲಿಕೆ ಮುಗಿಯಿತೆಂದು ಹೇಳಿದರೆ, ಅವನಿಗೆ ಏನೂ ತಿಳಿದಿಲ್ಲವೆಂದು ಅರ್ಥ. ಪ್ರಾಧ್ಯಾಪಕ ವೃತ್ತಿಯಲ್ಲಿ ಜ್ಞಾನ ಸಂಗ್ರಹ ಅತಿ ಮುಖ್ಯ. ಒಬ್ಬ ವ್ಯಕ್ತಿ ಕಲಿತಾಗ ಮಾತ್ರ ಇನ್ನೊಬ್ಬರಿಗೆ ಕಲಿಸಬಲ್ಲ. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರು ಸದಾ ಜಾಗೃತರಾಗಿರಬೇಕು. ಗಣಿತ ಬೋಧನೆಯಲ್ಲಿ ‘ಕಲಿಕೋಪಕರಣಗಳ ಬಳಕೆಯಿಂದ’ ವಿದ್ಯಾರ್ಥಿಗಳಿಗೆ ವಿಷಯ ತಿಳಿಸುವುದು ಸುಲಭ. ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಾಗಾರ ಅತೀ ಮಹತ್ವದ್ದು. ಕಾರ್ಯಾಗಾರದ ಲಾಭವನ್ನು ಆಗಮಿಸಿದ ಬೋಧಕರು ಸಂಪೂರ್ಣವಾಗಿ ಪಡೆಯಬೇಕೆಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಕೌನ್ಸಿಲ್‌ನ ಅಧ್ಯಕ್ಷರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ‘ಕಾರ್ಯಾಗಾರ’ ಉದ್ಘಾಟಿಸಿ ಕರೆ ನೀಡಿದರು. 

ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರ, ರಾಜಮೋಹನ ವಾರಂಬಳ್ಳಿ ಸಾಮಾಜಿಕ ಸಬಲೀಕರಣ ಅಧ್ಯಯನ ಪೀಠ, ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಪೂರ್ಣಪ್ರಜ್ಞ ಕಾಲೇಜಿನ ಗಣಿತ ಸ್ನಾತಕೋತ್ತರ ವಿಭಾಗ ಹಾಗೂ ಪೂರ್ಣಪ್ರಜ್ಞ ಸಂಶೋಧನ ಮತ್ತು ಅಭಿವೃದ್ಧಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಹಾಗೂ ಬ್ರಹ್ಮಾವರ ಶಿಕ್ಷಣ ವಲಯಗಳ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ಗಣಿತ ಬೋಧಕರಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಶ್ರೀಪಾದರು ಮಾತನಾಡಿದರು.

ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊತಾಯ ಸರ್ವರನ್ನೂ ಸ್ವಾಗತಿಸಿ, ಕಾರ್ಯಾಗಾರದ ಉದ್ದಿಶ್ಯ ತಿಳಿಸಿ, ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. 

ರಾಜಮೋಹನ ವಾರಂಬಳ್ಳಿ ಸಾಮಾಜಿಕ ಸಬಲೀಕರಣ ಅಧ್ಯಯನ ಪೀಠದ ದಾನಿ ಶ್ರೀ ರಾಮಮೋಹನ ವಾರಂಬಳ್ಳಿ ಹಾಗೂ ಉಡುಪಿ ಡಯಟ್ ಪ್ರಾಂಶುಪಾಲರಾದ ಡಾ | ಅಶೋಕ್ ಕಾಮತ್ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಶ್ರೀಪಾದರು ಹರಸಿದರು.

ಕಾರ್ಯಕ್ರಮ ಪ್ರಾಯೋಜಕರಾದ ಶ್ರೀ ರಾಜಮೋಹನ ವಾರಂಬಳ್ಳಿ ತಮ್ಮ ವಿದೇಶೀ ಹಾಗೂ ಸ್ವದೇಶೀ ಅನುಭವ ತಿಳಿಸುತ್ತಾ, ಈ ತೆರನಾದ ಕಾರ್ಯಕ್ರಮಗಳ ಪ್ರಾಮುಖ್ಯತೆಯನ್ನು ಅರುಹಿ, ಇಂತಹ ಚಟುವಟಿಕೆಗಳಿಗೆ ಹಣ ಪೂರೈಸುವುದು ತಮ್ಮ ಸೌಭಾಗ್ಯವೆಂದರು. 

ಡಯಟ್ ಪ್ರಾಂಶುಪಾಲ ಡಾ | ಅಶೋಕ್ ಕಾಮತ್ ಕಾರ್ಯಾಗಾರದ ವಿನ್ಯಾಸ ಹಾಗೂ ಅನುಷ್ಠಾನದ ಬಗೆಗೆ ತಿಳಿಸಿದರು. 

ಪೂರ್ಣಪ್ರಜ್ಞ ಇನ್ಸಿಟ್ಯೂಟ್‌ನ ನಿರ್ದೇಶಕ ಡಾ | ಶ್ರೀರಮಣ ಐತಾಳ್ ಶಿಬಿರಾರ್ಥಿಗಳು ಕಾರ್ಯಾಗಾರದ ಸಂಪೂರ್ಣ ಲಾಭ ಪಡೆಯುವಂತೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ, ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಕೌನ್ಸಿಲ್‌ನ ಗೌರವ ಕಾರ್ಯದರ್ಶಿ ಪ್ರೊ. ಎ.ಪಿ ಭಟ್ ಮಾತನಾಡಿ, ಪ್ರಾಧ್ಯಾಪಕರು ಮಕ್ಕಳ ಮನ ಗೆಲ್ಲುವ, ತನ್ಮೂಲಕ ಅವರಿಗೆ ಅಗತ್ಯ ವಿಚಾರವನ್ನು ಬೋಧಿಸುವ ತಂತ್ರಗಾರಿಕೆ ಪಡೆದುಕೊಳ್ಳಬೇಕೆಂದರು. ಪ್ರಸ್ತುತ ಕಾರ್ಯಾಗಾರ ಮಕ್ಕಳಿಗೆ ಸುಲಭ ಮಾರ್ಗದಲ್ಲಿ ಗಣಿತ ಅರ್ಥ ಮಾಡಿಸುವ ತಂತ್ರಗಾರಿಕೆ ತಿಳಿಸುತ್ತದೆಂದರು. ಇಂತಹಾ ಅಪರೂಪದ ಕಾರ್ಯಾಗಾರದ ಲಾಭವನ್ನು ಶಿಬಿರಾರ್ಥಿಗಳು ಸಂಪೂರ್ಣವಾಗಿ ಪಡೆಯಬೇಕೆಂದು ಹಾರೈಸಿದರು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್ ಹಾಗೂ ಪೂರ್ಣಪ್ರಜ್ಞ ಕಾಲೇಜು ಆಡಳಿತ ಸಮಿತಿಯ ಗೌರವ ಕೋಶಾಧಿಕಾರಿ ಸಿಎ ಪ್ರಶಾಂತ್ ಹೊಳ್ಳ ಉಪಸ್ಥಿತರಿದ್ದರು. 

ಪೂರ್ಣಪ್ರಜ್ಞ ಕಾಲೇಜಿನ ಸ್ನಾತಕೋತ್ತರ ಗಣಿತ ವಿಭಾಗದ ಸಂಯೋಜಕ ಡಾ | ಸುಧಾಕರ್ ಅಭಾರ ಸಲ್ಲಿಸಿದರು. ಅದೇ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ | ರಕ್ಷಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. 

ಸಂಪನ್ಮೂಲ ವ್ಯಕ್ತಿಗಳಾದ ಡಾ | ಅಶೋಕ್ ಕಾಮತ್, ಶ್ರೀ ಶಶಿ ಶಂಕರ್ ಹಾಗೂ ಶ್ರೀ ಯೋಗಾನರಸಿಂಹ ಸ್ವಾಮಿ ವಿವಿಧ ಅವಧಿಗಳನ್ನು ನಡೆಸಿಕೊಟ್ಟರು. ೧೦೦ ಕ್ಕೂ ಹೆಚ್ಚು ಗಣಿತ ಪ್ರಾಧ್ಯಾಪಕರು, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಕಾರ್ಯಾಗಾರದ ಲಾಭ ಪಡೆದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು