ನಮ್ಮ ಒಂದು ಓಟಿನಿಂದ ಏನಾಗುತ್ತದೆ ಎಂದು ಪ್ರಶ್ನಿಸುವವರಿಗೆ ಈ ಝುಬೈರ್ ಮತ್ತು ಮೊಯ್ದು ಕುಟ್ಟಿ ಎಂಬ ಸಹೋದರರು ಎಂದೂ ಮರೆಯಲಾಗದ ಉತ್ತರವನ್ನು ಕೊಟ್ಟಿದ್ದಾರೆ.
ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸುವುದಕ್ಕಾಗಿ ಇವರಿಬ್ಬರೂ ವಿದೇಶದಿಂದ ಕೇರಳಕ್ಕೆ ಬಂದಿದ್ದರು. ಇವರಲ್ಲಿ ಝುಬೇರ್ ಶಾರ್ಜಾದಲ್ಲಿ ಕೆಪಿಟೇರಿಯದ ಮಾಲೀಕರಾಗಿದ್ದರೆ, ದುಬೈ ಎಲೆಕ್ಟ್ರಿಸಿಟಿ ಅಂಡ್ ವಾಟರ್ ಅಥಾರಿಟಿಯಲ್ಲಿ ಇವರ ಸಹೋದರ ಮೊಯ್ದು ಕುಟ್ಟಿ ಉದ್ಯೋಗಿಯಾಗಿದ್ದಾರೆ. ಇವರಿಬ್ಬರ ಸಹೋದರಿ ಝುಹ್ರಾಬಿ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ಮಲಪುರಂ ಕಲ್ಚಗಂಟೇರಿ ಪಂಚಾಯತ್ ನ ಏಳನೇ ವಾರ್ಡಿನಲ್ಲಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ತನ್ನ ಸಹೋದರಿಯನ್ನು ಗೆಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದ ಈ ಇಬ್ಬರು ಸಹೋದರರು ಮತದಾನ ಮಾಡುವುದಕ್ಕಾಗಿ ವಿಮಾನವೇರಿದ್ದಾರೆ. ಕೇರಳಕ್ಕೆ ಬಂದು ಮತ ಚಲಾಯಿಸಿ ಮರಳಿ ಗಲ್ಫ್ ರಾಷ್ಟ್ರಕ್ಕೆ ತೆರಳುವುದಕ್ಕೆ ಕನಿಷ್ಠವೆಂದರೂ ಒಬ್ಬೊಬ್ಬರಿಗೆ ತಲಾ ಐವತ್ತು ಸಾವಿರಕ್ಕಿಂತಲೂ ಅಧಿಕ ಖರ್ಚಾಗುತ್ತದೆ ಅನ್ನುವುದು ಇವರಿಬ್ಬರಿಗೂ ಗೊತ್ತಿತ್ತು. ಆದರೂ, ತಮ್ಮ ಎರಡು ಮತಗಳಿಂದ ಏನಾಗಲಿಕ್ಕಿದೆ ಎಂದವರು ಆಲೋಚಿಸಲಿಲ್ಲ. ಮತದಾನದ ಸಮಯದಲ್ಲಿ ಇವರಿಬ್ಬರೂ ಕೇರಳ ತಲುಪಿದ್ದರು. ತಂಗಿಗಾಗಿ ಮತವನ್ನೂ ಚಲಾಯಿಸಿದರು. ಅಚ್ಚರಿಯೇನೆಂದರೆ, ಈ ಝುಹ್ರಾಬಿ ಗೆದ್ದದ್ದು ಎರಡೇ ಎರಡು ವೋಟಿಗೆ. ಅಂದರೆ ತನ್ನ ಸಹೋದರರು ಚಲಾಯಿಸಿದ ಎರಡೇ ಎರಡು ವೋಟುಗಳೇ ಝುಹ್ರಾಬಿಯನ್ನು ಗೆಲ್ಲಿಸಿದೆ.
ಸದ್ಯ 7ನೇ ವಾರ್ಡಿನಲ್ಲಿ ಈ ಇಬ್ಬರು ಸಹೋದರರೇ ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಗೆದ್ದ ಝುಹ್ರಾಬಿಗಿಂತ ಇವರಿಬ್ಬರದ್ದೇ ಹವಾ ಜೋರಾಗಿದೆಯಂತೆ.

0 ಕಾಮೆಂಟ್‌ಗಳು