Header Ads Widget

ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸದನದಲ್ಲಿ ತಪ್ಪು ಮಾಹಿತಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವ ಸ್ಥಾನದಿಂದ ವಜಾಗೊಳಿಸಿ : ಸಂಧ್ಯಾ ರಮೇಶ್ ಆಗ್ರಹ

ವಿಧಾನಸಭಾ ಅಧಿವೇಶದನದಲ್ಲಿ ಫಲಾನುಭವಿಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಖಾತೆಗೆ ವರ್ಗಾವಣೆ ಮಾಡಿರುವುದಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನು ತಕ್ಷಣ ಸಂಪುಟದಿಂದ ವಜಾ ಮಾಡುವಂತೆ ಉಡುಪಿ ಜಿಲ್ಲಾ ಬಿಜೆಪಿ ಮಹಿಳಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಗ್ರಹಿಸಿದ್ದಾರೆ.

ಓರ್ವ ಜವಾಬ್ದಾರಿಯುತ ಸಚಿವರಾಗಿ ಸದನದಲ್ಲಿ ತಪ್ಪು ಮಾಹಿತಿ ನೀಡಿರುವುದು ಅಕ್ಷಮ್ಯ ಅಪರಾಧ. ರಾಜ್ಯದ ಮಹಿಳೆಯರ ಬಗ್ಗೆ ವಿಪರೀತ ಕಾಳಜಿ ತೋರುವ ನಾಟಕ ಮಾಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ತಪ್ಪು ಮಾಹಿತಿ ನೀಡಿ ರಾಜ್ಯದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಭರವಸೆಯ ಮೂಲಕವೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಇದೀಗ ಈ ಯೋಜನೆಗಳನ್ನು ಅನುಷ್ಟಾನ ಮಾಡಲು ವಿಫಲರಾಗಿ ಸುಳ್ಳು ಮಾಹಿತಿ ನೀಡುವ ಹಂತಕ್ಕೆ ಬಂದಿದ್ದು ವಿಪರ್ಯಾಸ.

ಉಡುಪಿಯ ಪ್ರಸಾದ್ ಕಾಂಚನ್ ಪ್ರತಿದಿನ ಶಾಸಕರ ವಿರುದ್ಧ ಬೇಜವಾಬ್ದಾರಿ ಹೇಳಿಕೆ ನೀಡಿ ಜನತೆಯ ಕಿವಿಗೆ ಹೂ ಇಡುವ ಬದಲು ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡಿರುವ ಉಡುಪಿ ಜಿಲ್ಲೆಗೆ ಅತಿಥಿಯಾಗಿರುವ ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರಬುದ್ಧತೆ ಮೆರೆಯಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು